Connect with us

Districts

ಪ್ಯಾಕಿಂಗ್ ಚಾರ್ಜ್ ಹಾಕಿದ ಬಟ್ಟೆ ಅಂಗಡಿಗೆ 13 ಸಾವಿರ ರೂ. ಪಾವತಿಸುವಂತೆ ಆದೇಶ

Published

on

– ಮಾಲೀಕನಿಗೆ ಆದೇಶಿಸಿದ ಜಿಲ್ಲಾ ಗ್ರಾಹಕರ ಆಯೋಗ

ಹಾವೇರಿ: ಬಟ್ಟೆ ಖರೀದಿ ವೇಳೆ ಗ್ರಾಹಕರಿಗೆ ಕಾನೂನು ಬಾಹಿರವಾಗಿ ಬಟ್ಟೆ ಪ್ಯಾಕ್ ಮಾಡಿದ ಪೇಪರ್ ಕ್ಯಾರಿ ಬಾಗ್‍ಗೆ ಪ್ರತ್ಯೇಕ ಬಿಲ್ ನಮೂದಿಸಿದ ಶೋ ರೂಮ್ ಮಾಲೀಕನಿಗೆ ಪರಿಹಾರ ಮೊತ್ತ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ದಾವಣಗೆರೆ ನಗರದ ಜ್ಯೋತಿ ಕೋಂ.ರಾದೇಶ ಜಂಬಗಿ ಅವರು ಡಿಸೆಂಬರ್-2019 ಮಾಹೆಯಲ್ಲಿ ದಾವಣಗೆರೆಯ ಲೈಫ್ ಸ್ಟೈಲ್ ಇಂಟರ್ ನ್ಯಾಶನಲ್ ಪ್ರೈ.ಲಿ.ನಲ್ಲಿ ಬಟ್ಟೆ ಖರೀದಿಸಿದ್ದಾರೆ. ಈ ವೇಳೆ ಅಂಗಡಿಯವರು ಬಟ್ಟೆ ಬಿಲ್ಲಿನ ಜೊತೆಗೆ ಕಾಗದದ ಕೈಚೀಲಕ್ಕೆ 7 ರೂ. ಹೆಚ್ಚುವರಿ ಮೊತ್ತವನ್ನು ನಮೂದಿಸಿ ಬಿಲ್ಲು ನೀಡಿದ್ದಾರೆ. ಹೀಗಾಗಿ ಹೆಚ್ಚುವರಿ 7 ರೂ. ಮೊತ್ತವನ್ನು ಅಂಗಡಿ ಮಾಲೀಕರು ಭರಿಸುವಂತೆ ಅವರು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಸದಸ್ಯೆ ಮಹೇಶ್ವರಿ ಬಿ.ಎಸ್. ಅವರು ಸರಕುಗಳ ಮಾರಾಟ ಕಾಯ್ದೆ-1930 ಕಲಂ 35(5) ಪ್ರಕಾರ ಯಾವುದೇ ಮಾಲ್ ಅಥವಾ ಶೋ ರೂಮ್‍ಗಳಿಗೆ ಗ್ರಾಹಕರು ಹೋದಾಗ ಅವರು ಕೊಂಡುಕೊಂಡಂತಹ ವಸ್ತುಗಳನ್ನು ಗ್ರಾಹಕರು ತಮ್ಮ ಮನೆಗೆ ಅಥವಾ ವಾಹನದವರೆಗೆ ತಲುಪುವಂತೆ ಉಚಿತವಾಗಿ ಯಾವುದೇ ಪರಿಕರದಲ್ಲಿ ಹಾಕಿ ಕೊಡುವುದು ಮಾರಾಟಗಾರನ ಜವಾಬ್ದಾರಿಯಾಗಿದೆ.

ಶೋ ರೂಮ್ ಮಾಲಿಕನು ಪೇಪರ್ ಕ್ಯಾರಿ ಬ್ಯಾಗ್ ಸಲುವಾಗಿ ವಿಧಿಸಿದ ಖರ್ಚು ಕಾನೂನು ಬಾಹಿರವಾಗಿದೆ. ಕಾರಣ ಜ್ಯೋತಿ ಕೋಂ.ರಾದೇಶ ಜಂಬಗಿ ಅವರಿಗೆ ಪೇಪರ್ ಕ್ಯಾರಿ ಬ್ಯಾಗಿಗೆ ಭರಿಸಿದ ವೆಚ್ಚ 7 ರೂ., ಪಿರ್ಯಾದುದಾರರ ಮಾನಸಿಕ ವ್ಯಥೆಗೆ ಒಂದು ಸಾವಿರ ಹಾಗೂ ದಾವೆ ಖರ್ಚು ಎರಡು ಸಾವಿರ ರೂ.ಗಳನ್ನು ಒಂದು ತಿಂಗಳೊಳಗೆ ಪಾವತಿಸಲು ಆದೇಶ ಹೊರಡಿಸಿದ್ದಾರೆ.

ಅನುಚಿತ ವ್ಯಾಪಾರ ಪದ್ಧತಿಗರ ಪ್ರಾಯಶ್ಚಿತ್ತದ ಪರಿಹಾರವಾಗಿ 10ಸಾವಿರ ರೂ.ಗಳನ್ನು ಮಾನ್ಯ ಅಧ್ಯಕ್ಷರು, ಜಿಲ್ಲಾ ಗ್ರಾಹಕ ಆಯೋಗ, ಹಾವೇರಿ ಅವರ “ಗ್ರಾಹಕ ಕಾನೂನು ನೆರವು ಖಾತೆ”ಗೆ ಜಮೆ ಮಾಡಲು ಆದೇಶಿಸಲಾಗಿದೆ.

ನಿಗದಿತ ಅವಧಿಯಲ್ಲಿ ಪರಿಹಾರ ಪಾವತಿಸಲು ವಿಫಲವಾದರೆ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.9ರ ಬಡ್ಡಿ ಸಮೇತ ಪಾವತಿಸಬೇಕು ಎಂದು ಆದೇಶಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರಿ ಸಹಾಯಕ ರಿಜಿಸ್ಟಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಕರಿಯಪ್ಪ ಬಡಪ್ಪಳವರ್ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *