Monday, 24th February 2020

ಪಕ್ಷಕ್ಕೆ ದುಡಿದ ವ್ಯಕ್ತಿಗಳ ಫೋಟೋ ಜೆಡಿಎಸ್ ವೆಬ್‍ಸೈಟಿನಲ್ಲಿ ಇಲ್ಲ- ಕನ್ನಡ ತರ್ಜುಮೆಯಲ್ಲಿ ತಪ್ಪುಗಳ ಸರಮಾಲೆ

ಬೆಂಗಳೂರು: ಜಾತ್ಯಾತೀತ ಜನತಾ ದಳ ಇಂದು ವೆಬ್‍ಸೈಟ್ ಲೋಕಾರ್ಪಣೆ ಮಾಡಿದೆ. ಆದರೆ ಈ ವೆಬ್‍ಸೈಟಿನಲ್ಲಿ ಪಕ್ಷ ಕಟ್ಟಿದ ನಾಯಕರ ಫೋಟೋಗಳು ಕಾಣುತ್ತಿಲ್ಲ. ಅಷ್ಟೇ ಅಲ್ಲದೇ ಕನ್ನಡ ತರ್ಜುಮೆಯಲ್ಲಿ ತಪ್ಪುಗಳ ಸರಮಾಲೆಯೇ ಸೃಷ್ಟಿಯಾಗಿದೆ.

ಇಂದು ಮಾಜಿ ಪ್ರಧಾನಿ ದೇವೇಗೌಡ ಅವರು www.janatadals.com ವೆಬ್‍ಸೈಟ್ ಲೋಕಾರ್ಪಣೆ ಮಾಡಿದ್ದಾರೆ. ಇದರಲ್ಲಿ ಜೆ.ಎಚ್.ಪಟೇಲ್, ಎಂ.ಪಿ. ಪ್ರಕಾಶ್, ಎಸ್ ಬಂಗಾರಪ್ಪ, ಕೃಷ್ಣಪ್ಪ ಅವರ ಭಾವಚಿತ್ರ ಇಲ್ಲದಾಗಿದೆ. ‘ನಮ್ಮ ನಾಯಕರ ಜೀವನ ಮತ್ತು ಇತಿಹಾಸ’ ವಿಭಾಗದಲ್ಲಿ ಎಚ್‍ಡಿ ದೇವೇಗೌಡ, ಎಚ್‍ಡಿ ಕುಮಾರಸ್ವಾಮಿ, ಜಯ ಪ್ರಕಾಶ್ ನಾರಾಯಣ್ ಮತ್ತು ವೈಎಸ್‍ವಿ ದತ್ತಾ ಅವರ ಹೆಸರು ಮಾತ್ರ ಕಾಣುತ್ತಿದೆ.

ಇಂಗ್ಲಿಷ್ ಮತ್ತು ಕನ್ನಡ ಭಾಷೆಯನ್ನು ಹೊಂದಿರುವ ವೆಬ್‍ಸೈಟಿನಲ್ಲಿ ತಪ್ಪು ತಪ್ಪು ಕನ್ನಡವನ್ನು ಬಳಸಲಾಗಿದೆ. ವಾಕ್ಯ ರಚನೆಯೂ ತಪ್ಪಾಗಿದೆ. ಆತುರಕ್ಕೆ ಬಿದ್ದು ವೆಬ್‍ಸೈಟಿಗೆ ದೇವೇಗೌಡರು ಚಾಲನೆ ನೀಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

ವೆಬ್‍ಸೈಟ್ ಉದ್ಘಾಟಿಸಿ ಮಾತನಾಡಿದ ದೇವೇಗೌಡರು, ಪ್ರಥಮ ಬಾರಿಗೆ ನಮ್ಮ ಪಕ್ಷದ ವೆಬ್ ಸೈಟ್ ಪ್ರಾರಂಭ ಮಾಡಿದ್ದೇವೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಂದ ವೆಬ್ ಸೈಟ್ ಇತ್ತು. ಪಕ್ಷಕ್ಕೆ ವೆಬ್ ಸೈಟ್ ಇರಲಿಲ್ಲ. ಈಗ ಪ್ರಾರಂಭ ಮಾಡಿದ್ದೇವೆ. ಪಕ್ಷದ ನಿತ್ಯದ ಕಾರ್ಯಕ್ರಮ ವೆಬ್ ಸೈಟ್ ನಲ್ಲಿ ಅಪ್ ಡೇಟ್ ಆಗಲಿದೆ. ನಾವು ಸಾಮಾಜಿಕ ಜಾಲತಾಣದಲ್ಲಿ ಹಿಂದ್ದೆ ಇದ್ದೇವೆ. ಈಗ ಅದನ್ನು ಸರಿ ಪಡಿಸಲಾಗುವುದು ಎಂದು ತಿಳಿಸಿದರು.

ಜೆಪಿ ಭವನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವೇಗೌಡರು ವೆಬ್‍ಸೈಟಿಗೆ ಚಾಲನೆ ನೀಡಿದರು. ಮಾಜಿ ಶಾಸಕರಾದ ಕೋನರೆಡ್ಡಿ, ಜವರಾಯೇಗೌಡ, ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *