Saturday, 25th January 2020

ವರಮಹಾಲಕ್ಷ್ಮಿ ಹಬ್ಬಕ್ಕೆ `ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಬಿಡೋದು ಗ್ಯಾರೆಂಟಿ!

ಬೆಂಗಳೂರು: ಸಿದ್ಧಸೂತ್ರಗಳ ಚಿತ್ರಗಳು ಸಾಲುಗಟ್ಟಿ ನಿಂತಿರುವಾಗಲೇ ಒಂದು ಮೊಟ್ಟೆಯ ಕಥೆ ಎಂಬ ಚಿತ್ರವನ್ನು ನಿರ್ದೇಶನ ಮಾಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದವರು ರಾಜ್ ಬಿ ಶೆಟ್ಟಿ. ಯಾವ ಸ್ಟಾರ್‍ಗಳೂ ಇಲ್ಲದ ಈ ಚಿತ್ರದ ಮೂಲಕವೇ ವಿಭಿನ್ನ ನೋಡದ ನಿರ್ದೇಶಕರಾಗಿ, ನಟರಾಗಿ ಅಚ್ಚರಿ ಹುಟ್ಟಿಸಿದವರು ರಾಜ್ ಶೆಟ್ಟಿ. ಅವರು ತಮ್ಮ ಮೊದಲ ಚಿತ್ರದ ಬಳಿಕ ಈಗ ನಟನಾಗಿಯೇ ಬ್ಯುಸಿಯಾಗಿದ್ದಾರೆ. ಅವರು ನಟಿಸಿರೋ ಬಹುನಿರೀಕ್ಷಿತ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಇದೇ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗುತ್ತಿರೋದಾಗಿ ಚಿತ್ರತಂಡ ಘೋಷಿಸಿದೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ಪ್ರತಿಭಾವಂತರ ಮಹಾ ಸಂಗಮವೇ ಸಂಭವಿಸಿದೆ. ರಂಗಭೂಮಿಯಿಂದಲೇ ನಟನಾಗಿ ರೂಪುಗೊಂಡು, ಕಿರುತೆರೆ, ಸಿನಿಮಾಗಳಲ್ಲಿ ನಟಿಸುತ್ತಾ ಪ್ರಸಿದ್ಧರಾಗಿರೋ ಸುಜಯ್ ಶಾಸ್ತ್ರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಬಹುಮುಖ ಪ್ರತಿಭೆ ಹೊಂದಿರೋ ಸುಜಯ್ ನಿರ್ದೇಶನ ಮಾಡಿರೋ ಮೊದಲ ಚಿತ್ರವಿದು. ದಶಕಗಳ ಕಾಲ ನಟನಾಗಿದ್ದುಕೊಂಡು ಪ್ರೇಕ್ಷಕರ ನಾಡಿ ಮಿಡಿತ ಅರಿತುಕೊಂಡಿರೋ ಸುಜಯ್ ಶಾಸ್ತ್ರಿ ಕಂಪ್ಲೀಟ್ ಕಾಮಿಡಿ ಜಾನರಿನಲ್ಲಿ, ಭಿನ್ನವಾದ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರೀಕರಣ ಶುರುವಾದ ಕ್ಷಣದಿಂದಲೇ ಪ್ರೇಕ್ಷಕರ ಗಮನವನ್ನು ತನ್ನತ್ತ ಸೆಳೆದುಕೊಂಡಿತ್ತು. ಆ ನಂತರ ಹೊರ ಬಂದ ಥರ ಥರದ ಪೋಸ್ಟರುಗಳಂತೂ ನಿರೀಕ್ಷೆಗೂ ಮೀರಿ ಕಮಾಲ್ ಸೃಷ್ಟಿಸಿದ್ದವು. ಇತ್ತೀಚೆಗೆ ಹೊರ ಬಂದಿರೋ ಎರಡು ಹಾಡುಗಳಂತೂ ಮಣಿಕಾಂತ್ ಕದ್ರಿಯವರ ಮಾಂತ್ರಿಕ ಸಂಗೀತದೊಂದಿಗೆ ವೈರಲ್ ಆಗಿ ಬಿಟ್ಟಿವೆ. ಹೀಗೆ ಆರಂಭದ ಹಾದಿಯಲ್ಲಿಯೇ ಭರ್ಜರಿ ಪಾಸಿಟಿವ್ ಟಾಕ್ ಕ್ರಿಯೇಟ್ ಆಗಿರೋದರ ಬಗ್ಗೆ ಚಿತ್ರ ತಂಡ ಸಂತಸಗೊಂಡಿದೆ.

ಈಗಾಗಲೇ ಹೊರ ಬಿದ್ದಿರೋ ಮಾಹಿತಿಗಳ ಪ್ರಕಾರ ಹೇಳೋದಾದರೆ ಇದು ಮಜವಾದ ಕಥೆ ಹೊಂದಿರೋ ಸಂಪೂರ್ಣ ಕಾಮಿಡಿ ಚಿತ್ರ. ರಾಜ್ ಬಿ ಶೆಟ್ಟಿ ಒಂದು ಮೊಟ್ಟೆಯ ಕಥೆಗಿಂತಲೂ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂಥಾದ್ದೊಂದು ಹೊಸತನದ ಕಥೆಯನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿರುವವರು ಕ್ರಿಸ್ಟಲ್ ಪಾರ್ಕ್ ಟಿ. ಆರ್ ಚಂದ್ರಶೇಖರ್. ಈಗಾಗಲೇ ಚಮಕ್, ಅಯೋಗ್ಯ, ಬೀರ್‍ಬಲ್ ಮುಂತಾದ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರೋ ಚಂದ್ರಶೇಖರ್ ಅವರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರವನ್ನು ಮತ್ತಷ್ಟು ರಿಚ್ ಆಗಿ ನಿರ್ಮಾಣ ಮಾಡಿದ್ದಾರೆ. ಇದೇ ವರಮಹಾಲಕ್ಷ್ಮಿ ಹಬ್ಬದಂದು ಈ ಚಿತ್ರ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *