Connect with us

Latest

ನೀವು ಶಾಂತಿಪ್ರಿಯರಾಗಿದ್ದರೆ ಮಸೂದ್‍ನನ್ನು ಒಪ್ಪಿಸಿ: ಪಾಕ್ ಪಿಎಂಗೆ ಸುಷ್ಮಾ ಸ್ವರಾಜ್ ಸವಾಲು

Published

on

– ಭಾರತ ಬದಲಾಗಿದೆ, ಯೋಚಿಸಲಾಗದ ಉತ್ತರ ನೀಡುತ್ತೆ
– ಭಯೋತ್ಪಾದನೆ, ಶಾಂತಿ ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ

ನವದೆಹಲಿ: ನೀವು ಶಾಂತಿ ಪ್ರಿಯರು ಆಗಿದ್ದರೆ ಮಸೂದ್ ಅಜರ್‍ನನ್ನು ಭಾರತಕ್ಕೆ ಒಪ್ಪಿಸಿ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‍ಗೆ ಸವಾಲು ಎಸೆದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳದೆ, ಭಯೋತ್ಪಾದನೆಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನ ಸರ್ಕಾರದ ವಿರುದ್ಧ ಸುಷ್ಮಾ ಸ್ವರಾಜ್ ಹರಿಹಾಯ್ದಿದ್ದಾರೆ. ಕೆಲವರು ಪಾಕ್ ಪ್ರಧಾನಿ ಉದಾರಿ, ಗೌರವಾನ್ವಿತ ರಾಜಕಾರಣಿ ಎನ್ನುತ್ತಾರೆ. ಹಾಗಾದರೆ ಅವರಿಗೆ ಅಷ್ಟೊಂದು ಉದಾರತನವಿದ್ದರೆ ಜೈಷ್-ಇ-ಮೊಹಮ್ಮದ್ ಮುಖ್ಯಸ್ಥ ಮಜೂರ್ ಅಜರ್‍ನನ್ನು ಭಾರತಕ್ಕೆ ಒಪ್ಪಿಸಲಿ ಎಂದು ಸವಾಲು ಹಾಕಿದ್ದಾರೆ. ಹಾಗೆಯೇ ಎಲ್ಲಿಯವರೆಗೆ ಪಾಕ್ ಸರ್ಕಾರ ಭಯೋತ್ಪಾದನೆ ಹಾಗೂ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲವೋ ಅಲ್ಲಿವರೆಗೆ ಪಾಕ್ ಜೊತೆ ಭಾರತದ ಶಾಂತಿ ಮಾತುಕತೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುವ ಮೂಲಕ ಸುಷ್ಮಾ ಸ್ವರಾಜ್ ಪಾಕ್‍ಗೆ ಖಡಕ್ ಸಂದೇಶ ನೀಡಿದ್ದಾರೆ.

ಮೊದಲು ಭಯೋತ್ಪಾದನೆಗೆ ಪಾಕ್ ಸರ್ಕಾರ ಕಡಿವಾಣ ಹಾಕಲಿ. ನಂತರ ಪಾಕ್ ಜೊತೆ ಶಾಂತಿ ಮಾತುಕತೆ ನಡೆಯುತ್ತದೆ. ಭಯೋತ್ಪಾದನೆ ನಡುವೆ ಶಾಂತಿ ಮಾತುಕತೆ ಅಸಾಧ್ಯ. ಭಾರತೀಯ ವಾಯುಪಡೆ ಜೆಇಎಂ ಉಗ್ರರ ಕ್ಯಾಂಪ್ ಮೇಲೆ ಏರ್ ಸ್ಟ್ರೈಕ್ ಮಾಡಿದೆ. ಆದ್ರೆ ಜೆಇಎಂ ಉಗ್ರರ ಪ್ರತಿದಾಳಿ ಬದಲು ಪಾಕ್ ಸೇನೆ ಯಾಕೆ ನಮ್ಮ ವಿರುದ್ಧ ದಾಳಿ ಮಾಡುತ್ತಿದೆ ಎಂದು ಸುಷ್ಮ ಸ್ವರಾಜ್ ಪ್ರಶ್ನಿಸಿದ್ದಾರೆ.

ನೀವು ಕೇವಲ ಉಗ್ರರಿಗೆ ನಿಮ್ಮ ಮಣ್ಣಿನಲ್ಲಿ ಜಾಗ ಕೊಟ್ಟಿಲ್ಲ, ಅವರನ್ನೂ ನೀವು ಸಾಕುತ್ತಿದ್ದೀರಿ. ಅಲ್ಲದೆ ಉಗ್ರರ ವಿರುದ್ಧ ಸಂತ್ರಸ್ತ ರಾಷ್ಟ್ರಗಳು ಬಂದರೆ, ಉಗ್ರರ ಪರವಾಗಿ ನೀವು ದಾಳಿ ಮಾಡುತ್ತಿರಿ. ಪಾಕ್ ಸರ್ಕಾರ ಅಲ್ಲಿನ ಸೇನೆ ಹಾಗೂ ಉಗ್ರರನ್ನು ನಿಯಂತ್ರಿಸುವ ಅಗತ್ಯವಿದೆ. ಇಲ್ಲವಾದರೆ ದ್ವೀಪಕ್ಷೀಯ ಸಂಬಂಧಗಳು ನಾಶವಾಗುವ ಸಮಯ ಮತ್ತೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಯೋಧರು ಹುತಾತ್ಮರಾದ ಬಗ್ಗೆ ಮಾತನಾಡುತ್ತ, ಪುಲ್ವಾಮಾ ದಾಳಿ ನಡೆದಾಗ ಹಲವು ರಾಷ್ಟ್ರಗಳು ಭಾರತದ ಪರವಾಗಿ ನಿಂತಿದ್ದವು. ಹಾಗೆಯೇ ಯೋಧರ ಸಾವಿಗೆ ಸಂತಾಪ ಸೂಚಿಸಿ, ಭಾರತ ಈ ಪರಿಸ್ಥತಿಯನ್ನು ಹೇಗೆ ನಿಭಾಯಿಸುತ್ತೆ ಎಂದಿದ್ದವು. ಅವರಿಗೆ ನಾನು ಕೊಟ್ಟ ಉತ್ತರ ಒಂದೇ. ಅದು ಭಾರತ ಬದಲಾಗಿದೆ. ಮತ್ತೊಮ್ಮೆ ಈ ರೀತಿ ದಾಳಿ ಮಡಿದರೇ ಭಾರತ ಸುಮ್ಮನೆ ಕೂರುವುದಿಲ್ಲ. ಯೋಚಿಸಲಾಗದ ಉತ್ತರ ನೀಡುತ್ತದೆ ಎಂದು ಹೇಳಿ ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv