Connect with us

Latest

ನಾವು ವಾಪಸ್ ಹೋಗಲ್ಲ, ಭಾರತದಲ್ಲೇ ಇರುತ್ತೇವೆ- ಪಾಕ್ ವಲಸೆ ಕಾರ್ಮಿಕರು

Published

on

– ಮಕ್ಕಳ ಭವಿಷ್ಯಕ್ಕಾಗಿ ನಾವು ಇಲ್ಲೇ ಉಳಿಯುತ್ತೇವೆ

ಗಾಂಧಿನಗರ: ನಾವು ವಾಪಸ್ ಪಾಕಿಸ್ತಾನಕ್ಕೆ ಹೋಗಲ್ಲ. ಭಾರತದಲ್ಲೇ ಉಳಿದುಕೊಳ್ಳುತ್ತೇವೆ ಎಂದು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಕಾರ್ಮಿಕರು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಜಾಸ್ತಿಯಾಗಿದೆ. ಆದರೂ ಕೊರೊನಾ ವಿರುದ್ಧ ಭಾರತ ದಿಟ್ಟತನದಿಂದ ಹೋರಾಟ ನಡೆಸುತ್ತಿದೆ. ಈ ನಡುವೆ ಲಾಕ್‍ಡೌನ್ ನಲ್ಲಿ ಪಾಕಿಸ್ತಾನದಿಂದ ಅಹಮದಾಬಾದ್‍ಗೆ ಬಂದಿದ್ದ ವಲಸೆ ಕಾರ್ಮಿಕರು ನಾವು ವಾಪಸ್ ಹೋಗಲ್ಲ. ಇಲ್ಲೇ ಉಳಿಯುತ್ತೇವೆ ಎಂದು ಪಟ್ಟು ಹಿಡಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಪಾಕ್ ಕಾರ್ಮಿಕ ಅರ್ಜುನ್, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಬದುಕುವುದು ಬಹಳ ಕಷ್ಟ. ಭಾರತದ ಸರ್ಕಾರ ಮತ್ತು ಇಲ್ಲಿನ ಜನರು ಒಗ್ಗಟ್ಟಿನಿಂದ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವುದನ್ನು ನೋಡಿದ್ದೇವೆ. ಜೊತೆಗೆ ನಮ್ಮ ಮುಂದಿನ ಜೀವನಕ್ಕೆ ಹಾಗೂ ನಮ್ಮ ಮಕ್ಕಳ ಭವಿಷ್ಯದ ಒಳಿತಿಗಾಗಿ ನಾವು ಪಾಕಿಸ್ತಾನಕ್ಕೆ ಹೋಗದೆ ಇಲ್ಲಿ ಉಳಿಯುವ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಲಾಕ್‍ಡೌನ್ ಜಾರಿಯಾಗುವ ಸ್ವಲ್ಪ ದಿನಗಳ ಹಿಂದೆ ಪಾಕಿಸ್ತಾನದಿಂದ ಅಹಮದಾಬಾದ್‍ಗೆ ಕಾರ್ಮಿಕರ ಗುಂಪೊಂದು ವಲಸೆ ಬಂದಿತ್ತು. ನಂತರ ಲಾಕ್‍ಡೌನ್ ಆದ ವೇಳೆ ಅವರನ್ನು ವಾಪಸ್ ಹೋಗಲು ಹೇಳಿದರೂ ಅವರು ಹೋಗುವುದಿಲ್ಲ ಎಂದು ಹೇಳಿದ್ದಾರೆ. ನಾವು ಲಾಕ್‍ಡೌನ್ ಆಗುವ ಸ್ವಲ್ಪ ದಿನದ ಹಿಂದೆ ಇಲ್ಲಿಗೆ ಬಂದಿದ್ದೇವೆ. ಇಲ್ಲಿನ ಜಿಲ್ಲಾಡಳಿತ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದೆ. ಹಾಗಾಗಿ ನಾವು ಇಲ್ಲೇ ಉಳಿಯುತ್ತೇವೆ ಎಂದು ಕಾರ್ಮಿಕ ಮಾಲಾ ಮರ್ಮಾರ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಒಟ್ಟು ಕೊರೊನಾ 49,530 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಪಂಜಾಬ್‍ನಲ್ಲಿ 17,382, ಸಿಂಧ್‍ನಲ್ಲಿ 19,924, ಖೈಬರ್-ಪಖ್ತುನ್ಖ್ವಾದಲ್ಲಿ 7,155, ಬಲೂಚಿಸ್ತಾನದಲ್ಲಿ 3,074, ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ 602, ಇಸ್ಲಾಮಾಬಾದ್‍ನಲ್ಲಿ 1,235 ಪ್ರಕರಣಗಳು ದಾಖಲಾಗಿವೆ. ಕೊರೊನಾಗೆ ಸುಮಾರು 1,052 ಮಂದಿ ಬಲಿಯಾಗಿದ್ದಾರೆ. ಜೊತೆಗೆ 14,155 ಸೋಂಕಿತರು ಚೇತರಿಸಿಕೊಂಡಿದ್ದಾರೆ.