Connect with us

Karnataka

ಕುರಿಗಳನ್ನು ಬಿಟ್ಟು ಬರೋದಿಲ್ಲ- ಕುರಿಗಾಯಿಯನ್ನು ನಡುಗಡ್ಡೆಯಿಂದ ರಕ್ಷಿಸಲು ಸಿಬ್ಬಂದಿ ಹರಸಾಹಸ

Published

on

– ಐದು ದಿನಗಳಿಂದ ನಡುಗಡ್ಡೆಯಲ್ಲೇ ಸಿಲುಕಿದ್ದ ಕುರಿಗಾಯಿ
– ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್‍ನಿಂದ ಕಾರ್ಯಾಚರಣೆ
– 2 ಲಕ್ಷ ಕ್ಯೂಸೆಕ್ ನೀರಿನಲ್ಲಿ ಸಾಹಸಮಯ ಕಾರ್ಯಾಚರಣೆ

ಯಾದಗಿರಿ: ಕಳೆದ ಐದು ದಿನಗಳಿಂದ ನಡುಗಡ್ಡೆಯಲ್ಲೇ ಸಿಲುಕಿರುವ ಕುರಿಗಾಯಿ ಮನ ಒಲಿಸಲು ಎನ್‍ಡಿಆರ್‍ಎಫ್ ಸಿಬ್ಬಂದಿ ಹರಸಾಹಸ ಪಟ್ಟಿದ್ದು, ಜಪ್ಪಯ್ಯ ಅಂದರೂ ಕುರಿಗಾಯಿ ಮಾತ್ರ ತನ್ನ ಕುರಿಗಳನ್ನು ಬಿಟ್ಟು ಬರುವುದಿಲ್ಲ ಎಂದು ಹಠ ಹಿಡಿದಿದ್ದರು. ಸುಮಾರು 2 ಲಕ್ಷ ಕ್ಯೂಸೆಕ್ ನೀರು ದಾಟಿ ಎನ್‍ಡಿಆರ್‍ಎಫ್ ತಂಡ ಕುರಿಗಾಯಿ ಇರುವ ನಡುಗಡ್ಡೆ ಸ್ಥಳವನ್ನು ತಲುಪಿದ್ದು, ಕುರಿಗಾಯಿಯನ್ನು ಮನವೊಲಿಸಿ ರಕ್ಷಣಾ ಕಾರ್ಯ ಮಾಡಿದ್ದಾರೆ.

ಜಿಲ್ಲೆಯ ನಾರಾಯಣಪುರದ ಐಬಿ ತಾಂಡ ಬಳಿಯ ಕೃಷ್ಣಾ ನದಿಯಲ್ಲಿ ಕುರಿಗಾಯಿ ಸಿಲುಕಿದ್ದರು. ರಕ್ಷಣಾ ತಂಡ ಕುರಿಗಾಯಿ ಟೋಪಣ್ಣ ಮನವೊಲಿಸಿ ನದಿಯ ಒಂದು ದಡಕ್ಕೆ ಕರೆ ತಂದಿದ್ದು, ನಡುಗಡ್ಡೆಯಲ್ಲಿದ್ದ ಶ್ವಾನದೊಂದಿಗೆ ಟೋಪಣ್ಣನನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ. ಕುರಿಗಳನ್ನು ನಡುಗಡ್ಡೆಯಲ್ಲೇ ಬಿಟ್ಟು ಟೋಪಣ್ಣನನ್ನು ರಕ್ಷಣೆ ಮಾಡಲಾಗಿದೆ. ಯಾವುದೇ ಅಪಾಯವಿಲ್ಲದೆ ಕುರಿಗಾಯಿ ರಕ್ಷಣೆ ಮಾಡಲಾಗಿದ್ದು, 2 ಲಕ್ಷ ಕ್ಯೂಸೆಕ್ ನೀರಿನಲ್ಲಿ ರೋಚಕ ಕಾರ್ಯಾಚರಣೆ ಮೂಲಕ ಕುರಿಗಾಯಿ ಮತ್ತು ನಾಯಿಯನ್ನು ರಕ್ಷಣೆ ಮಾಡಲಾಗಿದೆ.

ಸುರಕ್ಷಿತವಾಗಿ ದಡ ಸೇರಿಸಿದ ಎನ್‍ಡಿಆರ್‍ಎಪ್ ತಂಡಕ್ಕೆ ಸ್ಥಳೀಯರು ಜಯ ಘೋಷ ಕೂಗಿದ್ದಾರೆ. ಶಾಸಕ ರಾಜೂಗೌಡ ಸಹ ರಕ್ಷಣಾ ತಂಡಕ್ಕೆ ಸನ್ಮಾನ ಮಾಡಿದ್ದಾರೆ. ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ಎರಡೂ ತಂಡಗಳಿಗೆ ಅಗ್ನಿ ಶಾಮಕದಳದ ಸಿಬ್ಬಂದಿ ಸಹಾಯ ಮಾಡಿದ್ದಾರೆ.

ಕುರಿಗಾಯಿ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಕಳೆದ ಐದು ದಿನಗಳಿಂದ ಸಿಲುಕಿದ್ದರು. 250 ಕುರಿ, ನಾಲ್ಕು ನಾಯಿ ಜೊತೆ ಸಿಲುಕಿದ್ದರು. ಶನಿವಾರ ಸಂಜೆ ಡ್ರೋಣ್ ಮೂಲಕ ಕುರಿಗಾಯಿ ಸಿಲುಕಿರುವ ಸ್ಥಳ ಪತ್ತೆಯಾಗಿತ್ತು. ಇದೀಗ ಕಾರ್ಯಾಚರಣೆ ನಡೆಸಿ ಕುರಿಗಾಯಿ ಮತ್ತು ಕುರಿಗಳ ರಕ್ಷಣೆ ಮಾಡಲಾಗಿದೆ.

Click to comment

Leave a Reply

Your email address will not be published. Required fields are marked *