Bengaluru City

ಪೆಟ್ರೋಲ್, ಡಿಸೇಲ್ ಜಿಎಸ್ಟಿಗೆ ಸೇರಿಸಬೇಡಿ: ಕುಮಾರಸ್ವಾಮಿ

Published

on

Share this

ಬೆಂಗಳೂರು: ಪೆಟ್ರೋಲ್, ಡೀಸೆಲ್ ಉತ್ಪನ್ನಗಳನ್ನ ಜಿಎಸ್‍ಟಿ ಅಡಿ ತರಬಾರದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಅಷ್ಟೆ ಅಲ್ಲ ಜಿಎಸ್ಟಿಗೆ ಪೆಟ್ರೋಲಿಯಂ ಉತ್ಪನ್ನ ಸೇರಿಸಲು ಎರಡು ರಾಷ್ಟ್ರೀಯ ಪಕ್ಷಗಳು ಮಾಡ್ತಿರೋ ಹುನ್ನಾರ ಅಂತ ಆರೋಪ ಮಾಡಿದ್ದಾರೆ.

ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಸುತ್ತಿದೆ.ಇತ್ತ ಕಾಂಗ್ರೆಸ್ ದೇಶದಾದ್ಯಂತ ಹೋರಾಡುತ್ತಿದೆ. ಪೆಟ್ರೋಲ್ ಬೆಲೆ ಇಳಿಯಬೇಕಿದ್ದರೆ ಅದನ್ನು ಜಿಎಸ್ಟಿಗೆ ಸೇರಿಸಬೇಕೆಂದು ಕೇಂದ್ರ ಹೇಳಿದರೆ, ಕಾಂಗ್ರೆಸ್ ಕೂಡ ಅದನ್ನೇ ಪ್ರತಿಪಾದಿಸಿದೆ. ಹಾಗಾದರೆ,ಕಾಂಗ್ರೆಸ್ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್ ಅನ್ನು ಜಿಎಸ್ಟಿಗೆ ಸೇರಿಸಲೋ ಪೆಟ್ರೋಲಿಯಂ ಖಾತೆಯ ಮಾಜಿ ಸಚಿವರೂ, ಕಾಂಗ್ರೆಸ್‍ನ ಹಿರಿಯರೂ ಆಗಿರುವ ನಾಯಕರೊಬ್ಬರು ಪೆಟ್ರೋಲನ್ನು ಜಿಎಸ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ವೇಳೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಶೇಷ ಜೋಡಿ

ಪೆಟ್ರೋಲ್ ಮೇಲಿನ ಮಿತಿ ಇಲ್ಲದ ತೆರಿಗೆ ಇಳಿಸುವುದು ಕಾಂಗ್ರೆಸ್ ಉದ್ದೇಶವಲ್ಲ, ಅದನ್ನು ಜಿಎಸ್ಟಿಗೆ ಸೇರಿಸುವುದಷ್ಟೇ ಅದರ ಉದ್ದೇಶ ಎಂಬುದು ಸಾಬೀತಾಗಿದೆ. ಆದರೆ ಅದರ ಅಪಾಯ ಕಾಂಗ್ರೆಸ್‍ಗೆ ಗೊತ್ತಿಲ್ಲ. ಕೇಂದ್ರದ ಅಧಿಕಾರದ ಮೇಲೆ ಕಣ್ಣಿಟ್ಟು ಅದರ ಸುತ್ತಲೇ ರಾಜಕಾರಣ ಮಾಡುವುದಷ್ಟೇ ರಾಷ್ಟ್ರೀಯ ಪಕ್ಷಗಳ ಅಜೆಂಡಾವಾಗಿದೆ. ಅವುಗಳಿಗೆ ರಾಜ್ಯಗಳ ಹಿತಾಸಕ್ತಿ, ಸ್ಥಳೀಯ ಅಗತ್ಯಗಳು ಲೆಕ್ಕಕ್ಕೇ ಇಲ್ಲ. ಪೆಟ್ರೋಲ್ ಅನ್ನು ಜಿಎಸ್ಟಿಗೆ ಸೇರಿಸುವುದು ರಾಜ್ಯಗಳನ್ನು ಶೋಷಿಸಿದಂತೆ. ಈಗ ಕಾಂಗ್ರೆಸ್ ಬಿಜೆಪಿಗಳೆರಡೂ ಆ ಶೋಷಣೆ ಪರವಾಗಿ ನಿಂತಿವೆ ಎಂಬುದು ಬಹಿರಂಗವಾಗಿದೆ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪ್ಯಾರಾ ಒಲಂಪಿಕ್ ಕ್ರೀಡಾಪಟುಗಳಿಗೆ ಆಹಾರ ಕಿಟ್ ವಿತರಣೆ

ಪೆಟ್ರೋಲ್ ಜಿಎಸ್ಟಿಗೆ ತಂದರೆ ಜನರಿಗೆ ತಕ್ಷಣಕ್ಕೆ ಬೆಲೆ ಇಳಿದಂತೆ ಅನ್ನಿಸಬಹುದು. ಆದರೆ, ಪೆಟ್ರೋಲನ್ನು ಜಿಎಸ್ಟಿಗೆ ಸೇರಿಸುತ್ತಲೇ ಅದರ ಮೇಲಿನ ತೆರಿಗೆಯಿಂದ ಬರುತ್ತಿದ್ದ ಸಂಪನ್ಮೂಲ ರಾಜ್ಯಗಳ ಕೈತಪ್ಪಿ ಹೋಗುತ್ತದೆ. ಎಲ್ಲ ತೆರಿಗೆಯೂ ಕೇಂದ್ರದ ಪಾಲಾಗಿ ರಾಜ್ಯಗಳು ಸಂಪನ್ಮೂಲ ಬರ ಎದುರಿಸುತ್ತವೆ. ರಾಜ್ಯಗಳ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ. ತೈಲ ಬೆಲೆ ಇಳಿಸುವ ಉದ್ದೇಶದೊಂದಿಗೆ ಪೆಟ್ರೋಲನ್ನು ಜಿಎಸ್ಟಿಗೆ ಸೇರಿಸುವುದು ಪರಿಹಾರವಲ್ಲ. ಅದು ಶೋಷಣೆ. ಬದಲಿಗೆ ಕೇಂದ್ರ ಈಗ ವಿಧಿಸುತ್ತಿರುವ ಮಿತಿಮೀರಿದ ಸುಂಕ ಕಡಿತ ಮಾಡಲಿ. ರಾಜ್ಯ ಸರ್ಕಾರವೂ ತೆರಿಗೆ ಇಳಿಸಲಿ. ಈಗ ತೈಲದ ಮೇಲೆ ಕೇಂದ್ರ, ರಾಜ್ಯಗಳೆರಡೂ ಶೇ. 68ರಷ್ಟು ತೆರಿಗೆ ವಿಧಿಸುತ್ತಿವೆ. ಈ ತೆರಿಗೆ ಪ್ರಮಾಣ ಕಡಿಮೆಯಾಗಬೇಕಾದ್ದು ಅಗತ್ಯವಾಗಿದೆ ಎಂದಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈಗ ಒಂದು ಲೀಟರ್ ಪೆಟ್ರೋಲ್ ಮೇಲೆ 60-65 ತೆರಿಗೆ ಹಣ ಸಿಗುತ್ತಿದೆ. ಆದರೆ, ಎರಡೂ ಸರ್ಕಾರಗಳೂ ಲೀಟರ್ ಪೆಟ್ರೋಲ್ ಮೇಲೆ ಸಂಗ್ರಹಿಸುವ ಹಣ 30 ಮೀರಬಾರದು.ಆಗ ಪೆಟ್ರೋಲ್ 65-70ಗೆ ಬಂದು ನಿಲ್ಲಲಿದೆ. ನಿಜವಾಗಿಯೂ ಆಗಬೇಕಾದ್ದು ಇದು. ಈ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಡಬೇಕಿದೆ. ಪೆಟ್ರೋಲ್ ಬೆಲೆ ಏರಿಕೆ ವಿರುದ್ಧದ ಹೋರಾಟಗಳು ತೆರಿಗೆ, ಸುಂಕ ಇಳಿಕೆಯ ಉದ್ದೇಶದ್ದಾಗಿರಬೇಕೇ ವಿನಾ ಜಿಎಸ್ಟಿಗೆ ಸೇರಿಸುವುದಾಗಿರಬಾರದು. ಈಗ ಕಾಂಗ್ರೆಸ್ ಪ್ರತಿಭಟಿಸುತ್ತಿರುವುದು ತೆರಿಗೆ ಇಳಿಸಲೋ ಅಥವಾ ಪೆಟ್ರೋಲನ್ನು ಜಿಎಸ್ಟಿಗೆ ಸೇರಿಸಲೋ ಎಂಬುದು ಸ್ಪಷ್ಟವಾಗಬೇಕು. ಜಿಎಸ್ಟಿಗೆ ಸೇರಿಸುವುದೇ ಕಾಂಗ್ರೆಸ್ ಉದ್ದೇಶವಾಗಿದ್ದರೆ ಅದು ಶೋಷಣೆ ಪರವಾದ ಹೋರಾಟವಾಬೇಕುಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಪೆಟ್ರೋಲ್ ಮೇಲೆ ಕೇಂದ್ರ, ರಾಜ್ಯ ಸರ್ಕಾರಗಳೆರಡು ವಿಧಿಸುತ್ತಿರುವ ಅತ್ಯಧಿಕ ತೆರಿಗೆ ಇಳಿಸುವ ಮೂಲಕ ಬೆಲೆ ಏರಿಕೆ ತಗ್ಗಿಸಬೇಕು ಎಂಬುದು ಜೆಡಿಎಸ್ ಒತ್ತಾಯ ಆಗಿದೆ.ಜತೆಗೆ ಪೆಟ್ರೋಲನ್ನು ಜಿಎಸ್ಟಿಗೆ ಸೇರಿಸುವ ರಾಷ್ಟ್ರೀಯ ಪಕ್ಷಗಳ ಹುನ್ನಾರದ ವಿರುದ್ಧ ಹೋರಾಡುವುದೂ ನಮ್ಮ ನಿಲುವು. ಇದರ ಸುತ್ತಲೇ ನಾವು ಹೋರಾಟ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement