Bengaluru City
ಕರಾವಳಿ, ದಕ್ಷಿಣ ಒಳನಾಡು ಭಾಗದಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಇಂದು ರಾತ್ರಿ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ದಕ್ಷಿಣ ಕೊಂಕಣ, ಗೋವಾ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾಧಾರಣದಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯ ಪೂರ್ವ ಕೇಂದ್ರೀಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ಪಶ್ಚಿಮದಿಂದ ವಾಯುವ್ಯದೆಡೆಗೆ ಕಳೆದ ಆರು ಗಂಟೆಗಳಿಂದ ಗಂಟೆಗೆ 17 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದೆ. ಇಂದು ಬೆಳಗ್ಗೆ 5:30ಕ್ಕೆ ವಿಶಾಖಪಟ್ಟಣಂನಿಂದ ದಕ್ಷಿಣ-ನೈಋತ್ಯಕ್ಕೆ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ಆಂಧ್ರಪ್ರದೇಶದ ಕಾಕಿನಾಡ ಸಮೀಪದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಹೇಳಿದೆ.
ಇತ್ತೀಚಿಗೆ ಆಂಧ್ರಪ್ರದೇಶದ ಉತ್ತರ ಕರಾವಳಿಯನ್ನು ದಾಟಿ, ಕಾಕಿನಾಡದ ಮೂಲಕ ಗಂಟೆಗೆ ಸುಮಾರು 55 ರಿಂದ 65 ಕಿಲೋಮೀಟರ್ ವೇಗದಲ್ಲಿ ಸಾಗಿ ಹಾದು ಹೋಗಿದೆ. ಈ ವಾಯುಭಾರ ಕುಸಿತವನ್ನು ಮಚಲಿಪಟ್ಟಣಂ, ವಿಶಾಖಪಟ್ಟಣಂ, ಗೋಪಾಲಪುರದಲ್ಲಿ ರೇಡಾರ್ ಮೂಲಕ ನಿಗಾವಹಿಸಲಾಗಿತ್ತು. ರೇಡಾರ್ ಸಂಗ್ರಹಿಸಿರುವ ದೃಶ್ಯಗಳಂತೆ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳು ಮತ್ತು ಅದಕ್ಕೆ ಹೊಂದಿಕೊಂಡ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬುಧವಾರ ಕರ್ನಾಟಕದ ಕರಾವಳಿ, ಉತ್ತರ ಒಳನಾಡು, ಗೋವಾ, ಕೊಂಕಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಾಧಾರಣದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿರುಗಾಳಿ ಗಂಟೆಗೆ 55 ರಿಂದ 65 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದ್ದು, ನಂತರ ಅದರ ತೀವ್ರತೆ ತಗ್ಗಲಿದೆ.
ಬಂಗಾಳಕೊಲ್ಲಿಯ ವಾಯುವ್ಯಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿನ ಹಾಗೂ ಒಡಿಶಾ, ಆಂಧ್ರ, ತಮಿಳುನಾಡು, ಪುದುಚೆರಿಗಳಲ್ಲಿ ಸಮುದ್ರದ ಸ್ಥಿತಿಗತಿ, ಏರಿಳಿತ ಇಂದು ಮತ್ತು ನಾಳೆ ಗಂಭೀರವಾಗಿರಲಿದೆ.
ಬಂಗಾಳಕೊಲ್ಲಿಗೆ ಹೊಂದಿಕೊಂಡಿರುವ ವಾಯವ್ಯ ಮತ್ತು ಈಶಾನ್ಯ ಭಾಗದ ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಪುದುಚೆರಿ ಕರಾವಳಿಗಳಲ್ಲಿ ಮೀನುಗಾರರು ನೀರಿಗೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ.
