Connect with us

Bengaluru City

ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು, ಅದಕ್ಕಾಗಿ ಭಗವದ್ಗೀತೆ ಓದುತ್ತೇನೆ – ಹ್ಯಾಕರ್‌ ಶ್ರೀಕಿ

Published

on

– ಭಗವದ್ಗೀತೆ ಪುಸ್ತಕದೊಂದಿಗೆ ಸಿಸಿಬಿ ಕಚೇರಿಗೆ ಆಗಮನ
– ಮುಂದೆ ಚೀನಿ ವೆಬ್‌ಸೈಟ್‌ ಹ್ಯಾಕ್‌ ಮಾಡುತ್ತೇನೆ

ಬೆಂಗಳೂರು: “ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು. ಏಕಾಗ್ರತೆಗಾಗಿ ನಾನು ಭಗವದ್ಗೀತೆ ಓದುತ್ತೇನೆ. ಭಗವದ್ಗೀತೆಯಿಂದ ಮನಸ್ಸು ಏಕಾಗ್ರತೆಗೊಳ್ಳುತ್ತದೆ. ಬಳಿಕ ನಾನು ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುತ್ತೇನೆ” ಇದು ಡ್ರಗ್ಸ್‌ ಪ್ರಕರಣದಲ್ಲಿ ಬಂಧನಗೊಂಡಿರುವ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಪೊಲೀಸ್‌ ವಿಚಾರಣೆಯ ವೇಳೆ ತಿಳಿಸಿದ ತನ್ನ ಏಕಾಗ್ರತೆಯ ರಹಸ್ಯ.

ನ.17 ರಂದು ಬೆಂಗಳೂರಿನ ಜಯನಗರದ ನಿವಾಸಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆಯ ವೇಳೆ 25 ವರ್ಷದ ಶ್ರೀಕೃಷ್ಣ ಆಧ್ಯಾತ್ಮ ಮತ್ತು ಧ್ಯಾನದ ಬಗ್ಗೆ ಜಾಸ್ತಿ ಮಾತನಾಡಿದ್ದಾನೆ ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ಭಗವದ್ಗೀತೆ ಬೇಕೇಬೇಕು:
ಸದ್ಯ ಪೊಲೀಸ್‌ ಕಸ್ಟಡಿಯಲ್ಲಿ ಇರುವ ಶ್ರೀಕೃಷ್ಣ ಠಾಣೆಯಲ್ಲೂ ಪ್ರತಿ ದಿನ ತಪ್ಪದೇ ಭಗವದ್ಗೀತೆಯನ್ನು ಓದುತ್ತಿದ್ದಾನೆ. ರಾತ್ರಿ ಭಗವದ್ಗೀತೆ ಪುಸ್ತಕ ಓದುವುದರ ಜೊತೆಗೆ ಇಂದು ಸಿಸಿಬಿ ಪೊಲೀಸರ ಕಚೇರಿಗೆ ವಿಚಾರಣೆಗೆ ಹಾಜರಾಗಲು ಕರೆ ತಂದಾಗಲೂ ಕೈಯಲ್ಲಿ ಭಗವದ್ಗೀತೆ ಪುಸ್ತಕವನ್ನು ಹಿಡಿದುಕೊಂಡೇ ಬಂದಿದ್ದ.

ಭಗವದ್ಗೀತೆ ಪುಸ್ತಕವನ್ನು ಯಾಕೆ ಓದುತ್ತಿದ್ದಿ ಎಂದು ಪ್ರಶ್ನಿದ್ದಕ್ಕೆ, ಹ್ಯಾಕಿಂಗ್‌ ಮಾಡಲು ಮನಸ್ಸಿಗೆ ಏಕಾಗ್ರತೆ ಬೇಕು. ಭಗದ್ಗೀತೆ ಓದಿದ ಬಳಿಕ ಏಕಾಗ್ರತೆ ಸಿಕ್ಕಿ ನಾನು ವೆಬ್‌ಸೈಟ್‌ ಹ್ಯಾಕ್‌ ಮಾಡುತ್ತಿದ್ದೆ ಎಂದು ತಿಳಿಸಿದ್ದಾನೆ. ಭಗವದ್ಗೀತೆ ಅಲ್ಲದೇ ಸ್ವಾಮಿ ವಿವೇಕಾನಂದ, ಓಶೋ ಸೇರಿದಂತೆ ಆಧ್ಯಾತ್ಮ ಚಿಂತಕರ ಜೀವನ ಚರಿತ್ರೆಯ ಪುಸ್ತಕವನ್ನು ಶ್ರೀಕೃಷ್ಣ ಓದಿದ್ದಾನೆ.

ಆಧ್ಯಾತ್ಮದ ಬಗ್ಗೆ ಎಷ್ಟು ಒಲವು ಹೊಂದಿದ್ದಾನೆ ಎಂದರೆ ಪ್ರತಿ ಗಂಟೆಗೆ ಭಗವದ್ಗೀತೆ ಓದಿ ಬಳಿಕ ಧ್ಯಾನ ಮಾಡುತ್ತಿದ್ದಾನೆ. ವಿಚಾರಣೆಯ ಸಂದರ್ಭದಲ್ಲೂ ಶ್ರೀಕಿ ಭಗವದ್ಗೀತೆಯಲ್ಲಿ ಬರುವ ಕೃಷ್ಣನ  ಉಪದೇಶವನ್ನು ಹೇಳುತ್ತಿದ್ದಾನೆ. ಇದನ್ನೂ ಓದಿ: ಪೋಕರ್ ವೆಬ್‍ಸೈಟ್‌, ಸರ್ಕಾರಿ ಟೆಂಡರ್‌ ವೆಬ್‌ಸೈಟ್‌ ಹ್ಯಾಕ್ – ಕೋಟ್ಯಂತರ ಹಣ ಮಾಡಿದ್ದ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅರೆಸ್ಟ್

ಹ್ಯಾಕಿಂಗ್‌ ನಿಲ್ಲಿಸಲ್ಲ:
ಸದ್ಯ ಉದ್ಯೋಗ ಇಲ್ಲ ಮುಂದೇನು ಎಂದು ಅಧಿಕಾರಿಗಳು ಪ್ರಶ್ನಿದ್ದಕ್ಕೆ, ಜಾಮೀನು ಪಡೆದು ಜೈಲಿನಿಂದ ಹೊರ ಬಂದರೂ ಹ್ಯಾಕಿಂಗ್‌ ಮಾಡುವುದನ್ನು ನಿಲ್ಲಿಸಲ್ಲ. ನಾನು ಯಾವುದೇ ಉದ್ಯೋಗ ಮಾಡುವುದಿಲ್ಲ. ಸ್ಥಳೀಯ ವೆಬ್ ಸೈಟ್‌ಗಳನ್ನು ಇನ್ನು ಮುಂದೆ ಹ್ಯಾಕ್ ಮಾಡುವುದಿಲ್ಲ. ಬದಲಾಗಿ ಚೀನಾ ಮತ್ತು ವಿದೇಶದ ಆನ್ ಲೈನ್ ಗೇಮಿಂಗ್‌ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತೇನೆ. ಈ ಕೆಲಸ ಬಿಟ್ಟು ನನಗೆ ಬೇರೆ ಏನೂ ಬರುವುದಿಲ್ಲ ಎಂದು ನೇರವಾಗಿಯೇ ಉತ್ತರ ನೀಡಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಹ್ಯಾಕಿಂಗ್‌ ಹೇಗೆ?
ಹ್ಯಾಕರ್ ಶ್ರೀಕಿ ವೆಬ್‌ಸೈಟ್‌ ಹ್ಯಾಕ್‌ ಮಾಡಲು Hak5 WIFI pineapple ಡಿವೈಸ್‌ ಬಳಸುತ್ತಿದ್ದ. ಈ ಸಾಧನದ ಮೂಲಕ ವೆಬ್‌ಸೈಟ್‌ ಕೋಡ್‌ನಲ್ಲಿ ಬಗ್‌ ಪತ್ತೆ ಮಾಡಿ ಸರ್ವರ್‌ ಹ್ಯಾಕ್‌ ಮಾಡುತ್ತಿದ್ದ. ನಂತರ ವೆಬ್‌ಸೈಟ್‌ ಅನ್ನು ತನಗೆ ಹೇಗೇ ಬೇಕೋ ಹಾಗೆ ಕೆಲಸ ಮಾಡುವಂತೆ ಬದಲಾವಣೆ ಮಾಡುತ್ತಿದ್ದ. ಈ ಮಾದರಿಯಲ್ಲಿ ಪೋಕರ್‌ ವೆಬ್‌ಸೈಟ್‌ ಅನ್ನು ಶ್ರೀಕಿ ಹ್ಯಾಕ್‌ ಮಾಡಿದ್ದ.

Click to comment

Leave a Reply

Your email address will not be published. Required fields are marked *

www.publictv.in