Crime
ತೆಂಗಿನ ಚಿಪ್ಪಿನಲ್ಲಿ ಆಟವಾಡ್ತಿದ್ದ ಬಾಲಕಿ ನೀರಿನ ತೊಟ್ಟಿಗೆ ಬಿದ್ದು ಸಾವು

ಹಾಸನ: ತೆಂಗಿನ ಚಿಪ್ಪು ಹಿಡಿದು ನೀರಿನಲ್ಲಿ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಮೃತ ದುರ್ದೈವಿ ಬಾಲಕಿಯನ್ನು ಶ್ರೇಯಾ(4) ಎಂದು ಗುರುತಿಸಲಾಗಿದೆ. ಈಕೆ ಚನ್ನರಾಯಪಟ್ಟಣ ತಾಲೂಕಿನ ಬಿಳಿಕೆರೆ ಗ್ರಾಮದ ನಿವಾಸಿ ಧರಣೇಶ್ ಹಾಗೂ ಕುಮಾರಿ ದಂಪತಿ ಪುತ್ರಿ.
ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಶ್ರೇಯಾ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದಳು. ಕಂದಮ್ಮ ಆಟವಾಡುತ್ತಿರುವುದನ್ನು ಗಮನಿಸಿಕೊಂಡ ಪೋಷಕರು ಕೂಡ ಕೆಲಸದಲ್ಲಿ ತೊಡಗಿದ್ದರು. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ರೇಯಾ ಎಲ್ಲೂ ಕಾಣಿಸುತ್ತಿರಲಿಲ್ಲ.
ಮಗು ಕಾಣಿಸದಿದ್ದಾಗ ಗಾಬರಿಗೊಂಡ ಪೋಷಕರು ಸುತ್ತಮುತ್ತ ಹುಡುಕಾಟ ಆರಂಭಿಸಿದ್ದಾರೆ. ಕೊನೆಗೆ ಮನೆಯ ಹಿತ್ತಲಿನಲ್ಲಿರುವ ಬಾತ್ ರೂಮ್ ನಲ್ಲಿ ಹುಡುಕಿದಾಗ ಮಗುವಿನ ಮೃತದೇಹ ನೀರಿನ ತೊಟ್ಟಿಯಲ್ಲಿ ತೇಲುತ್ತಿತ್ತು. ತೆಂಗಿನ ಚಿಪ್ಪಿನಲ್ಲಿ ಆಟವಾಡುತ್ತಿದ್ದ ಶ್ರೇಯ ಅದರಲ್ಲಿ ನೀರು ತರಲು ಹೋದಾಗ ತೊಟ್ಟಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಇತ್ತ ಕಂದನ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದ್ದು, ಸಂಜೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
