ಸಿದ್ದರಾಮಯ್ಯ ಮೇಲೆ ಕುಮಾರಸ್ವಾಮಿ ಸಿಟ್ಟಾಗಲು ದೇವೇಗೌಡರು ಕಾರಣ?

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಲು ಜೆಡಿಎಸ್ ವರಿಷ್ಠ ದೇವೇಗೌಡ ಕಾರಣವಂತೆ.

ಹೌದು. ಇಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ವಿಧಾನಸೌಧದಲ್ಲಿ ರೈತರ ಸಾಲಮನ್ನಾ ಸಂಬಂಧ ಸಹಕಾರಿ ಬ್ಯಾಂಕುಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ಮಾತನಾಡಿದ ಸಿಎಂ, ಬಜೆಟ್ ಮಂಡನೆ ಮಾಡಬೇಕೋ ಬೇಡವೋ ಚರ್ಚೆ ನಡಿಯುತ್ತಿದೆ. ಲೋಕಸಭಾ ಚುನಾವಣೆ ನಂತರ ಹೊಸ ಬಜೆಟ್ ಮಂಡಿಸಿ ಅಂತಾ ಹೇಳುತ್ತಿದ್ದಾರೆ. ಅಲ್ಲದೆ ನಾನು ಯಾರ ಹಂಗಲ್ಲೂ ಇಲ್ಲ, ಯಾರೂ ಭಿಕ್ಷೆ ಕೊಟ್ಟಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.  ಇದನ್ನು ಓದಿ: ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ: ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಅಸಮಾಧಾನ

ಸರ್ಕಾರದ ವಿರುದ್ಧ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಜನರ ಬಳಿ ಹೇಳಿಕೊಳ್ಳವ ಪರಿಸ್ಥಿತಿಯಲ್ಲಿಲ್ಲ. ಬೇರೆಯವರ ಹಾಗೆ ದುರಹಂಕಾರದಿಂದ ಕೆಲಸ ಮಾಡಿಸಿಕೊಳ್ಳುವ ಸ್ವಭಾವ ನನ್ನದಲ್ಲ ಎಂದು ಎಚ್‍ಡಿಕೆ ಹೇಳಿದ್ದರು. ಎಚ್‍ಡಿಕೆ ಈ ರೀತಿ ಹೇಳಲು ಮುಖ್ಯಮಂತ್ರಿಗಳ ತಂದೆ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರೇ ಕಾರಣ ಎಂದು ಪಕ್ಷದ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಸಿದ್ದರಾಮಯ್ಯ ಅವರನ್ನು ಮೈತ್ರಿಕೂಟದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಮಾಡಿದ್ದೇ ತಪ್ಪಾಯಿತು ಎಂದು ದೇವೇಗೌಡರು ಭಾವಿಸುತ್ತಿದ್ದಾರಂತೆ. ಅಲ್ಲದೇ ಎಲ್ಲದ್ದಕ್ಕೂ ಅವರ ಅಪ್ಪಣೆ ಪಡಿಯಲೇ ಬೇಕಾ? ಬೇಷರತ್ ಬೆಂಬಲ ಅಂದ್ರೆ ಇದೇನಾ ಅಂತಾ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ದೇವೇಗೌಡರು ಒತ್ತಾಯಿಸಿದ್ದರಂತೆ. ಇದರಿಂದಾಗಿ ಇವತ್ತು ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ವಿರುದ್ಧ ಹಾಲಿ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *