Thursday, 21st February 2019

Recent News

ಕ್ರಿಕೆಟ್ ಆಟಗಾರ್ತಿ ಹರ್ಮನ್‍ಪ್ರೀತ್ ಕೌರ್ ಗೆ ಡಿಎಸ್‍ಪಿ ಹುದ್ದೆ ರದ್ದು!

ಚಂಡೀಗಡ: ನಕಲಿ ಪದವಿ ಪ್ರಮಾಣ ಪತ್ರಗಳನ್ನು ನೀಡಿದ್ದ ಕಾರಣ ಟೀಂ ಇಂಡಿಯಾ ಮಹಿಳಾ ಟಿ-20 ಕ್ರಿಕೆಟ್ ತಂಡದ ನಾಯಕಿ ಹರ್ಮನ್‍ಪ್ರೀತ್ ಕೌರ್ ಅವರಿಗೆ ಗೌರವಾರ್ಥವಾಗಿ ನೀಡಿದ್ದ ಡಿಎಸ್‍ಪಿ ಹುದ್ದೆಯನ್ನು ಪಂಜಾಬ್ ಸರ್ಕಾರ ಹಿಂಪಡೆದುಕೊಂಡಿದೆ.

2017ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಭಾರತ ರನ್ನರ್ ಅಪ್ ಪ್ರಶಸ್ತಿಗಳಿಸಲು ಹರ್ಮತ್‍ಪ್ರೀತ್ ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ಡಿಎಸ್‍ಪಿ ಹುದ್ದೆಯನ್ನು ನೀಡಿ ಗೌರವಿಸಿತ್ತು.

ಈ ಮೊದಲು ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ದೃಷ್ಟಿಯಿಂದ ರೈಲ್ವೆ ಇಲಾಖೆ ನೀಡಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಡಿಎಸ್‍ಪಿ ಹುದ್ದೆಯನ್ನು ಅಲಂಕರಿಸಿದ್ದರು.

ಮಾರ್ಚ್ 1 ರಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಡಿಎಸ್‍ಪಿ ಸುರೇಶ್ ಅರೋರರವರು ಹರ್ಮನ್‍ಪ್ರೀತ್ ಕೌರ್ ರವರಿಗೆ ಡಿಎಎಸ್‍ಪಿ ಹುದ್ದೆ ಜವಾಬ್ದಾರಿಯನ್ನು ನೀಡಿ ಗೌರವಿಸಿದ್ದರು. ಡಿಎಸ್‍ಪಿ ಹುದ್ದೆಗೆ ಸಂಬಂಧಿಸಿದಂತೆ ಅವರು ಉತ್ತರ ಪ್ರದೇಶದ ಮೀರತ್ ನ ಚೌಧರಿ ಸಿಂಗ್ ವಿಶ್ವ ವಿದ್ಯಾನಿಲಯದಲ್ಲಿ ಪದವಿ ಪೂರ್ಣಗೊಳಿಸಿದರ ಪ್ರಮಾಣ ಪತ್ರವನ್ನು ಇಲಾಖೆಗೆ ಸಲ್ಲಿಸಿದ್ದರು.

ಇಲಾಖೆಗೆ ಸಲ್ಲಿಸಿದ್ದ ದಾಖಲೆಗಳನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯದ ಜೊತೆ ಪರಿಶೀಲನೆ ನಡೆಸಿದಾಗ ಡಿಗ್ರಿ ಪ್ರಮಾಣಪತ್ರಗಳು ನಕಲಿಯೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಹರ್ಮನ್‍ಪ್ರೀತ್ ಕೌರ್ ರವರಿಗೆ ನೀಡಿದ ಡಿಎಸ್‍ಪಿ ಹುದ್ದೆಯನ್ನು ಪಂಜಾಬ್ ಸರ್ಕಾರ ಹಿಂತೆಗೆದುಕೊಂಡಿದೆ.

ಪದವಿ ಪ್ರಮಾಣಪತ್ರಗಳು ನಕಲಿ ಆಗಿರುವುದರಿಂದ ಅವರು ಡಿಎಸ್‍ಪಿ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಅವರ ಕನಿಷ್ಠ ವಿದ್ಯಾರ್ಹತೆ 12ನೇ ತರಗತಿ ಆಗಿರುವುದರಿಂದ ಅವರು ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಯಲ್ಲಿ ಮುಂದುವರೆಯಬಹುದು. ಈ ಕುರಿತು ಕ್ರಿಕೆಟ್ ಆಟಗಾರ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಕಾಮನ್‍ವೇಲ್ತ್ ಕೂಟದಲ್ಲಿ ಚಿನ್ನದ ಪದಕ ನೀಡಿದ್ದ ಮಂದೀಪ್ ಕೌರ್ ಅವರಿಗೆ ಪಂಜಾಬ್ ಸರ್ಕಾರ ಡಿಎಸ್‍ಪಿ ಹುದ್ದೆಯನ್ನು ನೀಡಿತ್ತು. ಬಳಿಕ ದಾಖಲಾತಿ ಪರಿಶೀಲನೆ ವೇಳೆ ನಕಲಿ ಪ್ರಮಾಣಪತ್ರ ಸಲ್ಲಿಕೆ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದ್ದ ಡಿಎಸ್‍ಪಿ ಹುದ್ದೆಯನ್ನು ಹಿಂದಕ್ಕೆ ಪಡೆದುಕೊಂಡಿತ್ತು.

Leave a Reply

Your email address will not be published. Required fields are marked *