Wednesday, 16th October 2019

Recent News

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಕೆ ಪಾಟೀಲ್ ರಾಜೀನಾಮೆ

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮೈತ್ರಿ ಪಾಳಯದಲ್ಲಿ ರಾಜೀನಾಮೆ ಕೂಗೂ ಹೆಚ್ಚಾಗುತ್ತಿದೆ. ಈ ನಡುವೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಅವರು ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಹೆಚ್.ಕೆ ಪಾಟೀಲ್ ಎಐಸಿಸಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿದ ಮತದಾರರಿಗೆ ಧನ್ಯವಾದಗಳು. ಜನ ಏನು ತೀರ್ಪು ಕೊಟ್ಟಿದ್ದಾರೆ ಅದಕ್ಕೆ ನಾವು ತಲೆಬಾಗುತ್ತೇವೆ. ಈ ಫಲಿತಾಂಶದಿಂದ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪಕ್ಷವನ್ನು ಸಂಘಟನೆ ಮಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಈ ರೀತಿಯಲ್ಲಿ ಸೋಲಿಗೆ ಮೈತ್ರಿ ಮಾಡಿಕೊಂಡದ್ದು ಒಂದು ಕಾರಣ ಇರಬಹುದು. ಆದರೆ ಅದೇ ಮುಖ್ಯ ಕಾರಣ ಅಲ್ಲ. ಈ ಸೋಲು ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರುತ್ತದೆ. ಅದನ್ನು ನಮ್ಮ ಹಿರಿಯ ನಾಯಕರು ಸಮರ್ಥವಾಗಿ ನಿಭಾಯಿಸಬೇಕು ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ 352 ಸ್ಥಾನ ಗಳಿಸಿದ್ದರೆ, ಯುಪಿಎ 87 ಹಾಗೂ ಇತರೇ 103 ಸ್ಥಾನವನ್ನು ಗೆದ್ದಿದೆ. ಹಾಗೆಯೇ ಕರ್ನಾಟಕದಲ್ಲಿ ಇದ್ದ 28 ಕ್ಷೇತ್ರದಲ್ಲಿ ಬಿಜೆಪಿ 25 ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದೆ. ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರ್ಕಾರದ ಅಭ್ಯರ್ಥಿಗಳು 2 ಕ್ಷೇತ್ರದಲ್ಲಿ ಗೆದ್ದಿದ್ದಾರೆ.

Leave a Reply

Your email address will not be published. Required fields are marked *