Thursday, 16th August 2018

Recent News

ರಾಜ್ಯಾದ್ಯಂತ ಭಾರೀ ಮಳೆ- ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಯುವಕ ಸಿಡಿಲಿಗೆ ಬಲಿ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಶುರುವಾಗಿದೆ. ಖಾಸಗಿ ಹವಾಮಾನ ಅಧ್ಯಯನ ಸಂಸ್ಥೆ ಸ್ಕೈಮೆಟ್ ಪ್ರಕಾರ ಸೋಮವಾರವೇ ಕೇರಳಕ್ಕೆ ಮುಂಗಾರು ಕಾಲಿಟ್ಟಿದೆ. ಆದರೆ ಹವಾಮಾನ ಇಲಾಖೆ ಪ್ರಕಾರ ಇವತ್ತು ಅಧಿಕೃತವಾಗಿ ಮಾನ್ಸೂನ್ ವರ್ಷಧಾರೆ ಶುರುವಾಗಲಿದೆ.

ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಬೆಳಗಾವಿ ಹಾಗೂ ಮಂಡ್ಯದಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಉಡುಪಿ, ಚಾಮರಾಜನಗರ, ತುಮಕೂರು, ಕಾರವಾರದಲ್ಲೂ ಭಾರೀ ಮಳೆಯಿಂದ ಹಾನಿ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮದ ಹೊರವಲಯದಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಯುವಕನಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಶಾಂತಪ್ಪ ಚುಳಕಿ(18) ಸಾವನ್ನಪ್ಪಿದ ಯುವಕನಾಗಿದ್ದು, ಈತ ಮರದ ಕೆಳಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ನಿಂತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಕಿತ್ತೂರ ತಹಶಿಲ್ದಾರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಬಸವನಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ರೈತ ಮಹಿಳೆ ಗಿರಿಜಮ್ಮ(35) ಬಲಿಯಾಗಿದ್ದಾರೆ. ಸಂಜೆ ಆರು ಗಂಟೆಯಲ್ಲಿ ಈ ಅವಘಡ ನಡೆದಿದೆ. ಮನೆಯ ಹಿಂದಿನ ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯಲ್ಲಿಯೂ ವರ್ಷಧಾರೆ ಮತ್ತೆ ಮುಂದುವರಿದಿದೆ. ದಿನವಿಡೀ ಮೋಡ ಕವಿದಿದ್ದ ವಾತಾವರಣವಿದ್ದು, ಸೋಮವಾರ ತಡರಾತ್ರಿ ಗಾಳಿ ಸಹಿತ ಭಾರೀ ಮಳೆಯಾಗಿತ್ತು. ಸಂಜೆಯಾಗುತ್ತಿದ್ದಂತೆಯೇ ಮಳೆ ಸುರಿದಿದ್ದು, 24 ಗಂಟೆ ವಿದ್ಯುತ್ ಸಂಪರ್ಕವಿರಲಿಲ್ಲ. ಉಡುಪಿ, ಕಾಪು ತಾಲೂಕಿನಲ್ಲಿ ಇನ್ನೂ ವಿದ್ಯುತ್ ಪೂರೈಕೆ ಲಭ್ಯವಾಗಿಲ್ಲ. ಸದ್ಯ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ರಿಪೇರಿಯಲ್ಲಿ ತೊಡಗಿದ್ದಾರೆ. ಮುಂದುವರೆದ ಮಳೆಯಿಂದಾಗಿ ಕರ್ತವ್ಯಕ್ಕೆ ಅಡ್ಡಿಯಾಗಿದ್ದು, ನಾಳೆಯವರೆಗೂ ವಿದ್ಯುತ್ ಪೂರೈಕೆ ಅಲಭ್ಯ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕಳೆದ ಒಂದು ವಾರದಿಂದ ಚಾಮರಾಜನಗರ ಜಿಲ್ಲೆಯಾದ್ಯಂತ ವರುಣ ಆರ್ಭಟ ಜೋರಾಗಿದೆ. ಮಳೆಯ ಆರ್ಭಟದಿಂದ ಜಿಲ್ಲೆಯ ಪ್ರಕೃತಿ ಸಂಪತ್ತು ಹಸಿರಾಗಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇನ್ನೂ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆಗಳು ಕೆರೆಯಂತಾಗಿದೆ. ರಸ್ತೆಯಲ್ಲಿ ನೀರು ನಿಂತ ಕಾರಣ ಸವಾರರು ಪರದಾಟ ಅನುಭವಿಸುತ್ತಿದ್ದಾರೆ.

ಬಿಸಿಲ ಧಗೆಯಿಂದ ಬಸವಳಿದಿದ್ದ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಕಳೆದ ಎರಡು ದಿನದಿಂದ ವರುಣ ಕೃಪೆ ತೋರಿದ್ದಾನೆ. ಕಾರವಾರ ಜಿಲ್ಲೆಯಾದ್ಯಾಂತ ಮುಂಜಾನೆಯಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಕಾರವಾರ ನಗರದ ನಂದನಗದ್ದಾ ಅಂಬೇಡ್ಕರ್ ಕಾಲೋನಿಯ ದೀಪಕ್ ಗಣಪತಿ ಉಳ್ಸವಾರ್ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದ್ದು, ಮನೆಯ ಮಾಡಿ ಸಂಪೂರ್ಣ ಜಖಂ ಆಗಿದೆ. ಪರಿಣಾಮ ಒಂದು ಲಕ್ಷ ರುಪಾಯಿಯಷ್ಟು ಹಾನಿಯಾಗಿದೆ. ಇನ್ನೂ ಕಾರವಾರ ಕಡಲತೀರದಲ್ಲಿ ಬಿರುಸಿನ ಗಾಳಿ ಬೀಸುತಿದ್ದು, 5 ಅಡಿಗಳಷ್ಟು ಅಲೆಗಳು ಅಪ್ಪಳಿಸುತ್ತಿದ್ದು, ಪ್ರವಾಸಿಗರಿಗೆ ಹಾಗೂ ಮೀನುಗಾರರಿಗೆ ಸಮುದ್ರದ ಬಳಿ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ತುಮಕೂರು ಜಿಲ್ಲೆಯಲ್ಲಿ ಬಿರುಗಾಳಿ ಅವಾಂತರ ಸೃಷ್ಠಿಸಿದ್ದು, ತುರುವೇಕೆರೆ ತಾಲೂಕಿನ ದುಂಡಾ ಗ್ರಾಮದಲ್ಲಿ ಮರ ಮುರಿದು ಓರ್ವ ಸಾವು, ಮತ್ತೊರ್ವನಿಗೆ ಗಾಯ ಹಾಗೂ ಎರಡು ಎಮ್ಮೆಗಳು ಮೃತಪಟ್ಟಿವೆ. ನಡೆದಿದೆ. ಹೇಮಂತ್(38) ಸ್ಥಳದಲ್ಲೇ ಸಾವನ್ನಪ್ಪಿದ ಯುವಕನಾಗಿದ್ದು, ಮರ ಮುರಿದು ತಲೆ ಮೇಲೆ ಬಿದ್ದ ಪರಿಣಾಮ ಹೇಮಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೋಟದಿಂದ ಮನೆಗೆ ನಡೆದುಕೊಂಡು ಬರುವಾಗ ಈ ಅವಘಡ ಸಂಭವಿಸಿದೆ. ಇನ್ನೂ ಚೇಳೂರಿನಲ್ಲಿ ಎರಡು ಗುಡಿಸಲು ಮೇಲೆ ಬೇವಿನ ಮರ ಮುರಿದು ಬಿದ್ದಿದ್ದು, ರಂಗನಾಥ ಎಂಬವರಿಗೆ ಗಾಯ, ಎರಡು ಎಮ್ಮೆ-ಕರುಗಳು ಮೃತಪಟ್ಟಿದೆ. ಸೋಮವಾರ ರಾತ್ರಿ ಬಿಸಿದ ಬಿರುಗಾಳಿಯಲ್ಲಿ ಈ ಅವಘಡ ಸಂಭವಿಸಿದೆ.

Leave a Reply

Your email address will not be published. Required fields are marked *