Connect with us

Column

ತೆಂಗಿನಕಾಯಿ, ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

Published

on

ಚೀನಾದಲ್ಲಿ ಸೃಷ್ಟಿಯಾಗಿ ಇಂದು ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾಗೆ ವಿಜ್ಞಾನಿಗಳು ಔಷಧಿ ಕಂಡು ಹಿಡಿಯಲು ಪ್ರಯತ್ನ ನಡೆಸುತ್ತಿದ್ದು, ಯಶಸ್ವಿ ಆಗುತ್ತದೋ ಇಲ್ಲವೋ ಎನ್ನುವುದು ತಿಳಿದುಬರಬೇಕಿದೆ. ಈ ಮಧ್ಯೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಈ ಕೊರೊನಾವನ್ನು ತಡೆಗಟ್ಟಬಹುದು ಎಂದು ವಿಜ್ಞಾನಿಗಳು ಈಗಾಗಲೇ ಹೇಳಿದ್ದಾರೆ.

ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು ಎಂದಾಗ ಯಾವುದನ್ನು ಬಳಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚು ಸಿಗುತ್ತದೆ ಎನ್ನುವ ಒಂದು ಪ್ರಶ್ನೆ ಹುಟ್ಟುತ್ತದೆ. ಈ ಪ್ರಶ್ನೆಗೆ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಸುಲಭವಾಗಿ ಹೇಳಬಹುದು. ಆದರಲ್ಲೂ ತೆಂಗಿನಕಾಯಿ ಮತ್ತು ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು ಎನ್ನುವ ವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ವೈಜ್ಞಾನಿಕ ವಿಶ್ಲೇಷಣೆಯನ್ನು ನೀಡಲಾಗಿದ್ದು, ತೆಂಗಿನ ಕಾಯಿ ಮತ್ತು ತೆಂಗಿನ ಎಣ್ಣೆಯಿಂದ ಕೊರೊನಾ ತಡೆಗಟ್ಟಬಹುದು ಎಂದು ಹೇಳುತ್ತಿಲ್ಲ. ಆದರೆ ಇವುಗಳ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ರೋಗಗಳನ್ನು ತಡೆಯಬಹದು ಎನ್ನುವುದಷ್ಟೇ ಈ ಲೇಖನದ ಉದ್ದೇಶ.

ವಿಶ್ವದೆಲ್ಲೆಡೆ ಕೊರೊನಾ ವೈರಸ್ ಮಾರಕ ಸೋಂಕು ಜ್ವರದ ಭೀತಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಮಾರಕ ಸೋಂಕು ರೋಗಕ್ಕೆ ಯಾವುದೇ ಮದ್ದಾಗಲಿ ಅಥವಾ ಲಸಿಕೆಗಳಾಗಲಿ ಲಭ್ಯವಿಲ್ಲ. ಈ ಮಾರಿ ಜ್ವರ ಹಬ್ಬದಂತೆ ಹಲವಾರು ಜಾಗರೂಕತೆ ನಿರ್ಬಂಧಗಳನ್ನು ಹೇರಲಾಗಿದೆ. ಈ ಮುಂಜಾಗೃತಾ ಕಾನೂನು ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಎಲ್ಲರಲ್ಲೂ ಈ ಸೋಂಕು ನಿರೋಧಕ ಶಕ್ತಿ ಪ್ರಕೃತಿ ಸಹಜವಾಗಿ ಇರುತ್ತದೆ. ಇದಕ್ಕೆ ಉದಾಹರಣೆ ಏನೆಂದರೆ ಕೊರೊನಾ ವೈರಸ್ ಸೋಂಕು ಬಂದವರಲ್ಲಿ ಶೇ.90ರಷ್ಟು ಜನ ಜ್ವರ ಲಕ್ಷಣವಿಲ್ಲದೆ ಓಡಾಡುತ್ತಿರುತ್ತಾರೆ. ಅಂದರೆ, ಹಲವಾರು ಕಾರಣಗಳಿಂದ ಶೇ.10ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿಯು ಕುಗ್ಗಿರುತ್ತದೆ.

ನಾವು ಉಸಿರಾಡಿದಾಗ ಈ ವೈರಸ್ ಮೂಗಿನ ಮೂಲಕ ಶ್ವಾಸಕೋಶಕ್ಕೆ ಹೋಗಿ ಅಂಗಾಂಶವನ್ನು ಧ್ವಂಸಮಾಡಿ ಉಸಿರಾಡಂತೆ ಮಾಡುತ್ತದೆ. ನಾವು ಉಸಿರಾಡುವುದನ್ನು ನಿಲ್ಲಿಸುವುದು ಅಸಾಧ್ಯ. ಆದುದರಿಂದ ವೈರಸ್ ದೇಹದೊಳಗೆ ಹೋಗದಂತೆ ಅಥವಾ ಹೋದರೆ ಉಸಿರಾಡುವ ಅಂಗಗಳನ್ನು ಹೇಗೆ ರಕ್ಷಿಸುವುದು ಬಗೆ ಚಿಂತನೆ ಮಾಡಬೇಕಿದೆ. ಪ್ರಕೃತಿಯಲ್ಲಿ ಸೋಂಕು ನಿರೋಧಕ ಶಕ್ತಿಯನ್ನು ಮನುಷ್ಯನಲ್ಲಿ ಹೆಚ್ಚಿಸುವ ಗುಣ ವಿಶೇಷವಿರುವ ವಿವಿಧ ಗಿಡ ಮೂಲಿಕೆಗಳಲ್ಲಿ ಮತ್ತು ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ಇವೆ.

ತೆಂಗಿನ ಎಣ್ಣೆ ಕರಾವಳಿ ಪ್ರದೇಶಗಳಲ್ಲಿ ತೆಂಗಿನ ಕಾಯಿ, ಎಣ್ಣೆ ಮತ್ತು ಸಿಯಾಳ ದಿನನಿತ್ಯ ಉಪಯೋಗಿಸುವುದು ವಾಡಿಕೆಯಿತ್ತು. ತೆಂಗಿನ ಮರವನ್ನು ಭೂಲೋಕದ ಕಲ್ಪವೃಕ್ಷವೆಂದು ಕರೆಯಲಾಗುತ್ತದೆ. ಹಿಂದೂ ಧರ್ಮದ ಶುಭ ಸಮಾರಂಭಗಳಲ್ಲಿ, ಧಾರ್ಮಿಕ ಪೂಜೆ ಪುರಸ್ಕಾರಗಳಲ್ಲಿ ತೆಂಗಿನ ಕಾಯಿ ಮಹತ್ವವಾದ ಸ್ಥಾನ ಪಡೆದಿದೆ. ದೇವರ ನೈವೇದ್ಯಕ್ಕೆ ತೆಂಗಿನ ಕಾಯಿ ಇರಲೇಬೇಕು. ನಮ್ಮ ಪೂರ್ವಜರು ಆರೋಗ್ಯಕ್ಕೆ ಉತ್ತಮವಾದುದ್ದನ್ನು ದೇವರಿಗೆ ಸಮರ್ಪಣೆ ಮಾಡಿ ಮತ್ತೆ ತಾವು ಸೇವಿಸುತ್ತಿದ್ದರು. ಹಾಗೆಯಾದರೂ ಜನರು ಉತ್ತಮ ಕ್ರಮ, ಪದಾರ್ಥಗಳನ್ನು ಅಳವಡಿಸಿಕೊಳ್ಳಿ ಎನ್ನುವ ಉದ್ದೇಶ ಅವರದ್ದು ಇದ್ದಿರಬೇಕು.

ಆಧುನಿಕ ಜೀವನ ಶೈಲಿ, ಪಾಶ್ಚಿಮಾತ್ಯ ಅನುಕರಣೆ ಮತ್ತು ಹಿಂದೆ ಕೆಲವು ಹಲವು ವೈಜ್ಞಾನಿಕವಾಗಿ ಸರಿಯಾದ ಸಂಶೋಧನೆ ನಡೆಸದಿರುವುದರಿಂದ ಪಾರಂಪರಿಕವಾಗಿ ನಡೆಸುತ್ತಿದ್ದ ಅನುಸರಣೆಯು ಮಾಯವಾಗುತ್ತಿದೆ. ಅದೃಷ್ಟವಶಾತ್ ಇತ್ತೀಚೆಗೆ ವಿಜ್ಞಾನಿಗಳ ಸಂಶೋಧನೆಯಿಂದಾಗಿ ಸತ್ಯಾಸತ್ಯತೆಗಳು ಬೆಳಕಿಗೆ ಬರುತಿದೆ. ತೆಂಗಿನ ಎಣ್ಣೆಯನ್ನು ಹಾಳಾಗದ ಹಾಗೆ ಬಹು ದಿನ ಇಡಲು ಕೃತಕವಾಗಿ (ಹೈಡ್ರೋಜಿನೇಷನ್) ಸಂಸ್ಕರಿಸುತ್ತಾರೆ. ಇದರಿಂದಾಗಿ ಎಣ್ಣೆಯ ಪ್ರಕೃತಿ ಸಹಜವಾದ ಗುಣಗಳು ನಾಶವಾಗುತ್ತದೆ. ಪ್ರಕೃತಿ ಸಹಜವಾದ ಗುಣಗಳು ನಾಶವಾಗಿ ಆರೋಗ್ಯಕ್ಕೆ ಕೆಡುಕು ಉಂಟುಮಾಡುತ್ತದೆ. ಈಗ ತೆಂಗಿನ ಎಣ್ಣೆಯನ್ನು ಹಳೆಯ ಕಾಲದಂತೆ, ಕೋಲ್ಡ್ ಪ್ರೆಸ್ ಮಾಡಿ ತೆಗೆಯುತ್ತಾರೆ. ಇದನ್ನು ವರ್ಜಿನ್ ತೆಂಗಿನ ಎಣ್ಣೆ ಎನ್ನುತ್ತಾರೆ. ಮೊದಲು ತೆಂಗಿನ ಎಣ್ಣೆ ಹೃದ್ರೋಗ ಹೆಚ್ಚಲು ಕಾರಣ ಎನ್ನುವ ವಿಜ್ಞಾನಿಗಳು, ವರ್ಜಿನ್ ತೆಂಗಿನ ಎಣ್ಣೆ ಹೃದ್ರೋಗ ಬರದಂತೆ ತಡೆಯಬಲ್ಲದು ಎಂಬದುನ್ನು ತೋರಿಸಿದ್ದಾರೆ. ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ (ಫ್ಯಾಟಿ ಆಸಿಡ್) ಎನ್ನುವ ಕೊಬ್ಬಿನಾಂಶ ಹಲವಾರು ವೈರಸನ್ನು ಜೀವಕೋಶದಲ್ಲಿ ಬೆಳೆಯುದನ್ನು ತಡೆಗಟ್ಟಬಲ್ಲದು ಎಂದು ಹಲವು ಮಂದಿ ತೋರಿಸಿಕೊಟ್ಟಿದ್ದಾರೆ.

ಲಾರಿಕ್ ಆಸಿಡ್ ಪ್ರಚೋದನೆಯಿಂದ ಜೀವಕೋಶದಲ್ಲಿ 7-10 ಹೆಚ್ಚು ಪಟ್ಟು ಟ್ರೈ ಎಸೈಲ್ ಗ್ಲಿಸರೊಲ್ ಎಂಬ ರಾಸಾಯನಿಕ ಪದಾರ್ಥವನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಜೀವಕೋಶಕ್ಕೆ ಏನೂ ತೊಂದರೆಯಾಗುವುದಿಲ್ಲ. ಜೀವಕೋಶದಲ್ಲಿ ಅಧಿಕ ಮಟ್ಟದ ಟ್ರೈ ಎಸೈಲ್ ಗ್ಲಿಸರೊಲ್‍ಇರುವುದರಿಂದ ವೈರಸ್ ಪ್ರ್ರೊಟಿನ್‍ಗಳು ಗಳು ಸಮರ್ಪಕ ರೀತಿಯಲ್ಲಿ ಜೋಡಣೆಯಾಗದೇ ನಿಷ್ಕ್ರಿಯವಾಗುತ್ತದೆ. ಅದು ಅಲ್ಲದೆ ವೈರಸ್ ತನ್ನದೇ ಆದ ಪ್ರೋಟಿನ್ ಸುರಿಸುವಂತೆ ಮಾಡುತ್ತದೆ. ಈ ಪ್ರೋಟಿನ್ಸ್ ವೈರಸನ್ನು ಜೀವಕೋಶದ ಹೊರ ಪದರದಲ್ಲಿ ನೆಲೆಯಾಗಲು ಬೇಕಾಗುತ್ತದೆ. ಆದರೆ ಈ ಕ್ರಿಯೆಯನ್ನು ಲಾರಿಕ್ ಆಸಿಡ್ ತಡೆಗಟ್ಟಿ ವೈರಸ್ ಜೀವಕೋಶದ ಒಳಗೆ ಹೋಗಿ ಹಾನಿ ಉಂಟು ಮಾಡುವುದನ್ನು ತಪ್ಪಿಸುತ್ತದೆ.

ಲಾರಿಕ್ ಆಸಿಡ್ ತೆಗೆದ ಮೇಲೂ 4-7 ಗಂಟೆಗಳವರೆಗೂ ಮೇಲೆ ವಿವರಿಸಿದ ಪರಿಣಾಮ ಫಲಕಾರಿಯಾಗಿರುತ್ತದೆ. ತೇಗಿನ ಎಣ್ಣೆಯಲ್ಲಿ ಮಾತ್ರ ಲಾರಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿ ಇದೆ. ತೆಂಗಿನ ಎಣ್ಣೆಯ ಕೊಬ್ಬಿನಾಂಶದಲ್ಲಿ ಶೇ.50 ರಷ್ಟು ಲಾರಿಕ್ ಆಸಿಡ್ ಇದೆ. ತೆಂಗಿನ ಎಣ್ಣೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಜೀವಕೋಶ ಮತ್ತು ಅಂಗಾಂಶಗಳ ಪುನರ್ ಜೀವನಕ್ಕೆ ಸಹಕಾರಿಯಾಗಿದೆ. ಉದುರಿತವನ್ನು ಕಡಿಮೆಮಾಡುತ್ತದೆ. ಎಣ್ಣೆಯ ಪದರವು ವೈರಸಿಗೆ ತಡೆ ಗೋಡೆಯಾಗಿರುತ್ತದೆ. ಜೀವಕೋಶ, ಅಂಗಾಂಶಗಳಿಗೆ ಎಣ್ಣೆ ಆಹಾರವಾಗಿ ತ್ವರಿತ ಶಕ್ತಿಯನ್ನು ಒದಗಿಸಿ ವೈರಸನ್ನು ಸಮರ್ಥವಾಗಿ ಎದುರಿಸಲು ಸಹಾಯವಾಗುತ್ತದೆ.

 

ದೇಹಕ್ಕೆ ಬರುವ ಸೋಂಕನ್ನು ತಡೆಗಟ್ಟಲು ತೆಂಗಿನ ಎಣ್ಣೆ ಹೇಗೆ ಉಪಯೋಗಿಸಬೇಕೆಂದು ತಿಳಿಸುವೆ. ಬೆಳಿಗ್ಗೆ ಎದ್ದ ಮೇಲೆ ಮತ್ತು ಸಂಜೆ ಅಥವಾ ಮಲಗುವುದಕ್ಕೆ ಮೊದಲು ತೆಂಗಿನ ಎಣ್ಣೆಯನ್ನು ತಲೆ ಮೇಲೆ ಮಾಡಿ ಮೂಗಿನ ಎರಡೂ ಹೊಳ್ಳೆಯ ಒಳಗೆ ಹಾಕಿ. ಬಾಯಿಗೆ ಬಂದರೆ ಚಿಂತೆ ಮಾಡಬೇಡಿ. ತಲೆ ಮೇಲೆ ಮಾಡಿ ಹಾಗೆ ಐದು ನಿಮಿಷ ಕುಳಿತುಕೊಳ್ಳಿ. ಎರಡನೆಯದಾಗಿ, ಬರಿಯ ಹೊಟ್ಟೆಗೆ ಒಂದು ಚಮಚ ತೆಂಗಿನ ಎಣ್ಣೆಯನ್ನು ಬರೇ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಅರ್ಧ ಗಂಟೆಯ ನಂತರ ಕುಡಿಯುವುದು, ತಿನ್ನುವುದು ಮಾಡಬಹುದು. ಕಣ್ಣಿಗೂ, ಕಿವಿಗೂ ಒಂದೆರಡು ತೊಟ್ಟು ಹಾಕಬಹುದು. ತೆಂಗಿನ ಕಾಯಿಯನ್ನು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಉಪಯೋಗಿಸಿ.

ಲೇಖಕರ ಬಗ್ಗೆ:
ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯ ಡಾ ನಾಗಭೂಷಣ ಅವರು ಪ್ರಸ್ತುತ ಅಮೇರಿಕದ ಚಿಕಾಗೋದಲ್ಲಿ ನೆಲೆಸಿದ್ದಾರೆ. ಮುಂಬೈ ಟಾಟಾ ಕ್ಯಾನ್ಸರ್ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸಂಶೋಧನೆ ನಡೆಸಿದವರು. ಅಲ್ಲಿಯೇ ಡಾಕ್ಟರೇಟ್ ಪದವಿಯನ್ನು ಗಳಿಸಿ ಅಮೆರಿಕಾದ ಶೇಷ್ಠ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಿದವರು. ಇವರು ಟಾಟಾ ಕ್ಯಾನ್ಸರ್ ಸಂಸ್ಥೆಯಲ್ಲಿ ಸಂಶೋಧನೆ ಮಾಡಿ ಪ್ರಪಂಚದಲ್ಲಿಯೇ ಪ್ರಪ್ರಥಮ ಬಾರಿಗೆ (1984) ಅರಶಿನವು ಕ್ಯಾನ್ಸರ್ ಅನ್ನು ತಡೆಗಟ್ಟಬಲ್ಲದೆಂದು ಕಂಡುಹಿಡಿದವರು. ಈ ಸಂಶೋಧನೆಗಾಗಿ ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್, ನವದೆಹಲಿಯಿಂದ ಚಿನ್ನದ ಪದಕ ಪಡೆದಿರುತ್ತಾರೆ. ಅಲ್ಲದೆ ದೇಶ ವಿದೇಶಗಳಲ್ಲಿ 20ಕ್ಕೂ ಹೆಚ್ಚು ಪಾರಿತೋಷಕಗಳನ್ನು ಪಡೆದಿದ್ದಾರೆ.

ಈ ವಿಚಾರದ ಬಗ್ಗೆ ಪ್ರಶ್ನೆ, ಅನುಮಾನಗಳಿದ್ದರೆ digital@writemenmedia.com ಪ್ರಶ್ನೆ ಕೇಳಬಹುದು. ಲೇಖಕರು ಉತ್ತರಿಸುತ್ತಾರೆ.

[ಮೇಲಿನ ಲೇಖನದಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ]