Connect with us

Bengaluru City

ಬೆಂಗಳೂರಲ್ಲಿ ವರುಣನ ಅವಾಂತರ -ನದಿಯಂತಾಯ್ತು ರಸ್ತೆ, ಅಡಿಯುದ್ದ ನೀರು

Published

on

– ಇಲಾಖೆಯಿಂದ ರಾಜ್ಯಾದ್ಯಂತ ಹೈ ಅಲರ್ಟ್

ಬೆಂಗಳೂರು: ಮಂಗಳವಾರ ಸುರಿದ ಗುಡುಗು, ಸಿಡಿಲು ಸಹಿತ ಮಳೆ ಗಾಳಿಗೆ ಬೆಂಗಳೂರಿಗರು ತತ್ತರಿಸಿ ಹೋಗಿದ್ದಾರೆ. ಮಂಗಳವಾರ ಸಂಜೆ ವೇಳೆಗೆ ಶುರುವಾದ ಮಳೆ ರಾತ್ರಿ ಸುಮಾರು 11 ಗಂಟೆವರೆಗೂ ಎಡೆಬಿಡದೆ ಧಾರಾಕಾರವಾಗಿ ಸುರಿದಿದೆ.

ಯಶವಂತಪುರ, ಮಲ್ಲೇಶ್ವರಂ, ನವರಂಗ್, ವಿಜಯನಗರ, ರಾಜಾಜಿನಗರ, ಸದಶಿವನಗರ, ಹೆಬ್ಬಾಳ, ನಾಗವಾರ, ಮೆಜೆಸ್ಟಿಕ್, ಇಂದ್ರನಗರ, ನೆಲಮಂಗಲ ಸೇರಿದಂತೆ ಹಲವು ಕಡೆ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಆಯಿತು. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿತ್ತು. 40ಕ್ಕೂ ಹೆಚ್ಚು ಕಡೆ ಮರಗಳು ಧರೆಗೆ ಉರುಳಿದ್ದು, ಹಲವು ಕಡೆಗಳಲ್ಲಿ ಕಾರು, ಬೈಕ್‍ಗಳ ಮೇಲೆ ಮರ ಬಿದ್ದು ವಾಹನಗಳು ಜಖಂ ಆಗಿತ್ತು. ಇದು ನದಿಯೋ ರಸ್ತೆಯೋ ಎಂಬಂತೆ ರಸ್ತೆಯಲ್ಲಿ ಅಡಿಯುದ್ದ ನೀರು ಹರಿದು, ವಾಹನ ಸವಾರರು ಪರದಾಡಿದ್ದರು.

ಮಳೆ ಸುರಿಯುತ್ತಿದ್ದ ವೇಳೆ ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಗಳಿಗೆ ಹಾನಿ ಆಗಿತ್ತು. ಅದರಿಂದಾಗಿ ನಗರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ದೊಡ್ಡಬಿದರಕಲ್ಲಿನಲ್ಲಿ ಅತಿಹೆಚ್ಚು ಅಂದರೆ 147 ಮಿಲಿಮೀಟರ್ ಮಳೆ ಆಗಿದೆ. ಚಿಕ್ಕಬಿದರಕಲ್ಲಿನಲ್ಲಿ 97 ಮಿ.ಮೀಟರ್ ಮಳೆ, ಸಿಡೆದಹಳ್ಳಿಯಲ್ಲಿ 90 ಮಿ.ಮೀಟರ್ ಮಳೆ, ಪೀಣ್ಯಾ, ಮಾದಾವರದಲ್ಲಿ 88 ಮಿ.ಮೀಟರ್ ಮಳೆ, ಸಾರಕ್ಕಿ, ಬಸವನಗುಡಿಯಲ್ಲಿ 64 ಮಿ.ಮೀಟರ್ ಮಳೆ, ಗಾಳಿ ಆಂಜನೇಯ ದೇಗುಲದ ಬಳಿ 55 ಮಿ.ಮೀ ಮಳೆಯಾಗಿದೆ.

ಇಂದು ನಾಳೆ ಕೂಡ ಗುಡುಗು ಸಿಡಿಲು ಸಹಿತ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನ ಬಿಟಿಎಂ ಲೇಔಟ್‍ನ 29ನೇ ಮುಖ್ಯ ರಸ್ತೆಯಲ್ಲಿ ಸೌಪರ್ಣಿಕಾ ಅಪಾರ್ಟ್ ಮೆಂಟ್‍ಗೆ ಮಳೆ ನೀರು ನುಗ್ಗಿದೆ. ಡ್ರೈನೇಜ್ ಪೈಪ್ ಒಡೆದ ಪರಿಣಾಮ ಪಾರ್ಕಿಂಗ್ ಲಾಟ್‍ನಲ್ಲಿ ಐದು ಅಡಿಯಷ್ಟು ನೀರು ನಿಂತಿತ್ತು. ಹಲವು ವಾಹನಗಳು ನೀರಿನಲ್ಲಿ ಮುಳುಗಿವೆ. ಇನ್ನು ಜಯನಗರದ ಸೌಥ್ ಎಂಡ್ ಸರ್ಕಲ್ ಬಳಿಯ ರಣಧೀರ ಕಂಠೀರವ ಪಾರ್ಕ್ ಮತ್ತು ಬಸವನಗುಡಿಯ ಆರ್ಮುಗಂ ಸರ್ಕಲ್ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ಸ್ಥಳಕ್ಕೆ ಬಂದ ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದ್ದರು.

ಗಾಯಿತ್ರಿ ನಗರದಲ್ಲಿ ಬೃಹತ್ ಮರ ಬಿದ್ದು ಹತ್ತಾರು ದ್ವಿಚಕ್ರ ವಾಹನಗಳು ಜಖಂ ಆಗಿವೆ. ಒಂದೇ ಕಡೆ ಮೂರು ಮರಗಳು ಬಿದ್ದು, ಅನಾಹುತ ಸಂಭವಿಸಿದೆ. ಅವಘಡದಲ್ಲಿ ಪೂಜಾ ಅನ್ನೋ ಯುವತಿ ತಲೆಗೆ ಪೆಟ್ಟು ಬಿದ್ದಿದೆ. ಪೂಜಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಮಹಿಳೆ ಸಹ ಗಾಯಗೊಂಡಿದ್ದಾರೆ. ಇನ್ನು ಮರ ಬಿದ್ದು ರಸ್ತೆ ಬಂದ್ ಆದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಳೆದ ವರ್ಷ ಮಳೆಯಿಂದಾಗಿ ರಸ್ತೆಗಳು ಗುಂಡಿ ಬಿದ್ದು ಅಮಾಯಕ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದರು. ಹೈಕೋರ್ಟ್ ಛೀಮಾರಿ ಹಾಕಿದ್ದರೂ ಪಾಲಿಕೆ ಎಚ್ಚೆತ್ತುಕೊಂಡಿಲ್ಲ. ನಿನ್ನೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿಯಲ್ಲಿ ರಸ್ತೆಯೊಂದು ಅಕ್ಷರಃ ಕೊಚ್ಚಿಹೋಗಿದೆ.

ಯಶವಂತಪುರದಿಂದ ಮಲ್ಲೇಶ್ವರಂಗೆ ಹೋಗುವ ರಸ್ತೆಯಲ್ಲಿ ಭಾರೀ ಹೊಂಡವೊಂದು ಸೃಷ್ಟಿಯಾಗಿದೆ. ಸುಮಾರು ಮೂರ್ನಾಲ್ಕು ಅಡಿಯಷ್ಟು ದೊಡ್ಡ ಗುಂಡಿ ಬಿದ್ದಿದೆ. ಇತ್ತ ಭಾರೀ ಮಳೆಯಿಂದಾಗಿ ರಾಜಾಜಿನಗರದ ಮುಖ್ಯರಸ್ತೆಗಳು ನದಿಯಂತಾಗಿತ್ತು. ಗುಡುಗು ಸಿಡಿಲಿನ ಆರ್ಭಟಕ್ಕೆ ವಿದ್ಯುತ್ ಕೈ ಕೊಟ್ಟಿತ್ತು. ಕತ್ತಲಲ್ಲಿ ನೀರಿನ ಮಧ್ಯೆ ವಾಹನ ಸವಾರರು ಪರದಾಡಿದ್ದರು. ಮಳೆಯ ಅವಾಂತರಕ್ಕೆ ರಸ್ತೆಗಳೆಲ್ಲಾ ಜಲಾವೃತವಾದರೆ, ವಾಹನಗಳು ಮುಳುಗಡೆ ಆಗುತ್ತಿದ್ದವು. ತುಮಕೂರು ರಸ್ತೆಯ ಪೀಣ್ಯ ಎಸ್‍ಆರ್‍ಎಸ್ ಬಸ್ ಸ್ಟಾಪ್ ಬಳಿ ನೀರು ತುಂಬಿದೆ. ವೈಟ್‍ಫೀಲ್ಡ್ ಮುಖ್ಯರಸ್ತೆ ಸಂಪೂರ್ಣ ಜಲಾವೃತವಾಗಿತ್ತು.