Saturday, 14th December 2019

Recent News

ವಿಶ್ವ ಜೂನಿಯರ್ ಕುಸ್ತಿಯಲ್ಲಿ ಚಿನ್ನ ಗೆದ್ದ ಹಾಲು ಮಾರುವ ರೈತನ ಮಗ

ಚಂಡೀಗಢ: ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಹರ್ಯಾಣದ ಹಾಲು ಮಾರುವ ರೈತನ ಮಗನೊಬ್ಬ ಚಿನ್ನದ ಪದಕ ಗೆದ್ದಿದ್ದಾರೆ.

ಬುಧವಾರ ಎಸ್ಟೋನಿಯಾ ದೇಶದ ಟ್ಯಾಲಿನ್‍ನಲ್ಲಿ ನಡೆದ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ, ಹರ್ಯಾಣದ ಜಜ್ಜರ್ ಗ್ರಾಮದ ಹಾಲುಮಾರುವ ರೈತನ ಮಗನಾದ 19 ವರ್ಷದ ಕುಸ್ತಿಪಟು ದೀಪಕ್ ಪುನಿಯಾ ಭಾರತಕ್ಕೆ ಚಿನ್ನದ ಪದಕ ತಂದಿದ್ದಾರೆ. 18 ವರ್ಷದ ನಂತರ 86 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಭಾರತಕ್ಕೆ ಪದಕ ಬಂದಿದೆ.

ಕಳೆದ ವರ್ಷ ನಡೆದ ಇದೇ ಟೂರ್ನಿಯ ಫೈನಲ್ ಪಂದ್ಯದಲ್ಲಿ ದೀಪಕ್ ಪುನಿಯಾ ಅವರು ಕೂದಲೆಳೆಯ ಅಂತರದಲ್ಲಿ ಸೋತಿದ್ದರು. ಆದರೆ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು ಕ್ವಾರ್ಟರ್ ಫೈನಲ್‍ನಲ್ಲಿ ಹಂಗೇರಿಯನ್‍ನ ಮಿಲನ್ ಕೊರೆಸಾಗ್ ಅವರನ್ನು 10-01 ಅಂತರದಲ್ಲಿ ಸೋಲಿಸಿದ್ದರು. ನಂತರ ಸೆಮಿಫೈನಲ್‍ನಲ್ಲಿ ಜಾರ್ಜಿಯಾದ ಮಿರಿಯಾನಿ ಮೈಸುರಾಡ್ಜೆ ಅವರ ವಿರುದ್ಧ 3-2 ಅಂತರದಲ್ಲಿ ಗೆದ್ದಿದ್ದರು.

ಈ ಎಲ್ಲಾ ಕಠಿಣ ಎದುರಾಳಿಗಳ ವಿರುದ್ಧ ಗೆದ್ದ ದೀಪಕ್ ಅವರಿಗೆ ಫೈನಲ್‍ನಲ್ಲಿ ಎದುರಾಳಿಯಾಗಿ ಸಿಕ್ಕಿದ್ದು ರಷ್ಯಾದ ಬಲಿಷ್ಠ ಕುಸ್ತಿಪಟು ಅಲಿಕ್ ಶೆಬ್‍ಝೊಕೋವ್. ಆದರೆ ಅವರನ್ನು 2-0 ಅಂತರದಲ್ಲಿ ಕೊನೆ ಕ್ಷಣದಲ್ಲಿ ಸೋಲಿಸಿದ ದೀಪಕ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಮಗನ ಈ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ಅವರ ತಂದೆ ಸುಭಾಷ್ ಅವರು, ನನ್ನ ಮಗ ನನ್ನನ್ನು ಹೆಮ್ಮೆ ಪಡುವಂತೆ ಮಾಡಿದ್ದಾನೆ. ಅವನು ಬಾಲ್ಯದಲ್ಲಿದ್ದಾಗ ನಾನು ಅವನನ್ನು ನಮ್ಮ ಹಳ್ಳಿಯ ಕುಸ್ತಿ ಪಂದ್ಯಗಳಿಗೆ ಕರೆದುಕೊಂಡು ಹೋಗುತ್ತಿದ್ದೆ. ನಮಗೆ ಮೂರು ಎಕ್ರೆ ಜಮೀನು ಇದೆ. ನಾನು ಹತ್ತು ಎಮ್ಮೆಗಳು ಮತ್ತು ಐದು ಹಸುಗಳನ್ನು ಸಾಕಿದ್ದೇನೆ. ಅವುಗಳಿಂದ ಹಾಲು ಕರೆದು ಪ್ರತಿದಿನ ಅದನ್ನು ಮಾರಲು ದೆಹಲಿಗೆ ಹೋಗುತ್ತೇನೆ. ನಾನು ಪಟ್ಟ ಕಷ್ಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ದೀಪಕ್ ಅವರ ಕೋಚ್ ಪರ್ವೇಶ್ ಕುಮಾರ್ ಅವರು, ದೀಪಕ್ ಪ್ರಬಲ ಎದುರಾಳಿಗಳ ಜೊತೆ ಮತ್ತು ಯುರೋಪ್‍ನ ಕಿರಿಯ ಉನ್ನತ ಕುಸ್ತಿಪಟುಗಳ ವಿರುದ್ಧ ಗೆಲುವು ಪಡೆದಿದ್ದಾನೆ. ಕಳೆದ ಬಾರಿ ಫೈನಲ್‍ನಲ್ಲಿ ಸೋತಿದ್ದ. ಇದಕ್ಕೆ ಪ್ರತೀಕಾರವಾಗಿ ಇಂದು ಚಿನ್ನದ ಪದಕ ಗೆದ್ದಿದ್ದಾನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *