Thursday, 17th October 2019

1 ಲೀಟರ್ ಹಾಲು ಹಾಕಿಲ್ಲ, ಭೀಮಾನಾಯ್ಕ್ ಅಧ್ಯಕ್ಷರಾಗ್ತಾರೆ ಅಂತಾ ನಾ ಹೇಳಿದ್ನಾ – ರೇವಣ್ಣ ಗುಡುಗು

ಬೆಂಗಳೂರು: ಕೆಎಂಎಫ್‍ಗೂ ಮೈತ್ರಿ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಕುಮಾರಸ್ವಾಮಿ ಅವರಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಮಾಜಿ ಸಚಿವ ರೇವಣ್ಣ ಗುಡುಗಿದ್ದಾರೆ.

ಕೆಎಂಎಫ್ ಚುನಾವಣೆಯನ್ನು ದಿಢೀರ್ ಮುಂದೂಡಿಕೆ ಮಾಡಿದ ಹಿನ್ನೆಲೆಯಲ್ಲಿ ರೇವಣ್ಣ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಭೀಮಾನಾಯ್ಕ್ ಅಧ್ಯಕ್ಷರಾಗುತ್ತಾರೆ ಎಂಬ ಮಾತು ಕೊಟ್ಟಿದ್ದಾರೆ ಎನ್ನುವ ಪ್ರಶ್ನೆಗೆ, ಆತ ಸೊಸೈಟಿಗೆ 1 ಲೀಟರ್ ಹಾಲನ್ನೇ ಹಾಕಿಲ್ಲ. ಆತನಿಗೆ ಯಾರು ಅಧ್ಯಕ್ಷರಾಗಿ ಮಾಡುತ್ತಾರೆ ಎಂದು ಮಾತುಕೊಟ್ಟಿದ್ದಾರೆ? ಭೀಮಾನಾಯ್ಕ್ ಯಾವ ಪಕ್ಷದವರು, ಆದ್ರೆ ಅವರು ಯಡಿಯೂರಪ್ಪ ಅವರ ಮನೆ ಮುಂದೇ ಹೋಗಿ ನಿಂತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಆರ್ಥೈಸಿಕೊಳ್ಳಬೇಕಿದೆ ಎಂದರು.

ಕಳೆದ 3 ತಿಂಗಳಿಂದ ಚುನಾವಣೆ ಪ್ರಕ್ರಿಯೆ ನಡೆಯುತಿತ್ತು, ಜು.15 ರಿಂದ 30ರ ಒಳಗೆ ಎಲ್ಲಾ ಒಕ್ಕೂಟದ ಚುನಾವಣೆ ಆಗಬೇಕು ಎಂದು ನೋಟಿಸ್ ನೀಡಲಾಗಿತ್ತು. ಇಂದು ನಡೆಯಬೇಕಾಗಿದ್ದ ಅಧ್ಯಕ್ಷರ ಚುನಾವಣೆಯನ್ನು ಮುಂದೂಡಲಾಗಿದೆ. ಆದರೆ ಯಾವ ಕಾರಣಕ್ಕೆ ಮುಂದೂಡಿದ್ದಾರೆ ಎನ್ನುವುದು ಗೊತ್ತಿಲ್ಲ. ನಾನು ಯಾವ ಸದಸ್ಯರನ್ನು ಹೈಜಾಕ್ ಮಾಡಿಲ್ಲ. ಎಲ್ಲ ಸದಸ್ಯರು ಇಲ್ಲೇ ಇದ್ದು, ಅವರನ್ನೇ ಕೇಳಿ ಎಂದರು.

ಮೈತ್ರಿ ಸರ್ಕಾರ ಹಂತದಲ್ಲಿ ಈ ಸ್ಥಾನ ಕಾಂಗ್ರೆಸ್‍ಗೆ ಬಿಟ್ಟುಕೊಡಲಾಗಿತಂತೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಹಕಾರ ಕ್ಷೇತ್ರದಲ್ಲಿ ಯಾವ ಪಕ್ಷವೂ ಬರುವುದಿಲ್ಲ. ಇದರಲ್ಲಿ ಕುಮಾರಸ್ವಾಮಿ ಅವರಿಗೂ ಸಂಬಂಧವಿಲ್ಲ. ನಾನು ಯಾವತ್ತಾದ್ರೂ ಮಾತು ಕೊಟ್ಟಿದ್ದೀನಾ ಎಂದರು. ಅಲ್ಲದೇ ರಾಜ್ಯದಲ್ಲಿ ಒಟ್ಟು 14 ಒಕ್ಕೂಟಗಳು ಇದ್ದು, ಮಂಡ್ಯ ಒಕ್ಕೂಟ ಸೂಪರ್ ಸೀಡ್ ಆಗಿದೆ. 4 ಬಾರಿ ಬೋರ್ಡ್ ಮೀಟಿಂಗ್ ಆಗಿದ್ದು ಎಲ್ಲವೂ ಸರಿ ಆಗಿಲ್ಲ. ಇನ್ನೊಂದು ತುಮಕೂರು ಒಕ್ಕೂಟ ಎರಡು ನಾಮಿನೇಷನ್ ಅನರ್ಹ ಮಾಡಲಾಗಿದೆ. ಈಗಲೂ ನಮ್ಮ ಹತ್ತಿರ 8 ನಿರ್ದೇಶಕರ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು.

ಈ ನಡುವೆ ಆನಂದ್ ಕುಮಾರ್ ಎಂಬ ಡೈರಕ್ಟರ್ ಅವರನ್ನು ಅಮಾನತು ಮಾಡಿದ್ದಾರೆ. ಸಿಎಂ ದ್ವೇಷದ ರಾಜಕಾರಣ ಮಾಡಲ್ಲ ಎನ್ನುತ್ತಾರೆ. ಆದರೆ ಈಗ ಮಾಡಿರುವುದು ಏನು? ಇವತ್ತು ಎಲೆಕ್ಷನ್ ನಡೆದಿದ್ದರೆ ನಾವು ಗೆಲುವು ಸಿಗುತಿತ್ತು ಎನ್ನುವ ಒಂದೇ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ನಾನು ಅಧ್ಯಕ್ಷ ಎಂದು ಇಲ್ಲಿ ಬಂದು ಕುಳಿತಿಲ್ಲ. ಮಧ್ಯಾಹ್ನ ಒಂದು ಗಂಟೆಗೆ ಮೀಟಿಂಗ್ ಇತ್ತು ಆದ್ದರಿಂದ ಬಂದೆ ಅಷ್ಟೇ. ಆದರೆ ಇಲ್ಲಿ ಚುನಾವಣೆಯನ್ನೇ ಮುಂದೂಡಲಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ಧಾರವಾಡ ಹಾಲು ಉತ್ಪಾದಕ ಒಕ್ಕೂಟದ ನಿರ್ದೇಶಕ ಹೀರೇಗೌಡ ಅವರು, ರೇವಣ್ಣ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಬೆಂಬಲವಿದೆ ಎಂದು ಹೈಜಾಕ್ ಆರೋಪವನ್ನು ನಿರಾಕರಿಸಿದರು.

Leave a Reply

Your email address will not be published. Required fields are marked *