Districts
ಪಕ್ಕದ ಜಮೀನಿಗೆ ಹಚ್ಚಿದ ಬೆಂಕಿ – ರೈತನ ಮೆಕ್ಕೆಜೋಳದ ರಾಶಿ ಸುಟ್ಟುಭಸ್ಮ

ಹಾವೇರಿ: ರೈತರೊಬ್ಬರು ಜಮೀನಿನಲ್ಲಿ ಹಚ್ಚಿದ ಬೆಂಕಿಯ ಕಿಡಿ ಪಕ್ಕದ ಜಮೀನಿಗೆ ಹಬ್ಬಿ 9 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳದ ತೆನೆಗಳು ಸುಟ್ಟುಭಸ್ಮವಾಗಿರುವ ಘಟನೆ ವರದಿಯಾಗಿದೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದ ರೈತ ರವಿ ತಿರುಮಲೈ ಮತ್ತು ಪ್ರವೀಣ ತಿರುಮಲೈ ಎಂಬುವರಿಗೆ ಸೇರಿದ ಮೆಕ್ಕೆಜೋಳದ ರಾಶಿ ಬೆಂಕಿಗೆ ಆಹುತಿಯಾಗಿದೆ. ಪಕ್ಕದ ಜಮೀನಿನ ರೈತರೊಬ್ಬರು ತಮ್ಮ ಜಮೀನಿನಲ್ಲಿ ಹಚ್ಚಿದ್ದ ಬೆಂಕಿಯ ಕಿಡಿಯಿಂದ ಮೆಕ್ಕೆಜೋಳದ ರಾಶಿಗೆ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ನಡೆದಿದೆ.
ಘಟನೆಯಿಂದ ಐದು ಲಕ್ಷ ರೂಪಾಯಿ ಮೌಲ್ಯದ ಮೆಕ್ಕ್ಕೆಜೋಳ ಹಾನಿಯಾಗಿದೆ ಎಂದು ವರದಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
