Tuesday, 25th February 2020

ತಿರುಪತಿ ಬಸ್ ಟಿಕೆಟ್‍ನಲ್ಲಿ ಹಜ್, ಜೆರುಸಲೆಂ ತೀರ್ಥಯಾತ್ರೆ ಜಾಹೀರಾತು: ಜಗನ್ ವಿರುದ್ಧ ಬಿಜೆಪಿ ಕಿಡಿ

ಹೈದರಾಬಾದ್: ತಿರುಪತಿ -ತಿರುಮಲ ನಗರದ ಮಧ್ಯೆ ಪ್ರಯಾಣಿಸುವ ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮದ ಬಸ್‍ನಲ್ಲಿ ನೀಡಿರುವ ಟಿಕೆಟ್‍ಗಳು ಭಾರೀ ವಿವಾದಕ್ಕೆ ಗುರಿಯಾಗಿವೆ.

ತಿರುಪತಿ ಬಸ್‍ಗಳಲ್ಲಿ ನೀಡುವ ಟಿಕೆಟ್‍ಗಳ ಹಿಂಭಾಗದಲ್ಲಿ ಹಜ್ ಹಾಗೂ ಜೆರುಸಲೆಮ್ ತೀರ್ಥಯಾತ್ರೆಯ ಕುರಿತು ಸಿಎಂ ವೈ.ಎಸ್.ಜಗನ್‍ಮೋಹನ್ ರೆಡ್ಡಿ ಸರ್ಕಾರವು ಮುದ್ರಿಸಿದೆ. ಹೀಗಾಗಿ ಆಂಧ್ರ ಪ್ರದೇಶ ಬಿಜೆಪಿ ನಾಯಕರು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಈ ವಿಚಾರವನ್ನು ಪ್ರಯಾಣಿಕರೊಬ್ಬರು ಬುಧವಾರ ಪ್ರಾದೇಶಿಕ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರು. ಆಗ ಅವರು ಹಿಂದೂಯೇತರ ಯಾತ್ರೆಗಳ ಬಗ್ಗೆ ಮುದ್ರಿತವಾಗಿರುವ ಟಿಕೆಟ್‍ಗಳ ಬಂಡಲ್ ತಪ್ಪಾಗಿ ತಿರುಪತಿಗೆ ಬಂದಿದೆ ಅಂತ ತಿಳಿಸಿದ್ದರು ಎಂದು ವರದಿಯಾಗಿದೆ.

ತಿರುಪತಿ ಬಸ್‍ಗಳ ಟಿಕೆಟ್‍ನಲ್ಲಿ ಮುದ್ರಿಸಿದ ಜಾಹೀರಾತು ವಿಷಯವನ್ನು ನಮ್ಮ ಗಮನಕ್ಕೆ ತರಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಜೊತೆಗೆ ಇದು ಅಲ್ಪಸಂಖ್ಯಾತ ಇಲಾಖೆ ಹೊರಡಿಸಿದ ಸರ್ಕಾರದ ಜಾಹೀರಾತು ಎಂದು ಸಾರಿಗೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ.

ಹೈದರಾಬಾದ್‍ನ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಬಸ್ ಟಿಕೆಟ್ ವಿಚಾರವಾಗಿ ಈಗಾಗಲೇ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಹಿಂದೂ ಧರ್ಮದವರಲ್ಲ. ಅವರಿಗೆ ಹಿಂದೂ ಧರ್ಮದ ಮೇಲೆ ನಂಬಿಕೆಯೂ ಇಲ್ಲ. ಹೀಗಾಗಿ ಅಲ್ಪಸಂಖ್ಯಾತ ಧರ್ಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ.

ಜಗನ್ ಮೋಹನ್ ರೆಡ್ಡಿ ಅವರು ಅಮೆರಿಕದಲ್ಲಿ ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ ದೀಪ ಹಚ್ಚಲು ನಿರಾಕರಿಸಿದ್ದರು. ದೀಪ ಹಚ್ಚದೇ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಹಿಂದೂ ಸಂಪ್ರದಾಯಕ್ಕೆ ಅಗೌರವ ತೋರಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *