Friday, 22nd November 2019

Recent News

ಲಾಠಿಯನ್ನೇ ಕೊಳಲು ಮಾಡಿಕೊಂಡ ಪೊಲೀಸ್ ಪೇದೆ

ಹುಬ್ಬಳ್ಳಿ: ಪೊಲೀಸರಿಗೆ ಲಾಠಿ ರುಚಿ ತೋರಿಸುವುದು ಅಭ್ಯಾಸ. ಆದರೆ ನಗರದ ಪೊಲೀಸ್ ಪೇದೆಯೊಬ್ಬರು ಅದೇ ಲಾಠಿಯನ್ನು ಕೊಳಲು ಮಾಡಿಕೊಂಡು ಕೇಳುಗರನ್ನು ತಲೆದೂಗುವಂತೆ ಮಾಡಿದ್ದಾರೆ.

ಹೌದು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಹವಾಲ್ದಾರ್ ಚಂದ್ರಕಾಂತ್ ಹುಟಗಿ ಎಂಬವರೇ ಲಾಠಿಯನ್ನು ಕೊಳ್ಳಲು ಮಾಡಿ ಸುದ್ದಿಯಾಗಿದ್ದಾರೆ. ಇವರು ತನ್ನ ಲಾಠಿಯಿಂದ ಮನೋಜ್ಞವಾಗಿ ಕೊಳಲು ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಫೈಬರ್ ಲಾಠಿಯಲ್ಲೇ ಲಯಬದ್ಧವಾಗಿ ಕೊಳಲು ನುಡಿಸುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಅವರು ಕೊಳಲಿನಲ್ಲಿ ರಾಜಕುಮಾರ್ ಅವರ ಹಳೇ ಹಾಡುಗಳನ್ನು ನುಡಿಸುವುದನ್ನು ಕೇಳಿದ ಸಾಮಾಜಿಕ ಜಾಲತಾಣಿಗರು ಇವರ ಕೊಳಲ ನಾದಕ್ಕೆ ಮಾರು ಹೋಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಚಂದ್ರಕಾಂತ್, ಡ್ಯೂಟಿಯಲ್ಲಿರುವವಾಗ ಬೋರ್ ಆದರೆ ನಾನು ಲಾಠಿಯನ್ನು ಕೊಳಲಾಗಿ ಮಾಡಿಕೊಂಡು ಹಾಡುಗಳನ್ನು ನುಡಿಸುತ್ತೇನೆ. 2017ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿಯಲ್ಲಿ ನಡೆದ ದತ್ತ ಪೀಠದ ಸಂದರ್ಭದಲ್ಲಿ ನನ್ನನ್ನು ಅಲ್ಲಿಗೆ ಡ್ಯೂಟಿಗೆಂದು ನೇಮಿಸಿದ್ದರು. ಈ ಸಂದರ್ಭದಲ್ಲಿ ನನಗೆ ಈ ಉಪಾಯ ಹೊಳೆಯಿತು ಎಂದಿದ್ದಾರೆ.

ಕೆಲಸದಲ್ಲಿರುವಾಗ ಕೆಲ ಸಮಯ ನನಗೆ ಬೋರಾಗುತ್ತಿದೆ. ಹೀಗಾಗಿ ನಾನು ಡ್ರಿಲ್ಲಿಂಗ್ ಅಂಗಡಿಗೆ ತೆರಳಿ ನನ್ನ ಫೈಬರ್ ಲಾಠಿಯಲ್ಲಿ ತೂತುಗಳನ್ನು ಮಾಡಿಕೊಡುವಂತೆ ಕೇಳಿದ್ದೆ. ಈ ಮೂಲಕ ಕೊಳಲು ಊದಲು ಪ್ರಯತ್ನಿಸಿದೆ. ಅದು ಸಾಧ್ಯವೂ ಆಯ್ತು. ಲಾಠಿಯಲ್ಲಿ ನಾನು ಹಾಡುಗಳನ್ನು ನುಡಿಸಿದಾಗ ನನ್ನ ಸಹೋದ್ಯೋಗಿಗಳು ಅಚ್ಚರಿಗೊಂಡರು ಎಂದರು.

ಚಂದ್ರಕಾಂತ್ ಅವರು ತಮ್ಮ ಮಗಳ ಜೊತೆ ಹಲವು ಪ್ರದರ್ಶನಗಳನ್ನು ನೀಡಿದ್ದಾರೆ. ನನ್ನ ಈ ಹವ್ಯಾಸಕ್ಕೆ ಸಹೋದ್ಯೋಗಿಗಳು ಕೂಡ ನನಗೆ ಬೆಂಬಲ ನೀಡುತ್ತಿದ್ದಾರೆ. ಸಹೋದ್ಯೋಗಿಗಳ ಜೊತೆ ಚಾರಣ ಹೊರಟಾಗ ನಾನು ನನ್ನ ಲಾಠಿಯನ್ನೂ ತೆಗೆದುಕೊಂಡು ಹೋಗುತ್ತೇನೆ. ಚಾರಣದ ಸಂದರ್ಭದಲ್ಲಿ ಲಾಠಿ ಮೂಲಕ ಹಾಡುಗಳನ್ನು ನುಡಿಸಿ ಅವರಿಗೆ ಮನರಂಜನೆಯನ್ನು ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *