Connect with us

Dharwad

ಬಿಎಸ್‍ವೈ ಪುತ್ರನ ಸಂಧಾನ ವಿಫಲ – ಸ್ಪರ್ಧೆಗೆ ನಿಲ್ತೀನಿ ಎಂದ ಸ್ವಾಮೀಜಿ

Published

on

ಹುಬ್ಬಳ್ಳಿ: ರಟ್ಟೀಹಳ್ಳಿ ಪಟ್ಟಣದಲ್ಲಿರುವ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಜೊತೆ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ ಅವರು ನಡೆಸಿದ ಸಂಧಾನ ವಿಫಲವಾಗಿದೆ.

ಹಿರೇಕೆರೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಜೊತೆ ಮಾತುಕತೆ ನಡೆಸಲು ರಾಘವೇಂದ್ರ ಹಾಗೂ ಮಾಜಿ ಶಾಸಕ ಬಣಕಾರ ತೆರಳಿದ್ದರು. ಆದರೆ ನಾನು ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂಬುದಾಗಿ ಸ್ವಾಮೀಜಿ ಈ ನಾಯಕರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ಸಂಧಾನ ವಿಫಲದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ ರಾಘವೇಂದ್ರ ಅವರು ಮಠದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇನೆ. ಅವರು ಸಹ ಸ್ಪಂದಿಸಿದ್ದಾರೆ. ಸ್ವಾಮೀಜಿಯವರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹುಮ್ಮಸ್ಸು ಇದೆ. ನೋಡೋಣ ಏನಾಗುತ್ತೋ ಎಂದು ಹೇಳಿ ಕಾರು ಹತ್ತಿ ಹೊರಟು ಹೋಗಿದ್ದಾರೆ.

ಇದಾದ ನಂತರ ಮಾತನಾಡಿದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು, ಅವರು ಸಂಧಾನಕ್ಕೆ ಬಂದಿದ್ದರು. ಆದರೆ ನಾನು ಸ್ಪರ್ಧೆ ಮಾಡಿರುವುದಾಗಿ ತಿಳಿಸಿ ಆಶೀರ್ವಾದ ಮಾಡಿ ಕಳುಹಿಸಿರುವೆ. ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಹೇಳಿದರು.

ಕೆಲ ದಿನಗಳಿಂದ ಹಿರೇಕೆರೂರು ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಿದ್ದರು. ಹಿರೇಕೆರೂರು ಕ್ಷೇತ್ರದ ರಾಜಕಾರಣ ಅಪಮೌಲ್ಯ ಆಗಿದೆ. ಕ್ಷೇತ್ರದ ರಾಜಕೀಯ ವ್ಯವಸ್ಥೆ ಸರಿಪಡಿಸಲು ಚುನಾವಣೆಗೆ ಸ್ಪರ್ಧಿಸಿ ಎಂದು ಒತ್ತಡ ಹಾಕಿದ್ದರು. ಕಳೆದ ಎರಡು ದಿನಗಳ ಹಿಂದೆ ಚುನಾವಣೆಗೆ ನಿಲ್ಲದಿರಲು ನಿರ್ಧರಿಸಿದ್ದ ಸ್ವಾಮೀಜಿ ಈಗ ರಾತ್ರೋರಾತ್ರಿ ಹಿರೇಕೆರೂರು ಕ್ಷೇತ್ರದಿಂದ ಜೆಡಿಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.

2018ರ ಚುನಾವಣೆಯಲ್ಲಿ ಬಿಸಿ ಪಾಟೀಲ್ 555 ಮತಗಳ ಅಂತರದಿಂದ ಜಯಗಳಿಸಿದ್ದರು. ಬಿಸಿ ಪಾಟೀಲ್‍ಗೆ 72,461 ಮತಗಳು ಬಿದ್ದರೆ 71,906 ಮತಗಳು ಬಿಜೆಪಿ ಅಭ್ಯರ್ಥಿ ಬಣಕಾರ ಅವರಿಗೆ ಬಿದ್ದಿತ್ತು. ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿದ್ದಪ್ಪ ಗದ್ದಪ್ಪನವರ್ ಅವರಿಗೆ 3,597 ಮತಗಳು ಬಿದ್ದಿತ್ತು.