Crime
ತಂದೆ, ತಾಯಿ ಕಣ್ಣೆದುರೇ ಬಾಲಕ ಸಾವು- ಮುಗಿಲುಮುಟ್ಟಿದ ಆಕ್ರಂದನ

ಹಾಸನ: ತಂದೆ, ತಾಯಿಯ ಎದುರೇ ರಸ್ತೆ ಅಪಘಾತದಲ್ಲಿ ನಾಲ್ಕು ವರ್ಷದ ಬಾಲಕ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಹಾಸನದ ಅರಸೀಕೆರೆಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಯೋಗೇಶ್(4) ಎಂದು ಗುರುತಿಸಲಾಗಿದೆ. ಸ್ಕೂಟರ್ನಲ್ಲಿ ಹೋಗುತ್ತಿದ್ದ ವೇಳೆ ಓಮ್ನಿ ಬಂದು ಡಿಕ್ಕಿ ಹೊಡೆದ ಪರಿಣಾಮ ತಂದೆ-ತಾಯಿ ಜೊತೆಗೆ ಸ್ಕೂಟರ್ನಲ್ಲಿ ಹೋಗುತ್ತಿದ್ದ ಯೋಗೇಶ್ ಮೃತಪಟ್ಟಿದ್ದಾನೆ.
ಮೃತ ಯೋಗೇಶ್ ತಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರನ್ನು ಕೆಲಸಕ್ಕೆ ಬಿಡಲು ಸ್ಕೂಟರ್ನಲ್ಲಿ ಯೊಗೇಶ್ ತಂದೆ ಹೊರಟಿದ್ದರು. ಅವರ ಜೊತೆ ಮಗ ಯೋಗೇಶ್ ಕೂಡ ಹೊರಟಿದ್ದ. ಆದರೆ ಅರಸೀಕೆರೆಯ ಎಪಿಎಂಸಿ ಮಾರುಕಟ್ಟೆ ಬಳಿ ಮಾರತಿ ಓಮ್ನಿ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿ ಯೋಗೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಅಪಘಾತದಲ್ಲಿ ಮೃತ ಯೋಗೇಶ್ ತಂದೆ ಮತ್ತು ತಾಯಿಗೆ ಕೈ, ಕಾಲು, ತಲೆಗೆ ಗಾಯವಾಗಿದೆ. ಆದರೆ ಕಣ್ಣೆದುರೇ ಮಗನ ಸಾವು ಕಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
