Connect with us

Crime

ಹಾವೇರಿ ಜೋಡಿ ಕೊಲೆ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

Published

on

ಹಾವೇರಿ: 14 ವರ್ಷದ ಬಾಲಕ ಹಾಗೂ ಯುವಕನ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹಾವೇರಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾವೇರಿ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಕಾಂಪ್ಲೆಕ್ಸ್ ಒಂದರಲ್ಲಿ ಬುಧವಾರ ನಿಂಗಪ್ಪ ಶಿರಗುಪ್ಪಿ(28) ಮತ್ತು ಗಣೇಶ್ ಕುಂದಾಪುರ(14) ಹತ್ಯೆಯಾಗಿದ್ದರು. ಇದೀಗ ಹತ್ಯೆ ಮಾಡಿದ ಆರೋಪಿಗಳನ್ನು ಶಂಭುಲಿಂಗ ಪೋರಾಪುರ ಮತ್ತು ಮಂಜುನಾಥ್ ಯರೆಶೀಮೆ ಎಂದು ಗುರುತಿಸಲಾಗಿದೆ.

ಆರೋಪಿ ಶಂಭುಲಿಂಗ ಹಾಗೂ ಹತ್ಯೆಯಾದ ನಿಂಗಪ್ಪ ಸ್ನೇಹಿತನಾಗಿದ್ದನು. 4 ಲಕ್ಷ ರೂಪಾಯಿ ಕೊಟ್ಟ ಹಣ ಮರಳಿಸದೆ ಬೈಕ್, ಕಾರು ತೆಗೆದುಕೊಂಡು ವಾಪಸ್ ಕೊಡದೆ ಪದೇ ಪದೇ ನಮಗೆ ನಿಂಗಪ್ಪ ಬೆದರಿಕೆ ಹಾಕುತ್ತಿದ್ದ. ಹಾಗಾಗಿ ರಾಡ್ ಮತ್ತು ಡಂಬಲ್ಸ್ ನಿಂದ ಹೊಡೆದು ನಿಂಗಪ್ಪನ ಹತ್ಯೆ ಮಾಡಿದ್ದೇವೆ ಎಂದು ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೊಲೆ ಮಾಡಿದ ಆರೋಪಿ ಶಂಭುಲಿಂಗ ಎರಡು ಲಾರಿ ಇಟ್ಟುಕೊಂಡು ಮರಳು ಸಾಗಾಣಿಕೆ ಹಾಗೂ ಇತರೆ ವ್ಯಾಪಾರ ವಹಿವಾಟು ಮಾಡುತ್ತಿದ್ದ. ಕೊಲೆಗೆ ಶಂಭುಲಿಂಗನ ಲಾರಿ ಚಾಲಕನಾಗಿದ್ದ ಮಂಜುನಾಥ್ ಸಹಕಾರಿಯಾಗಿದ್ದ ಎಂದು ವರದಿಯಾಗಿದ್ದು, ಕೊಲೆಯಾದ ನಿಂಗಪ್ಪ ಡಕಾಯಿತಿ ಮತ್ತು ಕೊಲೆ ಪ್ರಕರಣ ಒಂದರಲ್ಲಿ ಶಿಕ್ಷೆಗೆ ಒಳಗಾಗಿ ಕಳೆದೊಂದು ವರ್ಷದಿಂದ ಜಾಮೀನು ಮೇಲೆ ಹೊರಗಡೆ ಇದ್ದ ಎನ್ನಲಾಗಿದೆ. ಗಣೇಶ್ ಯಾವಾಗಲೂ ನಿಂಗಪ್ಪನ ಜೊತೆ ಇರುತ್ತಿದ್ದರಿಂದ ಕೊಲೆ ಬಗ್ಗೆ ಹೇಳಬಹುದೆಂದು ಆರೋಪಿಗಳು ಗಣೇಶನನ್ನು ಹತ್ಯೆ ಮಾಡಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *