Connect with us

Food

ಸರ್ವರೋಗಕ್ಕೂ ಪನ್ನೀರು ಎಳನೀರು

Published

on

ಬೇಸಿಗೆ ಬಿಸಿಲಿಗೆ ಎನಾದರೂ ತಂಪು ಪಾನೀಯ ಕುಡಿಯೋಕೆ ಸಿಕ್ರೆ ಸಾಕಪ್ಪ ಅಂತ ಬಹಳಷ್ಟು ಮಂದಿ ಕೂಲ್ ಡ್ರಿಂಕ್ಸ್ ಮೊರೆ ಹೋಗ್ತಾರೆ. ಫ್ರಿಡ್ಜನಲ್ಲಿ ಇಟ್ಟ ಐಸ್ ಬಳಸುವ ತಂಪಾದ ಪಾನೀಯಗಳನ್ನು ಕುಡಿದ ಕ್ಷಣ ಹಾಯಾಗಿ ಅನಿಸುತ್ತೆ. ಆದರೆ ನೀವು ಕುಡಿಯುವ ಕೂಲ್ ಡ್ರಿಂಕ್ಸ್ ನಿಂದ ಆರೋಗ್ಯಕ್ಕೆ ಎಷ್ಟು ಹಾನಿ ಅಂತ ಯೋಚಿಸೊಲ್ಲ. ಸುಮ್ಮನೆ ಕೆಮಿಕಲ್ ಮಿಶ್ರಿತ, ತುಂಬಾ ದಿನಗಳಿಂದ ಸ್ಟೋರ್ ಮಾಡಿಡುವ ಪಾನೀಯಗಳನ್ನು ಕುಡಿಯುವ ಬದಲು ಆರೋಗ್ಯಕ್ಕೆ ಹಿತವಾದ ಎಳನೀರನ್ನು ಕುಡಿಯಿರಿ. ಕೆಲವರಿಗೆ ಎಳನೀರಿನ ವಿಶೇಷತೆ ಗೊತ್ತಿರಲ್ಲ. ಯಾಕೆ ಎಳನೀರು ಆರೋಗ್ಯಕ್ಕೆ ಸ್ನೇಹಿ ಎಂಬ ವಿಚಾರವು ತಿಳಿದಿರಲ್ಲ.

ಅದಕ್ಕೆ ನಾವು ಎಳನೀರು ಯಾಕೆ ಕುಡಿಬೇಕು? ಅದರ ಮಹತ್ವ ಏನು? ಇದರ ಉಪಯೋಗವೇನು ಅಂತ ನಿಮಗೆ ತಿಳಿಸುತ್ತೇವೆ. ನೋಡೋಕೆ ಗಾತ್ರದಲ್ಲಿ ಕೊಂಚ ಚಿಕ್ಕ ದೊಡ್ಡದಾಗಿರಬಹುದಷ್ಟೇ ಆದ್ರೆ ಎಳನೀರು ಪ್ರತಿ ಊರಿನಲ್ಲಿಯೂ ಬಹುತೇಕ ವರ್ಷವಿಡಿ ದೊರೆಯುತ್ತದೆ. ಎಳನೀರು ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಪೋಷಕಾಂಶಗಳನ್ನು ಪಡೆದ ದೇಹ ಶೀಘ್ರ ತನ್ನ ಚಟುವಟಿಕೆಗಳನ್ನು ಪೂರ್ಣ ಕ್ಷಮತೆಯಲ್ಲಿ ನಿರ್ವಹಿಸಲು ಸಬಲಗೊಳ್ಳುತ್ತದೆ. ಎಳನೀರಿನ ಉಪಯೋಗ ಕೇವಲ ಕುಡಿಯುವುದಕ್ಕಲ್ಲ, ಸರಿಯಾಗಿ ಬಳಸಿದರೆ ದೇಹದ ಹೊರಭಾಗಗಳಾದ ಚರ್ಮ ಮತ್ತು ಕೂದಲ ಆರೈಕೆಗೂ ಒಳ್ಳೆಯದು.

ಏಳನೀರ ಉಪಯೋಗಗಳೇನು?

ದೇಹಕ್ಕೆ ಬೇಕಾದ ಬಹುತೇಕ ನೀರಿನ ಅಗತ್ಯತೆಗಳನ್ನು ಪೂರೈಸುತ್ತದೆ:
ಎಳನೀರು ಒಂದು ಜೀವಾಮೃತ. ಇದರಲ್ಲಿರುವ ವಿವಿಧ ಖನಿಜ, ಲವಣ ಮತ್ತು ಸಕ್ಕರೆಯ ಅಂಶ ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ. ದೈಹಿಕ ಚಟುವಟಿಕೆಗಳಿಗೆ ಈ ನೀರು ಅತ್ಯಂತ ಸಮರ್ಪಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ನೀಡುವುದರಿಂದ ಶರೀರ ತನ್ನ ಚಟುವಟಿಕೆಗಳನ್ನು ಹೆಚ್ಚು ಸಮಯ ನಿರ್ವಹಿಸುವುದಕ್ಕೆ ಸಹಾಯ ಮಾಡುತ್ತದೆ. ಹೆಚ್ಚಿನ ದೈಹಿಕ ಶ್ರಮವುಳ್ಳ ಕೆಲಸಕ್ಕೆ ಪ್ರತಿದಿನ ಒಂದಾದರೂ ಎಳನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮವಾಗಿದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ:
ಎಳನೀರಿನಲ್ಲಿ ಫೋಲಿಕ್ ಆ್ಯಸಿಡ್, ಫಾಸ್ಪೇಟೇಸ್, ಕ್ಯಾಟಲೇಸ್, ಡಿಹೈಡ್ರೋಜೀನೇಸ್, ಡೈಯಾಸ್ಟೇಸ್, ಪೆರಾಕ್ಸಿಡೇಸ್, ಆರ್.ಎನ್.ಎ ಪಾಲಿಮರೇಸಸ್ ಮೊದಲಾದ ಕಿಣ್ವಗಳು ಇದೆ. ಇವುಗಳು ವಿವಿಧ ರೀತಿಯ ಆಹಾರಗಳು ಸುಲಭವಾಗಿ ಜೀರ್ಣವಾಗಲು ನೆರವಾಗುತ್ತವೆ. ಇದರಿಂದ ಆಹಾರಗಳ ಉತ್ತಮ ಅಂಶಗಳು ದೇಹಕ್ಕೆ ಸುಲಭವಾಗಿ ಲಭ್ಯವಾಗಿ ಆರೋಗ್ಯ ವೃದ್ಧಿಸುತ್ತದೆ.

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ:
ಎಳನೀರಿನಲ್ಲಿ ವಿವಿಧ ಪೌಷ್ಠಿಕಾಂಶಗಳಿದ್ದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಮತ್ತು ಸೋಡಿಯಂ ಇದ್ದು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ಕ್ಲೋರೈಡ್ ಇವೆ. ಆದರಿಂದ ದೇಹಕ್ಕೆ ಶಕ್ತಿ ಒಮ್ಮೆಲೇ ಬಿಡುಗಡೆಯಾಗದೇ ನಿಧಾನಕ್ಕೆ ಶಕ್ತಿ ಪೂರೈಸುತ್ತಾ ಹೋಗುತ್ತದೆ. ಇದೇ ಕಾರಣದಿಂದ ಇಡೀ ದಿನ ದೈಹಿಕ ಕೆಲಸವನ್ನು ಹೆಚ್ಚಿನ ಆಯಾಸವಿಲ್ಲದೇ ನಿರ್ವಹಿಸಲು ಸಾಧ್ಯವಾಗುತ್ತದೆ.

ಮೂಳೆಗಳು ಗಟ್ಟಿಗೊಳ್ಳುತ್ತವೆ:
ಹಾಲಿನ ಮೂಲಕ ಅತ್ಯಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ದೊರಕುತ್ತದೆ. ಆದರೆ ಎಳನೀರು ದೇಹಕ್ಕೆ ಸಮರ್ಪಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ನೀಡುತ್ತದೆ. ಈ ಮೂಲಕ ಮೂಳೆಗಳು ದೃಢವಾಗುವ ಜೊತೆಗೇ ಸ್ನಾಯು ಮತ್ತು ಅಂಗಾಂಶಗಳೂ ಉತ್ತಮಗೊಳ್ಳುತ್ತವೆ.

ಮಧುಮೇಹವನ್ನು ನಿಯಂತ್ರಿಸುತ್ತದೆ:
ಎಳನೀರಿನಲ್ಲಿ ಸಕ್ಕರೆ ಕಡಿಮೆ ಪ್ರಮಾಣದಲ್ಲಿರುವುದರಿಂದ ಮಧುಮೇಹಿಗಳೂ (ವೈದ್ಯರ ಸಲಹೆ ಮೇರೆಗೆ) ನಿಗದಿತ ಪ್ರಮಾಣದಲ್ಲಿ ಎಳನೀರು ಸೇವಿಸಬಹುದು. ಇದರಿಂದ ರಕ್ತಸಂಚಾರ ಉತ್ತಮಗೊಳ್ಳುವುದರಿಂದ ನಿಧಾನಕ್ಕೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ:
ಚರ್ಮದ ಆರೈಕೆಗೆ ದೇಹದ ಒಳಗಿನಿಂದಲೇ ಹೆಚ್ಚಿನ ನೀರಿನ ಪೂರೈಕೆ ಆಗಬೇಕು. ಆಗ ಮಾತ್ರ ತ್ವಚೆಯ ಅಂದ ಚಂದ ವೃದ್ಧಿಯಾಗುತ್ತದೆ. ಎಳನೀರಿನ ಸೇವನೆಯಿಂದ ಚರ್ಮಕ್ಕೆ ಅವಶ್ಯವಾದ ನೀರು ಲಭ್ಯವಾಗುವ ಮೂಲಕ ಚರ್ಮಕ್ಕೆ ಒಳಗಿನಿಂದ ಪೋಷಣೆ ನೀಡುತ್ತದೆ. ಆಗ ಚರ್ಮ ಕಾಂತಿಯುಕ್ತವಾಗುತ್ತದೆ. ಒಣಗಿದ ಮತ್ತು ಬಿಳಿಚಿದ ಚರ್ಮವೂ ನಿಧಾನಕ್ಕೆ ಸೆಳೆತ ಪಡೆದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಕೂದಲು ಉದುರುವುದನ್ನು ತಡೆಯುತ್ತದೆ:
ಕೂದಲನ್ನು ಕೊಂಚ ಎಳನೀರಿನಿಂದ ಮಸಾಜ್ ಮಾಡುವುದರಿಂದ ತಲೆಯ ಚರ್ಮದಲ್ಲಿ ರಕ್ತಸಂಚಾರ ಹೆಚ್ಚುತ್ತದೆ. ಇದರಿಂದ ಕೂದಲ ಬುಡ ಹೆಚ್ಚು ಶಕ್ತಿಯುತವಾಗುತ್ತವೆ ಮತ್ತು ಉತ್ತಮ ಗುಣಮಟ್ಟದ ಕೂದಲು ಬೆಳೆಯಲು ನೆರವಾಗುತ್ತದೆ. ಕೂದಲು ಉದುರುವುದು ಕಡಿಮೆಯಾಗಿ ಕೂದಲ ಹೊಳಪು ಹೆಚ್ಚುತ್ತದೆ. ಎಳನೀರಿನಲ್ಲಿರುವ ವಿವಿಧ ವಿಟಮಿನ್ ಮತ್ತು ವಿಶೇಷವಾಗಿ ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶ ಕೂದಲಿಗೆ ಸಹಕಾರಿಯಾಗಿದೆ. ಈ ಪೋಷಕಾಂಶಗಳು ಕೂದಲಿಗೆ ಹೊಳಪು ನೀಡುವಲ್ಲಿ ಮತ್ತು ಸಾಫ್ಟ್ ಮಾಡುವಲ್ಲಿ ಉಪಯುಕ್ತವಾಗಿದೆ.

ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ಕರಗಿಸುತ್ತದೆ:
ಒಂದು ವೇಳೆ ಯೂರಿಕ್ ಆ್ಯಸಿಡ್ ಅಥವಾ ಸಿಸ್ಟೈನ್ (uric acid or cystine) ಎಂಬ ಲವಣದಿಂದ ಮೂತ್ರದಲ್ಲಿ ಕಲ್ಲು ಉಂಟಾಗಿದ್ದರೆ ಅದಕ್ಕೆ ಎಳನೀರಿಗಿಂತ ಉತ್ತಮವಾದ ಔಷದಿ ಇನ್ನೊಂದಿಲ್ಲ. ಏಕೆಂದರೆ ಎಳನೀರಿನಲ್ಲಿರುವ ಪೊಟ್ಯಾಶಿಯಂ ಈ ಲವಣಗಳನ್ನು ಕರಗಿಸಿಕೊಂಡು ಮೂತ್ರಪಿಂಡಗಳನ್ನು ಕಲ್ಲುಗಳಿಂದ ಮುಕ್ತಿಗೊಳಿಸುತ್ತದೆ.

ಎಳನೀರಿನಲ್ಲಿರುವ ಈ ನೈಸರ್ಗಿಕ ಪೌಷ್ಠಿಕಾಂಶಗಳು ದುಬಾರಿ ಪಾನೀಯಗಳಲ್ಲಿ ಸಿಗುವುದಿಲ್ಲ. ಅಲ್ಲದೆ ದೇಹದ ಆರೋಗ್ಯವನ್ನು ವೃದ್ದಿಸಿಕೊಳ್ಳಲು ಎಳನೀರು ಎಷ್ಟು ಉಪಯುಕ್ತ ಅಂತ ನಿಮಗೆ ಗೊತ್ತಾಗಿದೆ ಅಲ್ವ. ಹಾನಿಕಾರಕ ಕೂಲ್ ಡ್ರಿಂಕ್ಸ್‍ಗಳನ್ನು ಬಿಟ್ಟು ಈಗಲಾದರೂ ಆರೋಗ್ಯಕ್ಕೆ ಹಿತವಾದ ಎಳನೀರು ಕುಡಿಯಿರಿ ಉತ್ತಮ ಆರೋಗ್ಯವನ್ನು ಪಡೆಯಿರಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv