Tuesday, 18th June 2019

Recent News

ಸಿಎಂ ಮೇಲೆ ಗಣಿ ಕಳಂಕ- 2 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಎಚ್‍ಡಿಕೆ ಆರೋಪ

ಬೆಂಗಳೂರು: ಅಸೆಂಬ್ಲಿ ಎಲೆಕ್ಷನ್ ಹೊತ್ತಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಗಣಿ ಅಕ್ರಮದ ಆರೋಪ ಕೇಳಿ ಬಂದಿದೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ, ಸರ್ಕಾರದ ಗಣಿ ಇಲಾಖೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಒಂದು ತಿಂಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದೆ. ಆ ಸಮಯ ಈಗ ಬಂದಿದೆ. ಭ್ರಷ್ಟಾಚಾರ ವಿಷಯದ ಬಗ್ಗೆ ಇತ್ತೀಚೆಗೆ ಮಾತನಾಡಲು, ಅಕ್ರಮಗಳ ಬಗ್ಗೆ ನಾವು ಎಷ್ಟು ದಾಖಲೆ ಕೊಟ್ಟರೂ ಹಾಗೂ ತಾರ್ಕಿಕ ಅಂತ್ಯ ಮುಟ್ಟಿಸಲು ಆಗುತ್ತಿಲ್ಲ ಅನ್ನೋ ಬೇಸರ ಇದೆ ಎಂದು ಹೇಳಿದ್ರು.

ಗಣಿ ಇಲಾಖೆ ಮಂತ್ರಿ ನೆಪ ಮಾತ್ರಕ್ಕೆ ಅಷ್ಟೇ. ಸಿಎಂ ಕಚೇರಿಯಲ್ಲೇ ಇಲಾಖೆ ನಿರ್ವಹಣೆ ಆಗುತ್ತಿದೆ. ರಾಮನ ಲೆಕ್ಕ ಕೃಷ್ಣನ ಲೆಕ್ಕ ಆಗುತ್ತಿರೋದು ಅಲ್ಲಿಂದಲೇ. ಗಣಿ ಮಂತ್ರಿ ವಿನಯ್ ಕುಲಕರ್ಣಿ ಅವರನ್ನ ಸಮಾಜ ಒಡೆಯುವ ಕೆಲಸಕ್ಕೆ ನೇಮಿಸಿದ್ದಾರೆ. ಸಿಎಂ ಧರ್ಮ ಪ್ರಚಾರಕ್ಕೆ ವಿನಯ್ ಕುಲಕರ್ಣಿ ಅವರನ್ನ ನೇಮಿಸಿದ್ದಾರೆ ಎಂದು ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ರು.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ಬಳಿ ಸುಬ್ಬರಾಯನ ಹಳ್ಳಿ, ತಿಮ್ಮಪ್ಪನ ಗುಡಿ ಬಳಿ ಎಂ.ಎಂ. ಹಿಲ್ಸ್ ಗೆ ಗಣಿ ಗುತ್ತಿಗೆ ನೀಡಲಾಗಿದೆ. ಮುಚ್ಚಂಡಿ ಎಂಟರ್ ಪ್ರೈಸಸ್‍ನಿಂದ ಅಕ್ರಮ ನಡೆದಿದೆ. ಸಿದ್ದರಾಮಯ್ಯ ಅವರ ಸರ್ಕಾರ ಮೂರು ಕಂಪನಿಗಳಿಗೆ ರೈಸಿಂಗ್ ಕಾಂಟ್ರಾಕ್ಟ್ ನೀಡಿದ್ದಾರೆ. ಸುಬ್ಬರಾಯನ ಹಳ್ಳಿ ಬಳಿ 30 ಲಕ್ಷ ಮೆಟ್ರಿಕ್ ಟನ್ ಉತ್ಖನನ ಮಾಡಲು ಅವಕಾಶ ನೀಡಲಿದೆ. ಟೆಂಡರ್ ಕೊಡುವುದಕ್ಕೆ, ಅಗ್ರಿಮೆಂಟ್ ಮಾಡಿಕೊಳ್ಳುವುದಕ್ಕೆ ಮುಂಚೆ ಆ ಕಂಪನಿ ಮೈನಿಂಗ್ ಶುರು ಮಾಡಿದ್ದಾರೆ ಎಂದು ಹೇಳಿದ್ರು.

2014-15 ನೇ ಸಾಲಿನಲ್ಲೇ 2062 ಕೋಟಿ ರೂಪಾಯಿ ಅಕ್ರಮ ನಡೆದಿದೆ. ಈವರೆಗಿನ ಲೆಕ್ಕ ತೆಗೆದರೆ ಇದು ಇನ್ನೂ ದೊಡ್ಡ ಮೊತ್ತವಾಗಲಿದೆ. ಹೇಮಲತಾ ಎಂಬ ಅಧಿಕಾರಿ ಅಕ್ರಮದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದರು. ಆದರೆ ತಕ್ಷಣ ಅವರನ್ನು ಎತ್ತಂಗಡಿ ಮಾಡಿದರು. ಮೂರು ವರ್ಷಗಳಲ್ಲಿ 8 ಜನ ಅಧಿಕಾರಿಗಳು ಬದಲಾಗಿದ್ದಾರೆ. ತುಷಾರ್ ಗಿರಿನಾಥ್ ಅವರ ಅವಧಿಯಲ್ಲೇ ಇಷ್ಟೆಲ್ಲ ಅಕ್ರಮ ನಡೆದಿದೆ. ಈ ಕಾರಣಕ್ಕಾಗಿಯೇ ತುಷಾರ್ ಅವರನ್ನು ಸಿಎಂ ಕಚೇರಿಯಲ್ಲಿ ಉಳಿಸಿಕೊಂಡಿದ್ದಾರೆ. ತೋರಿಕೆಗೆ ಅಕ್ರಮದ ತನಿಖೆಗೆ ಸಮಿತಿ ರಚಿಸುತ್ತಾರೆ. ಜೊತೆಗೆ ಹಿರಿಯ ಅಧಿಕಾರಿಗಳ ಸಮಿತಿ ರಚಿಸಿ, ಅಕ್ರಮ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಅಷ್ಟೇ ಅಲ್ಲದೇ ಬಿಎಸ್‍ವೈ ಗೊತ್ತಾಗದೆ ಚೆಕ್ ಮೂಲಕ ಹಣ ಪಡೆದಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಬೇರೆ ಮಾರ್ಗದ ಮುಖಾಂತರ ವ್ಯವಹಾರ ನಡೆಸಿದ್ದರು ಎಂದು ಹೇಳಿದರು.

ಮುಚ್ಚಂಡಿ ಕಂಪನಿಯಿಂದ ಭಾರಿ ಅಕ್ರಮ ನಡೆದಿದ್ದು, 2014-15 ರಲ್ಲಿ ಅದಿರು ಉತ್ಪಾದನೆ ಮಾಡಿರುವುದು 22,90,715 ಮೆಟ್ರಿಕ್ ಟನ್. ಆದರೆ ವರದಿ ಮಾಡಿರುವುದು  13,94,715 ಮೆ. ಟನ್. ಇವುಗಳ ಬಗ್ಗೆ ಮಾಡಿದ ಮೈನ್ಸ್ ಪ್ರೊಡಕ್ಷನ್ ರಿಜಿಸ್ಟರ್ ದಾಖಲೆಗಳೇ ಮಾಯವಾಗಿದೆ. 2015-16 ರಲ್ಲಿ ರೈಸಿಂಗ್ ಕಾಂಟ್ರಾಕ್ಟರ್ ಕೂಡಾ ರಿಜಿಸ್ಟರ್ ಗೆ ಸಹಿ ಮಾಡಿಲ್ಲ. ಉಸ್ತುವಾರಿ ಅಧಿಕಾರಿ ಕೂಡಾ ಸಹಿ ಮಾಡಿಲ್ಲ. 2015-16 ರಲ್ಲಿ ಕೂಡಾ ಇಷ್ಟೇ ಪ್ರಮಾಣದ ಅಕ್ರಮ ನಡೆದಿದೆ. 2014 ರಿಂದ 17 ರವರೆಗೆ ಅಧಿಕೃತವಾಗಿ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ಗೆ 60,56,440 ಮೆ. ಟನ್ ಅದಿರನ್ನು ಗಣಿಗಾರಿಕೆ ಮಾಡಿದ ಬಗ್ಗೆ ವರದಿ ನೀಡಲಾಗಿದೆ. ಇದರ ಮೌಲ್ಯ ಟನ್‍ಗೆ ಮೂರು ಸಾವಿರದಂತೆ ಲೆಕ್ಕ ಹಾಕಿದರೂ 5,450 ಕೋಟಿ ಆಗುತ್ತದೆ. ಆದರೆ ಇದರ ಎರಡು ಪಟ್ಟು ಅಕ್ರಮ ನಡೆದಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಮುಚ್ಚಂಡಿ ಸಂಸ್ಥೆಯ ಬಳಿ ಗಣಿಗಾರಿಕೆ ಯಂತ್ರಗಳೇ ಇರಲಿಲ್ಲ. ಮುಚ್ಚಂಡಿ ಹೆಸರಲ್ಲಿ ಸೌತ್ ವೆಸ್ಟ್ ಮೈನಿಂಗ್ ಕಾರ್ಪೊರೇಷನ್ ಕಂಪನಿ ಗಣಿಗಾರಿಕೆ ಮಾಡಿದೆ. ಯಡಿಯೂರಪ್ಪ ಅವರೊಂದಿಗೆ ಇದ್ದ ಸೌತ್‍ವೆಸ್ಟ್ ಮೈನಿಂಗ್ ಸಂಸ್ಥೆಯ ಸಂಬಂಧ ಈ ಸರ್ಕಾರದಲ್ಲೂ ಮುಂದುವರಿದೆ ಎಂದು ಹೇಳಿದ್ರು

ಈ ಕಂಪನಿಗಳ ಮಾಲೀಕರು ಯಾರು ಎಂದು ನನಗೆ ಗೊತ್ತಿಲ್ಲ. ನನಗೆ ದುಡ್ಡು ಕೊಡುವುದಕ್ಕೂ ಯಾರೂ ಬರೋದಿಲ್ಲ. ಆದರೆ ನನ್ನ ಮನೆಗೆ ಬರುವವರೆಲ್ಲಾ ನನ್ನ ಹತ್ತಿರವೇ ದುಡ್ಡು ಕಿತ್ತುಕೊಂಡು ಹೋಗುತ್ತಾರೆ. ರಾಜ್ಯದ ಆಸ್ತಿ ಹೊಡೆಯುವವರ ಬಳಿ ಕಿಕ್ ಬ್ಯಾಕ್ ಪಡೆಯುವ ವ್ಯಕ್ತಿ ನಾನಲ್ಲ. ರಾಜ್ಯದ ಆಸ್ತಿ ಉಳಿಯಬೇಕು. ಇವತ್ತೂ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯ ಮಂತ್ರಿಗಳು ರಾಜ್ಯದ ಜನರಿಗೆ ಯಾವ್ಯಾವುದೋ ಭಾಗ್ಯ ಕೊಟ್ಟಿದ್ದಾರಲ್ಲಾ ಹಾಗೆ ರೈತರಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿದ್ದಾರೆ ಎಂದು ಸಿಎಂ ವಿರುದ್ಧ ಕಿಡಿ ಕಾರಿದರು.

 

Leave a Reply

Your email address will not be published. Required fields are marked *