Connect with us

Bengaluru City

ರಾಜ್ಯದ ಬಹುತೇಕ ಕಡೆಗಳಲ್ಲಿ ವರುಣನ ಅಬ್ಬರ ಜೋರು- ಹಲವೆಡೆ ಅನಾಹುತ

Published

on

Share this

ಬೆಂಗಳೂರು: ರಾಜ್ಯದಲ್ಲಿ ಪುನರ್ವಸು ಮಳೆ ಅಬ್ಬರ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಲ್ಲದೆ ಇನ್ನೂ ಎರಡ್ಮೂರು ದಿನಗಳ ಕಾಲ ವರುಣನ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉಡುಪಿ, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕಲಬುರಗಿ, ಹಾಸನ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವೆಡೆ ಮಳೆ ಅಬ್ಬರಿಸಿ ಬೊಬ್ಬಿರಿದಿದೆ. 10 ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಉಡುಪಿಯ ಕೆಲವೆಡೆ ಪ್ರವಾಹ ಸ್ಥಿತಿ ಏರ್ಪಟ್ಟಿದ್ದು, ಕಾಪು ಮಜೂರು, ಮಠದ ಬೆಟ್ಟು, ಕಲ್ಸಂಕ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಹಾವುಗಳು ಸಹ ತೇಲಿ ಬರುತ್ತಿವೆ. ಜನಜೀವನ ಅಸ್ತವ್ಯವಸ್ತವಾಗಿದೆ. ಕಾಪುವಿನಲ್ಲಿ ಅನಾರೋಗ್ಯಪೀಡಿತ ಮಹಿಳೆಯನ್ನು ಸುರಕ್ಷಿತ ಪ್ರದೇಶಕ್ಕೆ ಜನ ಹೊತ್ತು ಸಾಗಿಸಿದ್ದಾರೆ. ನದಿ ತೊರೆಗಳು ತುಂಬಿ ತುಳುಕುತ್ತಿದ್ದು, ಗದ್ದೆಗಳು ಜಲಾವೃತ ಆಗಿವೆ. ಜಿಲ್ಲೆಯಲ್ಲಿ ಮುಂದಿನ ಮೂರು ದಿನ ಆರೆಂಜ್ ಅಲರ್ಟ್ ವಿಸ್ತರಣೆ ಮಾಡಲಾಗಿದೆ.

ಮಳೆ ಆರ್ಭಟಕ್ಕೆ ಉತ್ತರ ಕನ್ನಡದ ಭಟ್ಕಳ ಜಲಾವೃತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 66ರ ಸಂಶುದ್ದೀನ್ ವೃತ್ತ, ರಂಗಿನಕಟ್ಟೆ, ಚೌಥನಿ ಗ್ರಾಮದಲ್ಲಿ ಮಳೆಯಿಂದಾಗಿ ನೀರು ನಿಂತಿದೆ. ನಗರದ ಬಹುತೇಕ ರಸ್ತೆಗಳು ಜಲಾವೃತವಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ರಸ್ತೆಯಲ್ಲಿಯೇ ಜನ ಮೀನುಗಳಿಗೆ ಗಾಳ ಹಾಕುತ್ತಿದ್ದಾರೆ. ತಗ್ಗು ಪ್ರದೇಶದ ದೇಗುಲ, ಮನೆಗಳಿಗೆ ನೀರು ನುಗ್ಗಿದ್ದು, ಜನ ಕಂಗೆಟ್ಟಿದ್ದಾರೆ. ನಿರಂತರ ಮಳೆಯಿಂದ ಶರಾಬಿ ನದಿ ಉಕ್ಕಿ ಹರಿಯುತ್ತಿದೆ.

ದಾವಣಗೆರೆಯಲ್ಲಿ ರಾತ್ರಿಯಿಡಿ ಸುರಿದ ಮಳೆ ಪ್ರವಾಹ ಸ್ಥಿತಿ ನಿರ್ಮಿಸಿದೆ. ಕೊಂಡಜ್ಜಿ ಬಳಿಯ ಕೆಇಬಿ ಸಬ್ ಸ್ಟೇಷನ್ ಮುಳುಗಡೆ ಹಂತ ತಲುಪಿ, ಸಿಬ್ಬಂದಿ ಹೊರಬರಲಾಗದೇ ಒದ್ದಾಡಿದ್ದಾರೆ. ಬಳಿಕ ಅಗ್ನಿಶಾಮಕ ದಳ ಕಾರ್ಯಚರಣೆ ಮಾಡಿ, ಇಬ್ಬರನ್ನು ರಕ್ಷಿಸಿತು. ಕೃಷಿ ಕೇಂದ್ರವೂ ಸಂಪೂರ್ಣವಾಗಿ ನೀರಿಂದ ಆವೃತವಾಗಿತ್ತು. ಹರಪನಹಳ್ಳಿ ತಾಲೂಕಿನಲ್ಲಿ ನೂರಾರು ಎಕರೆ ಜಮೀನುಗಳನ್ನು ಮಳೆ ನೀರು ಆವರಿಸಿದೆ. ಅಡಿಕೆ ತೋಟ, ಮೆಕ್ಕೆಜೋಳ, ಚೆಂಡು ಹೂ ಸಂಪೂರ್ಣ ನಾಶವಾಗಿವೆ. ಜಗಳೂರಿನ ತುಪ್ಪದಹಳ್ಳಿ ಕೆರೆ, ಕಾಡಜ್ಜಿ ಕೆರೆ, ಹರಪನಹಳ್ಳಿಯ ಕಲ್ಲಹಳ್ಳಿ, ಕುರೇಮಾಗನಹಳ್ಳಿ, ಕೆಂಚಾಪುರ, ಸೇರಿ ಹಲವು ಕೆರೆಗಳು ಭರ್ತಿ ಆಗಿವೆ. ಹರಪ್ಪಹಳ್ಳಿಯ ಚಟ್ನಹಳ್ಳಿ ಕರೆ ಒಂದೇ ದಿನದ ಮಳೆಗೆ ಕೋಡಿ ಬಿದ್ದಿದೆ. ಪಣಿಯಾಪುರದ ಕೆಂಚಪ್ಪನಿಗೆ ಸೇರಿದ 9 ಮೇಕೆ ಸಾವನ್ನಪ್ಪಿವೆ.

ತಡರಾತ್ರಿ ಸುರಿದ ಮಳೆಗೆ ಚಿತ್ರದುರ್ಗದ ತಗ್ಗು ಪ್ರದೇಶದಲ್ಲಿರುವ ಹಲವು ಮನೆಗಳಿಗೆ ನೀರು ನುಗ್ಗಿದೆ. ಅದರಲ್ಲೂ ಗುಮಾಸ್ತ ಕಾಲೋನಿಯಲ್ಲಿರುವ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಚರಂಡಿಗಳು ಭರ್ತಿಯಾಗಿ, ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಚಳ್ಳಕೆರೆಯ ತಪ್ಪಗೊಂಡನಹಳ್ಳಿಯಲ್ಲಿ ಜಮೀನುಗಳಿಗೆ ಮಳೆ ನೀರು ನುಗ್ಗಿದೆ. ಈರುಳ್ಳಿ, ಮೆಕ್ಕೆಜೋಳ, ಟೊಮೆಟೊ ಬೆಳೆ ಮುಳುಗಡೆ ಆಗಿವೆ. ಹಲವು ಚೆಕ್‍ಡ್ಯಾಂಗಳು ಭರ್ತಿ ಆಗಿವೆ. ರಸ್ತೆಗಳಲ್ಲಿ ನೀರು ಹರಿಯುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ ಧಾರಕಾರ ಮಳೆಯಾಗಿದ್ದು, ಜಕ್ಕಲಮಡುಗು ಜಲಾಶಯಕ್ಕೆ ಭಾರೀ ನೀರು ಹರಿದುಬರುತ್ತಿದೆ. ಕೆರೆ ಕುಂಟೆಗಳು ತುಂಬಿ ಹರಿದಿವೆ.ಮೈಲಪ್ಪನಹಳ್ಳಿಯಲ್ಲಿ ರೈತರು ಬೆಳೆದ ತರಕಾರಿ ಹೂ ಬೆಳೆಗಳು ಜಲಾವೃತವಾಗಿವೆ. ನಂದಿಗಿರಿಧಾಮದ ಕಾರಹಳ್ಳಿ ಕ್ರಾಸ್ ಬಳಿ ಎರಡು ಬೃಹತ್ ನೀಲಗಿರಿ ಮರಗಳು ಧರೆಗುರುಳಿದ್ದು, ಭಾರೀ ವಾಹನಗಳ ಒಡಾಟಕ್ಕೆ ಬ್ರೇಕ್ ಬಿದ್ದಿದೆ.

ಕಲಬುರಗಿ ಜಿಲ್ಲೆಯ ವಿವಿಧಡೆ ವರುಣನ ಆರ್ಭಟ ಮುಂದುವರೆದಿದ್ದು, ಚಿಂಚೋಳಿಯ ದೇಗಲ್ಮಡಿ ಗ್ರಾಮದ ಸೇತುವೆ ಮುಳುಗಡೆಯಾಗಿದ್ದು, ವಾಹನ ಸಂಚಾರ ಬಂದ್ ಆಗಿದೆ.

ಹಾಸನದ ಸಕಲೇಶಪುರದಲ್ಲಿ ಭಾರೀ ಮಳೆಯಿಂದ ರಸ್ತೆ ಪಕ್ಕ ಕಾಮಗಾರಿಗಾಗಿ ಹಾಕಿದ್ದ ಮಣ್ಣು ಕುಸಿದಿದೆ. ಈ ಭಾಗದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗೆ ಅಂತ ಮಣ್ಣು ಸಂಗ್ರಹಿಸಲಾಗಿತ್ತು. ಇದು ಕೊಚ್ಚಿ ಹೋಗಿ, ಕೃತಕ ಕಂದಕ ನಿರ್ಮಾಣವಾಗಿದೆ. ಪಕ್ಕದಲ್ಲೇ ಇದ್ದ ಕಾಫಿ, ಮೆಣಸು ತೋಟ ಬಹುತೇಕ ಹಾಳಾಗಿದೆ. ಇನ್ನು ಅರಕಲಗೂಡಿನ ರಾಮನಾಥಪುರ ಬಳಿಯ ಕಟ್ಟೆಪುರ ಅಣೆಕಟ್ಟು ತುಂಬಿ ಹರಿಯುತ್ತಿದ್ದು, ಕಾವೇರಿ ವಯ್ಯಾರ ನೋಲು ಎರಡು ಕಣ್ಣು ಸಾಲದಾಗಿವೆ.

ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮುಂದುವರಿದಿದೆ. ತುಂಗ-ಭದ್ರಾ, ಹೇಮಾವತಿ ನದಿಗಳು, ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ಮಧ್ಯೆ, ಮಳೆ ನಡುವೆಯೇ ಪ್ರವಾಸಿಗರ ಆಗಮನ ಹೆಚ್ಚಿದೆ. ಚಾರ್ಮಾಡಿ ಘಾಟ್‍ನಲ್ಲಿ ಪ್ರವಾಸಿಗರು ಕುಣಿದು ಕುಪ್ಪಳಿಸುತ್ತಿದ್ದಾರೆ.

ಮಳೆಗಾಲ ಶುರುವಾದರೆ ಸಾಕು ಕೊಡಗಿನಲ್ಲಿ ಗಿರಿಕಾನನದ ನಡುವಿನಿಂದ ಧುಮ್ಮಿಕ್ಕುವ ಜಲಧಾರೆಗಳ ವಯ್ಯಾರವನ್ನು ನೋಡುವುದೇ ಚೆಂದ. ಅಬ್ಬಿ ಜಲಪಾತ, ಮೇದೂರ ಜಲಪಾತ, ಕರ್ನಾಟಕದ ನಾಯಾಗಾರ ಚಿಕ್ಲಿ ಹೊಳೆ. ಅಬ್ಬಾ ಒಂದಾ ಎರಡಾ, ಹತ್ತಾರು ಜಲಪಾತಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

Click to comment

Leave a Reply

Your email address will not be published. Required fields are marked *

Advertisement