Wednesday, 17th July 2019

ಕ್ಷಮೆ ಕೋರಿದ ಹಾರ್ದಿಕ್ ಪಾಂಡ್ಯ

ಮುಂಬೈ: ಮಾಧ್ಯಮ ಸಂದರ್ಶನದಲ್ಲಿ ಆಕ್ಷೇಪಾರ್ಹವಾಗಿ ಮಾತನಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಕೊನೆಗೂ ಕ್ಷಮೆ ಕೋರಿದ್ದಾರೆ.

ಬಾಲಿವುಡ್‍ನ ಕರಣ್ ಜೋಹರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಭಾಗವಹಿಸಿ ಮಾತನಾಡಿದ್ದರು. ಈ ವೇಳೆ ಕೇಳಿದ ಪ್ರಶ್ನೆಗಳಿಗೆ ಮನಸ್ಸಿಗೆ ಬಂದಂತೆ ಹಿಂದೆ ಮುಂದೆ ನೋಡದೆ ಇಬ್ಬರು ಆಟಗಾರರು ಉತ್ತರಿಸಿದ್ದರು. ಕಾರ್ಯಕ್ರಮ ಪ್ರಸಾರವಾದ ಬಳಿಕ, ಪ್ರಮುಖವಾಗಿ ಹಾರ್ದಿಕ್ ಪಾಂಡ್ಯ ಅವರ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಲವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡು ಹಾರ್ದಿಕ್ ಪಾಂಡ್ಯ ವಿರುದ್ಧ ಟೀಕೆ ಮಾಡಿದ್ದರು.

ತಮ್ಮ ಮಾತಿನ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದಂತೆ ಎಚ್ಚೆತ್ತುಕೊಂಡಿರುವ ಹಾರ್ದಿಕ್ ಪಾಂಡ್ಯ, ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿದ್ದಾರೆ. ಕಾರ್ಯಕ್ರಮದಲ್ಲಿ ನನ್ನ ಮಾತುಗಳು ಯಾರಿಗಾದರೂ ನೋವುಂಟು ಮಾಡಿದ್ದರೆ, ಅಂತಹವರಲ್ಲಿ ಕ್ಷಮೆ ಕೋರುತ್ತೇನೆ. ನನ್ನ ಮಾತಿನಲ್ಲಿ ಯಾರ ಮನಸ್ಸಿಗೂ ನೋವುಂಟು ಮಾಡುವ ಅಥವಾ ಯಾರಿಗೂ ಅಗೌರವ ತೋರುವ ಉದ್ದೇಶ ಇರಲಿಲ್ಲ ಎಂದು ತಿಳಿಸಿದ್ದಾರೆ.

ಸಚಿನ್ ಹಾಗೂ ಕೊಹ್ಲಿ ಇಬ್ಬರಲ್ಲಿ ಯಾರು ಬೆಟರ್ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಹಾರ್ದಿಕ್ ಹಾಗೂ ಕೆಎಲ್ ರಾಹುಲ್ ಇಂದು ಮುಂದು ನೋಡದೇ ಕೊಹ್ಲಿ ಎಂದು ಉತ್ತರಿಸಿದ್ದರು. ಅಲ್ಲದೇ ಮಹಿಳೆಯರು ಹಾಗೂ ಸೆಕ್ಸ್ ಜೀವನದ ಬಗ್ಗೆ ಕೇಳಿದ ಪ್ರಶ್ನೆಯ ಬಗ್ಗೆ ಕ್ಷಣ ಕಾಲ ಕೂಡ ಯೋಚಿಸದೆ ಹಾರ್ದಿಕ್ ಉತ್ತರಿಸಿದ್ದರು. ಇದರಿಂದ ಹಲವು ಕ್ರಿಕೆಟ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹಾರ್ದಿಕ್ ವಿರುದ್ಧ ಟೀಕೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಓದಿ: ನಾನು ಇಂಜಿನಿಯರಿಂಗ್ ಮಾಡದಕ್ಕೆ ಈಗಲೂ ಅಮ್ಮನಿಗೆ ದುಃಖವಿದೆ: ಕೆಎಲ್ ರಾಹುಲ್

ತಂಡದಲ್ಲಿ ಸ್ಥಾನ ಪಡೆಯಲು ಇಬ್ಬರು ಆಟಗಾರರು  ಈ ರೀತಿ ಉತ್ತರ ನೀಡಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದರೆ, ಮಹಿಳೆಯರಿಗೆ ಗೌರವ ನೀಡಲು ಬಾರದ ಇಂತಹ ವ್ಯಕ್ತಿ ರಾಷ್ಟ್ರೀಯ ತಂಡದಲ್ಲಿ ಸ್ಥಾನಗಳಿಸಲು ಯೋಗ್ಯರಲ್ಲ ಎಂದು ಕಾಮೆಂಟ್ ಮಾಡಿ ಟ್ರೋಲ್ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *