Connect with us

Districts

ನಿಂಬೆಹಣ್ಣು ಇಟ್ಕೊಳ್ಳೋ ಪ್ರಶ್ನೆಗೆ ರೇವಣ್ಣ ಖಡಕ್ ಉತ್ತರ

Published

on

– ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪ

ಹಾಸನ: ನಿಂಬೆಹಣ್ಣು ಇಟ್ಟುಕೊಳ್ಳುವುದು ಯಾಕೆ ಎಂಬ ಪ್ರಶ್ನೆಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಉತ್ತರಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರೇವಣ್ಣ ಯಾವಾಗಲೂ ಕೈಯಲ್ಲಿ ನಿಂಬೆಹಣ್ಣು ಇಟ್ಟುಕೊಳ್ತಾರೆ ಎಂಬ ಸಚಿವ ಸೋಮಶೇಖರ್ ಆರೋಪಕ್ಕೆ ಪ್ರತಿಕ್ರಿಯಿಸಿದರು. ದುಷ್ಟ ಶಕ್ತಿಗಳನ್ನ ಎದುರಿಸಲು ನಿಂಬೆಹಣ್ಣು ಇಟ್ಟುಕೊಳ್ಳಬೇಕು, ಅದಕ್ಕೆ ನಿಂಬೆಹಣ್ಣು ಇಟ್ಟುಕೊಂಡಿದ್ದೀನಿ. ಶತ್ರು ವೈರಿಗಳನ್ನು ಎದುರಿಸಲು ನಿಂಬೆಹಣ್ಣು ಇಟ್ಟುಕೊಂಡಿದ್ದೀನಿ. ಮಾಟ-ಮಂತ್ರ ಮಾಡ್ತಾರಲ್ಲಾ ಅವನ್ನ ಎದುರಿಸಲು ನಿಂಬೆಹಣ್ಣು ಇಟ್ಟುಕೊಳ್ಳಬೇಕಲ್ವಾ. ಇನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರೇ ನಿಂಬೆಹಣ್ಣು ಇಟ್ಟುಕೊಂಡಿದ್ದಾರೆ. ಇನ್ನು ನಾನು ನಿಂಬೆಹಣ್ಣು ಇಟ್ಟುಕೊಳ್ಳೋದ್ರಲ್ಲಾ ತಪ್ಪೇನಿದೆ ಎಂದು ರೇವಣ್ಣ ಇದೇ ವೇಳೆ ಪ್ರಶ್ನಿಸಿದರು.

ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾ.ಪಂ ಚುನಾವಣೆ ನಡೆಯುತ್ತಿದೆ. ನ್ಯಾಯಾಲಯ ನಿರ್ದೇಶನ ನೀಡಿದ ಬಳಿಕ ಈಗ ಸರ್ಕಾರ ಗ್ರಾಪಂ ಚುನಾವಣೆ ನಡೆಸುತ್ತಿದೆ. ಚುನಾವಣೆ ನ್ಯಾಯಯುತವಾಗಿ ನಡೆಯಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ ಎಂದರು.

ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿಯ ಅಭ್ಯರ್ಥಿಗಳಿಗೆ ಪಿಡಿಓ ಹಾಗೂ ಕಾರ್ಯದರ್ಶಿಗಳು 10 ರಿಂದ 20 ಸಾವಿರ ಹಣ ನೀಡುವಂತೆ ದೊಡ್ಡಮಟ್ಟದ ಬಿಜೆಪಿ ನಾಯಕರು ಸೂಚಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಗ್ರಾಪಂ, ಪಿಡಿಓ ಮತ್ತು ವಂತಿಕೆ ನೀಡಬೇಕು ಎಂದು ಬಿಜೆಪಿ ನಾಯಕರು ಸೂಚಿಸಿದ್ದಾರೆ. ಹಣ ಕೊಡುವಂತೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳೇ ಬಂದು ನಮಗೆ ಹೇಳಿದ್ದಾರೆ ಎಂದು ಸರ್ಕಾರದ ವಿರುದ್ಧ ರೇವಣ್ಣ ಹೊಸ ಬಾಂಬ್ ಸಿಡಿಸಿದರು.

ಗ್ರಾಮ ಪಂಚಾಯ್ತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ತಿದ್ದೀವಿ. ವೆಂಕಟರಮಣಸ್ವಾಮಿ ಗೋವಿಂದಾ, ಗೋವಿಂದಾ ಅಂತ ಜನಗಳ ಪಾದಕ್ಕೆ ಕೈಮುಗಿತೀವಿ ಅಂತ ರೇವಣ್ಣ ತಿಳಿಸಿದ್ದಾರೆ.

ಹಾಸನದ ವಿಮಾನ ನಿಲ್ದಾಣವನ್ನು ಶಿವಮೊಗ್ಗಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಮಾಡಿದ ಅವರು, ಬಿಜೆಪಿಯವರು ಯಾವ ನೈತಿಕತೆ ಇಟ್ಟುಕೊಂಡು ಮತ ಕೇಳ್ತಾರೆ ಎಂದು ಟೀಕೆ ಮಾಡಿದರು. ವ್ಯಾಪಾರ ಮಾಡುವಂತಹ ಗ್ರಾಮ ಸ್ವರಾಜ್ ಸಮಾವೇಶ ಮಾಡುತ್ತಿದ್ದಾರೆಂದು ರೇವಣ್ಣ ಆಕ್ರೋಶ ಹೊರಹಾಕಿದರು.

ಹಾಸನ ಬೇಲೂರು ರಸ್ತೆಗೆ 800 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ನಾವು ಅನುಮೋದನೆ ಮಾಡಿದ್ದೆವು. ಬಿಳಿಕೆರೆಯಿಂದ ಯಡೇಗೌಡನಹಳ್ಳಿ ಮತ್ತು ಹಾಸನದಿಂದ ಬೇಲೂರಿಗೆ ರಾಷ್ಟ್ರೀಯ ಹೆದ್ದಾರಿಯನ್ನ ನಾವು ಅನುಮೋದನೆ ಮಾಡಿದ್ದೆವು. ಬಿಳಿಕೆರೆಯಿಂದ ಬೇಲೂರಿಗೆ ರಾಷ್ಟ್ರೀಯ ಹೆದ್ದಾರಿಯನ್ನ ಸರ್ಕಾರದ ರದ್ದು ಮಾಡಿದೆ. ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಎರಡು ರಾಷ್ಟ್ರೀಯ ಪಕ್ಷಗಳು ಸೇರಿ ಮಂಡ್ಯದಲ್ಲಿ ಕುಮಾರಸ್ವಾಮಿ ಮಗನನ್ನು ಸೋಲಿಸಿದರು. ನಾವು ಯಾವಾಗಲೂ ರಾಷ್ಟ್ರೀಯ ಪಕ್ಷಗಳಿಂದ ದೂರ ಇದ್ದೇವೆ. 2023ಕ್ಕೆ ಇನ್ನೊಂದು ಟವಲ್ ಹಾಕ್ತೀವಿ, 2021 ಕ್ಕೂ ಅಥವಾ 2022ಕ್ಕೋ ನೋಡೋಣ. ಕಾಂಗ್ರೆಸ್ ಮತ್ತು ಬಿಜೆಪಿ ಬಿಡೋರೇ ಹೆಚ್ಚಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರದ ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Click to comment

Leave a Reply

Your email address will not be published. Required fields are marked *

www.publictv.in