Connect with us

Districts

ಜನರ ಗಂಭೀರ ಸಮಸ್ಯೆಗಳ ಚರ್ಚೆ ವೇಳೆ ಮೊಬೈಲ್‍ನಲ್ಲೇ ಮುಳುಗಿದ ಅಧಿಕಾರಿಗಳು

Published

on

ಹಾಸನ: ಜಿಲ್ಲೆಯ ಜನರ ಪ್ರಮುಖ ಸಮಸ್ಯೆಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಯುವ ವೇಳೆ ಅಧಿಕಾರಿಗಳು ಮೊಬೈಲ್ ನಲ್ಲೇ ಮುಳುಗಿ ಕಾಲ ಕಳೆದ ಘಟನೆ ಜಿಲ್ಲಾ ಪಂಚಾಯಿತಿ ಮಾಸಿಕ ಪ್ರಗತಿ ಸಭೆಯಲ್ಲಿ ನಡೆದಿದೆ.

ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಸೇರಿದಂತೆ ಸಾಮಾನ್ಯ ಜನರಿಗೆ ಹೆಚ್ಚಿನ ಹಾನಿ ಆಗಿತ್ತು. ಈ ಬಗ್ಗೆ ಹಾಸನ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳ ಸಭೆ ನಡೆಸಿದ್ದರು. ಈ ವೇಳೆ ಚರ್ಚೆ ಏನೋ ಗಂಭೀರವಾಗಿಯೇ ನಡೆಯಿತು. ಕೆಲ ಅಧಿಕಾರಿಗಳು ತಮ್ಮ ಇಲಾಖಾವಾರು ಪ್ರಗತಿಯನ್ನು ಸಭೆಯ ಮುಂದಿಟ್ಟರು. ಆದರೆ ಸಭೆಯಲ್ಲಿ ಹಾಜರಾಗಿದ್ದ ಬಹುತೇಕ ಅಧಿಕಾರಿಗಳು ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರು.

ಮಹಿಳಾ ಹಾಗೂ ಪುರುಷ ಅಧಿಕಾರಿಗಳು ಎನ್ನದೇ ಬಹುತೇಕ ಅಧಿಕಾರಿಗಳು ಸಭೆಗೆ ಯಾವುದೇ ರೀತಿಯ ಮಹತ್ವ ನೀಡದೇ ತಮ್ಮ ಪಾಡಿಗೆ ತಾವು ಮೊಬೈಲ್ ನಲ್ಲಿ ಮುಳುಗಿದ್ದರು. ಕೆಲವರು ಕಾಲ್ ನಲ್ಲಿ ಬ್ಯುಸಿಯಾಗಿದ್ದರೆ, ಮತ್ತೆ ಕೆಲವರು ವಾಟ್ಸಾಪ್ ನಲ್ಲಿ ಮಗ್ನರಾಗಿದ್ದರು. ಇನ್ನೂ ಕೆಲವರು ಯಾವ ಪರಿ ಫ್ರೀಯಾಗಿದ್ರು ಎಂದರೆ ಆನ್‍ಲೈನ್ ಶಾಪಿಂಗ್ ತಾಣದ ಮೂಲಕ ಹೊಸ ಹೊಸ ವಸ್ತುಗಳ ಬುಕ್ಕಿಂಗ್ ಮಾಡಲು ಸಮಯ ಮೀಸಲಿಟ್ಟಿದ್ದರು.

ಮಾಸಿಕ ಪ್ರಗತಿ ಪರಿಶೀಲನಾ ಸಭೆಗೂ, ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಮೊಬೈಲ್ ಮೊರೆ ಹೋಗಿದ್ದು ಅಧಿಕಾರಿಗಳ ಬದ್ಧತೆಯನ್ನು ಪ್ರಶ್ನಿಸುವಂತೆ ಮಾಡಿದೆ. ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಜನ ಸಾಮಾನ್ಯರ ಅಧಿಕಾರಿಗಳ ಬಳಿ ಹೋದರೆ ಸಭೆಯ ಕಾರಣ ನೀಡುವ ಅಧಿಕಾರಗಳು ಕೆಲಸ ಮುಂದೂಡುತ್ತಾರೆ. ಆದರೆ ಸಭೆಗೆ ಬರುವ ಅಧಿಕಾರಿಗಳು ಮಾತ್ರ ತಮ್ಮ ಕರ್ತವ್ಯ ಮಾಡದೇ ಅಸಡ್ಡೆ ತೋರಿದ್ದಾರೆ. ಸದ್ಯ ಅಧಿಕಾರಿಗಳ ಈ ವರ್ತನೆ ಗಮನಿಸಿದ ಸಾರ್ವಜನಿಕರು ಯಾವ ಪುರುಷಾರ್ಥಕ್ಕೆ ಸಭೆ ನಡೆಸಲಾಗುತ್ತದೆ ಎಂದು ಪ್ರಶ್ನಿಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv