Saturday, 17th August 2019

ಲವ್ ಮ್ಯಾರೇಜ್‍ಗೆ ಓಕೆ ಅಂದ್ರು-ಮದ್ವೆ ದಿನ ವಧು ಸಂಬಂಧಿಕರಿಗೆ ಚಾಕು ಇರಿದ್ರು

ಗದಗ: ಮದುವೆ ಮಾಡಿಸಲು ಸಬ್‍ರಿಜಿಸ್ಟರ್ ಕಚೇರಿಗೆ ಬಂದು ಯುವತಿಯ ಸಂಬಂಧಿಕರ ಮೇಲೆ ಯುವಕನ ಕುಟುಂಬದವರು ಚೂರಿ ಇರಿದ ಘಟನೆ ಗದಗದಲ್ಲಿ ನಡೆದಿದೆ.

ಗದಗ ತಾಲೂಕಿನ ಹೊಸಳ್ಳಿ ಗ್ರಾಮದ ಅಪ್ಪಣ್ಣ ಕೊಟಗಾರ ಮತ್ತು ನೀಲವ್ವ ಇಬ್ಬರು ಪರಸ್ಪರ ಪ್ರೀತಿ ಮಾಡಿದ್ದರು. ಈ ಪ್ರೇಮಿಗಳ ಮದುವೆಗೆ ಆರಂಭದಲ್ಲಿ ಇಬ್ಬರ ಕುಟುಂಬಸ್ಥರು ವಿರೋಧಿಸಿದ್ದಾರೆ. ನಂತರ ಹಾಗೋ ಹೀಗೋ ಮಾಡಿ ಎರಡು ಕುಟುಂಬದವರು ಒಪ್ಪಿಕೊಂಡು ಗದಗ ಸಬ್‍ರಿಜಿಸ್ಟರ್ ಕಚೇರಿಗೆ ಬಂದಿದ್ದಾರೆ.

ಕಚೇರಿ ಬಳಿ ಎರಡು ಕುಟುಂಬದ ನಡುವೆ ಸ್ವಲ್ಪ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಆದರೆ ಯುವಕ ಅಪ್ಪಣ್ಣನ ಮನೆಯ ನಾಲ್ಕೈದು ಜನರು ಏಕಾಏಕಿ ಹುಡುಗಿ ಮನೆಯವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಇಬ್ಬರಿಗೆ ಗಾಯಗಳಾಗಿವೆ. ಇಬ್ಬರು ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗದಗ ನಗರದ ಸಬ್‍ರಿಜಿಸ್ಟರ್ ಕಚೇರಿಯ ಜನನಿಬೀಡಿತ ಪ್ರದೇಶ ಸಬ್‍ರಿಜಿಸ್ಟರ್, ಗದಗ ಗ್ರಾಮೀಣ ಪೊಲೀಸ್ ಠಾಣೆ, ತಹಶೀಲ್ದಾರ್ ಕಚೇರಿ ಇರುವಂತ ಪ್ರದೇಶದಲ್ಲಿ ಯಾವುದೇ ಭಯವಿಲ್ಲದೇ ನಾಲ್ಕೈದು ಜನರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದಾರೆ.

ಜನಜಂಗುಳಿಯ ಈ ಪ್ರದೇಶದಲ್ಲಿ ಯಾರು ರಕ್ಷಣೆ ಬಂದಿಲ್ಲ ಎಂದು ಹಲ್ಲೆಗೊಳಗಾದ ಕಿರಣ್ ಆರೋಪಿಸಿದ್ದಾರೆ. ಈ ಘಟನೆ ಬಗ್ಗೆ ಗದಗ ಎಸ್‍ಪಿ ಅವರನ್ನು ಕೇಳಿದ್ರೆ ಇನ್ನೂ ದೂರು ನೀಡಿಲ್ಲ. ಎರಡು ಕಡೆಯವರು ಒಂದೇ ಸಮುದಾಯದವರು, ದೂರು ನೀಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳವುದಾಗಿ ಹಾರಿಕೆ ಸ್ಪಷ್ಟನೆ ಉತ್ತರ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *