Monday, 16th December 2019

Recent News

34 ಜಿಬಿ ಆಡಿಯೋ ರೆಕಾರ್ಡ್, 6 ಸಾವಿರ ಕರೆ ಕದ್ದಾಲಿಕೆ – ಫೋನ್ ಟ್ಯಾಪಿಂಗ್ ಹೇಗೆ ಮಾಡಲಾಗುತ್ತೆ?

ಬೆಂಗಳೂರು: ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ಭಾರೀ ಸದ್ದು ಮಾಡುತ್ತಿದ್ದು, 6 ಸಾವಿರ ಕರೆಗಳನ್ನು ಕದ್ದಾಲಿಕೆ ಮಾಡಲಾಗಿರುವ ವಿಚಾರ ಈಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬರೋಬ್ಬರಿ 34 ಜಿಬಿಯಷ್ಟು ಆಡಿಯೋ ರೆಕಾರ್ಡ್ ಆಗಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದ್ದು, ಸರ್ಕಾರ ಇಂದು ಈ ಪ್ರಕರಣವನ್ನು ಸಿಐಡಿಗೆ ನೀಡುವ ಸಾಧ್ಯತೆಯಿದೆ.

ದೊಡ್ಡ ದೊಡ್ಡ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಪ್ರಾಥಮಿಕ ತನಿಖೆ ಈಗಾಗಲೇ ನಡೆದಿದೆ. ಸಂದೀಪ್ ಪಾಟೀಲ್ ಹಿರಿಯ ಪೊಲೀಸ್ ಅಧಿಕಾರಿಯ ಸೂಚನೆಯ ಮೇರೆಗೆ ಫೋನ್ ಕದ್ದಾಲಿಕೆ ನಡೆದಿದೆ ಎಂದು ವರದಿ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಸರ್ಕಾರ ಬೀಳಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ಕರೆಗಳನ್ನು ಕದ್ದಾಲಿಸಲಾಗಿದೆ ಎನ್ನುವ ಗಂಭೀರ ಆರೋಪ ಈಗ ಎಚ್‍ಡಿಕೆಯ ಮೇಲೆ ಬಂದಿದೆ. ಮಾಧ್ಯಮಗಳ ಜೊತೆ ಮಾತನಾಡಿದ್ದ ಬಿಜೆಪಿ ಮುಖಂಡ ಆರ್. ಅಶೋಕ್, ಕುಮಾರಸ್ವಾಮಿ ಅವಧಿಯಲ್ಲಿ ರಾಜ್ಯ ನಾಯಕರ ಫೋನ್ ಕರೆ ಟ್ಯಾಪ್ ಮಾಡಲಾಗುತ್ತಿದೆ ಎಂದು ಹೇಳಿದ್ದೆ. ಅದು ಈಗ ನಿಜವಾಗಿದೆ. ಸಿದ್ದರಾಮಯ್ಯನವರ ಮೇಲೆ ಕುಮಾರಸ್ವಾಮಿ ಅವರಿಗೆ ನಂಬಿಕೆ ಇರಲಿಲ್ಲ. ಹೀಗಾಗಿ ಅವರ ಫೋನನ್ನು ಕದ್ದಾಲಿಸಲಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

ಅನರ್ಹ ಶಾಸಕ ವಿಶ್ವನಾಥ್ ಪ್ರತಿಕ್ರಿಯಿಸಿ, ಇದೇ ವೇಳೆ ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ದೊಡ್ಡ ಮಟ್ಟದಲ್ಲಿ ನಡೆದಿದೆ. ಸಿದ್ದರಾಮಯ್ಯ ಅವರ ಪಿಎ ವೆಂಕಟೇಶ್ ಎಂಬವರ ಫೋನ್ ಕದ್ದಾಲಿಕೆ ಮಾಡಲಾಗಿದೆ. ರೆಬೆಲ್ ಶಾಸಕರ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ. ಹೀಗೆ ಕದ್ದಾಲಿಕೆ ಮಾಡಿ ರೆಬೆಲ್ ಶಾಸಕರನ್ನು ಸಿಎಂ (ಹೆಚ್‍ಡಿಕೆ) ಕಚೇರಿಯಿಂದ ಬ್ಲಾಕ್ ಮೇಲ್ ಮಾಡಲಾಯಿತು. ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದವನ ದೂರವಾಣಿಯನ್ನು ಜೆಡಿಎಸ್ ಮುಖ್ಯಮಂತ್ರಿಯೇ ಕದ್ದಾಲಿಕೆ ಮಾಡಿದ್ದಾರೆ. ನಮ್ಮ ಮೇಲೆ ನಿಮಗೆ ವಿಶ್ವಾಸ ಇರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ವಿಶ್ವನಾಥ್ ಮಾತನಾಡಿರುವುದು ಸಿಕ್ಕಿದೆ ಚೀ ಚೀ ಕೇಳಿಸಿಕೊಳ್ಳಲು ಆಗಲ್ಲ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದ್ದರು. ನಾನು ಮೊಬೈಲ್‍ನಲ್ಲಿ ಸಾವಿರ ಮಾತನಾಡುತ್ತೇನೆ. ಹೀಗೆ ಮಾತಾಡಬೇಕು ಎಂದು ಹೇಳೋಕೆ ನೀವು ಯಾರು? ಬೆಂಗಳೂರು ಪೊಲೀಸ್ ಆಯುಕ್ತರ ದೂರವಾಣಿಯೆ ಕದ್ದಾಲಿಕೆ ಮಾಡಲಾಗಿದೆ. ರಾಜ್ಯದ ಸಿಎಂ ಆಗಿ ಹೆಚ್‍ಡಿಕೆ ಎಲ್ಲಾ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹಳ್ಳಿ ಕಡೆ ಮನೆಯವರಿಗೆ ಮನೆಯವರೇ ಮದ್ದು ಹಾಕುತ್ತಾರೆ ಎನ್ನುವ ಮಾತಿದೆ ಇದು ಅದೇ ಕಥೆ ಎಂದು ವ್ಯಂಗ್ಯವಾಡಿದ್ದಾರೆ.

ಫೋನ್ ಕದ್ದಾಲಿಕೆ ಆರೋಪ ಬರುವುದು ಇದೇ ಮೊದಲೆನಲ್ಲ. ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧವೂ ಫೋನ್ ಕದ್ದಾಲಿಕೆ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇಲ್ಲಿ ಫೋನ್ ಕದ್ದಾಲಿಕೆ ಎಂದರೇನು? ಯಾರು ಮಾಡಬಹುದು? ಹೇಗೆ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ವಿವರಿಸಲಾಗಿದೆ.

ಕ್ರಿಮಿನಲ್ ಕೃತ್ಯ ಎಸಗಲಿರುವವರನ್ನು, ಎಸಗಿದವರನ್ನು ಎಲ್ಲೇ ಅಡಗಿದ್ದರೂ ಪತ್ತೆ ಹಚ್ಚಿ ಅವರನ್ನು ಪತ್ತೆ ಹಚ್ಚಲು ಫೋನ್ ಕದ್ದಾಲಿಕೆ ಮಾಡಲಾಗುತ್ತದೆ. ಕಾನೂನಿನ ಅನ್ವಯ ಸರ್ಕಾರದ ಕೆಲವೇ ಇಲಾಖೆಗಳಿಗೆ ಮಾತ್ರ ಫೋನ್ ಕದ್ದಾಲಿಕೆ ಮಾಡಲು ಅವಕಾಶವಿದ್ದು, ಈಗ ಕೆಲವು ಸಮಾಜ ಘಾತುಕ ಶಕ್ತಿಗಳು ಫೋನ್ ಟ್ಯಾಪಿಂಗ್ ಮಾಡಲು ಆರಂಭಿಸಿವೆ. ಇಂದು ರಾಜಕಾರಣಿಗಳು, ಗಣ್ಯ ವ್ಯಕ್ತಿಗಳ ಫೋನ್ ಟ್ಯಾಪಿಂಗ್ ಹೆಚ್ಚಾಗುತ್ತಿದ್ದು, ಅಡಳಿತ ಪಕ್ಷದ ವಿರುದ್ಧ ವಿರೋಧಿ ಪಕ್ಷಗಳು ಫೋನ್ ಕದ್ದಾಲಿಕೆ ಆರೋಪ ಮಾಡುತ್ತಿದೆ.

ಏನಿದು ಫೋನ್ ಕದ್ದಾಲಿಕೆ?
ವಿಶೇಷ ಎಲೆಕ್ಟ್ರಾನಿಕ್ ಸಾಧನಗಳ ನೆರವಿನಿಂದ ಇಬ್ಬರು ಮಾತನಾಡುತ್ತಿರುವುದನ್ನು ಮೂರನೇಯವರು ಕದ್ದಾಲಿಸುವುದು ಫೋನ್ ಕದ್ದಾಲಿಕೆ. ಫೋನ್ ಕದ್ದಾಲಿಕೆಗೆ ಕಾನೂನಿನಡಿ ಅವಕಾಶವೂ ಇದೆ. ಆದರೆ ಇದಕ್ಕೆ ನಿರ್ದಿಷ್ಟ ರೀತಿ ನೀತಿಗಳಿವೆ. ಅದು ಹೊರತಾಗಿ ಕದ್ದಾಲಿಸಿದರೆ ಅದು ಕಾನೂನಿನ ಅಡಿ ಅಪರಾಧವಾಗುತ್ತದೆ.

ಆಧುನಿಕ ತಂತ್ರಜ್ಞಾನ ಬೆಳೆದಂತೆ ಫೋನ್ ಕದ್ದಾಲಿಕೆ ಮಾಡಲೆಂದೇ ಹೊಸ ಸಾಧನಗಳು ತಯಾರಾಗಿವೆ. ಅಲ್ಲದೇ ದೇಶ ವಿದೇಶದಿಂದ ಫೋನ್ ಕದ್ದಾಲಿಕೆ ಮಾಡುವ ಸಾಧನಗಳು ಅಕ್ರಮವಾಗಿ ದೇಶದೊಳಗೆ ರವಾನಿಸುವ ಜಾಲವೂ ಹುಟ್ಟಿಕೊಂಡಿದೆ. ತಜ್ಞರ ಪ್ರಕಾರ ಈ ಸಾಧನಗಳು ಸುಮಾರು ಎರಡು ಕಿ.ಮೀ. ದೂರದ ವರೆಗಿನ ವ್ಯಕ್ತಿಗಳ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡುವ ಸಾಮರ್ಥ್ಯ ಹೊಂದಿರುತ್ತವೆ.

ಯಾರಿಗೆ ಅನುಮತಿ ಇದೆ?
ಸಮಾಜ ಘಾತುಕ ಶಕ್ತಿಗಳ ಚಲನವಲನ, ಕ್ರಿಮಿನಲ್ ಸಂಚು, ದೇಶದ, ಗಣ್ಯರ ವಿರುದ್ಧ ದಾಳಿಯಂತಹ ಚಟುವಟಿಕೆಗಳನ್ನು ತಡೆಯಲು ಗುಪ್ತಚರ ಸಂಸ್ಥೆಗಳು ಫೋನ್ ಕದ್ದಾಲಿಕೆ ಮಾಡುತ್ತವೆ. ಸಿಬಿಐ, ಗುಪ್ತಚರ ಇಲಾಖೆ, ಕಂದಾಯ ಗುಪ್ತಚರ, ಮಾದಕವಸ್ತು ನಿಯಂತ್ರಣ ದಳ, ಆದಾಯ ತೆರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಕದ್ದಾಲಿಕೆಯನ್ನು ಕಾನೂನಿನ ಅಡಿ ಮಾಡಬಹುದು. ಫೋನ್ ಕದ್ದಾಲಿಸಲು ಉಪಗ್ರಹ ಆಧಾರಿತ ವ್ಯವಸ್ಥೆಗಳು, ಟೆಲಿಫೋನ್ ಎಕ್ಸ್ ಚೇಂಜ್‍ನ ನೆರವಿನೊಂದಿಗೆ ಪ್ರತ್ಯೇಕ ಎಲೆಕ್ಟ್ರಾನಿಕ್ ವ್ಯವಸ್ಥೆಗಳ ಮೂಲಕ ಕದ್ದಾಲಿಕೆ ಮಾಡಲಾಗುತ್ತದೆ.

ನಿಯಮ ಏನು ಹೇಳುತ್ತೆ?
1885ರ ಇಂಡಿಯನ್ ಟೆಲಿಗ್ರಾಫ್ ಕಾಯ್ದೆ ಸೆಕ್ಷನ್ 5 (2)ರಲ್ಲಿ 419ನೇ ಮತ್ತು 419ಎ ನಿಬಂಧನೆಗಳಲ್ಲಿ ಫೋನ್ ಕರೆಗಳ ಮಾಹಿತಿ ಪಡೆಯುವ, ಕೇಳುವ ಬಗ್ಗೆ ಹೇಳಲಾಗಿದೆ. ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ, ಭದ್ರತೆಗೆ ತೊಂದರೆಯಾಗುವ ವಿಚಾರಗಳಲ್ಲಿ ಫೋನ್ ಕದ್ದಾಲಿಕೆಗೆ ಅವಕಾಶವಿದ್ದು ಕ್ಯಾಬಿನೆಟ್ ಕಾರ್ಯದರ್ಶಿ, ಕಾನೂನು ಕಾರ್ಯದರ್ಶಿ ಈ ಬಗ್ಗೆ ನಿರ್ಧಾರ ಕೈಗೊಂಡು, ಗೃಹ ಇಲಾಖೆಗೆ ಮಾಹಿತಿ ನೀಡಬೇಕು. ಈ ಬಗ್ಗೆ ಗೃಹ ಇಲಾಖೆ 2 ತಿಂಗಳೊಳಗೆ ಪರಿಶೀಲನೆ ನಡೆಸಿ ತೀರ್ಮಾನಿಸಬೇಕು. ಒಂದು ಬಾರಿ ಅನುಮತಿ ನೀಡಿದರೆ ಅದು 6 ತಿಂಗಳ ಅವಧಿಯದ್ದಾಗಿರುತ್ತದೆ. ಹೀಗೆ ಕದ್ದಾಲಿಕೆ ವೇಳೆ ಪಡೆದ ಮಾಹಿತಿಗಳನ್ನು ಬಳಸಿ 2 ತಿಂಗಳೊಳಗೆ ಅವುಗಳನ್ನು ನಾಶಪಡಿಸಬೇಕು. ಇದು ಹೊರತಾಗಿ ಕೋರ್ಟ್ ನಿರ್ದೇಶನದ ಮೇರೆಗೆ ಫೋನ್ ಕದ್ದಾಲಿಕೆಗೆ ಅವಕಾಶವಿದೆ.

ಒಂದೊಮ್ಮೆ ಫೋನ್ ಕದ್ದಾಲಿಕೆಯಾದರೆ ವ್ಯಕ್ತಿಯ ಖಾಸಗಿ ತನಕ್ಕೆ ಧಕ್ಕೆ ತಂದದ್ದಕ್ಕಾಗಿ ಆತ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಬಹುದು. ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಬಹುದು. ಅಕ್ರಮ ಕದ್ದಾಲಿಕೆ ವಿಚಾರದ ಬಗ್ಗೆ ಭಾರತೀಯ ಟೆಲಿಗ್ರಾಫ್ ಕಾಯ್ದೆಯ ಸೆ26(ಬಿ) ಅಡಿಯಲ್ಲಿ ಕೋರ್ಟ್ ಗೂ ದೂರು ನೀಡಬಹುದು. ಒಂದು ವೇಳೆ ಕದ್ದಾಲಿಸಿದ್ದು ಸಾಬೀತಾದರೆ ಅಪರಾಧಿಗೆ 3 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶವಿದೆ.

Leave a Reply

Your email address will not be published. Required fields are marked *