Wednesday, 19th September 2018

Recent News

ದಂಧೆಕೋರರ ಪರ ನಿಂತ ಸಿಪಿಐಗೆ ಸಿಂಗಂ ಸ್ಟೈಲಲ್ಲಿ ಪಿಎಸ್‍ಐ ಅವಾಜ್!

ಚಿಕ್ಕಬಳ್ಳಾಪುರ: ಅನುಮತಿಯಿಲ್ಲದೆ ಅಕ್ರಮವಾಗಿ ಗ್ರಾನೈಟ್ ಸಾಗಿಸುತ್ತಿದ್ದ ಲಾರಿಗಳನ್ನು ಸೀಜ್ ಮಾಡುವ ವೇಳೆ ದಂಧೆಕೋರರ ಪರವಾಗಿ ನಿಂತ ಸಿಪಿಐ ಅಧಿಕಾರಿಗೆ ಪಿಎಸ್‍ಐ ಅವಾಜ್ ಹಾಕಿದ ಘಟನೆ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ರಾಮನಾಥಪುರದಲ್ಲಿ ನಡೆದಿದೆ.

ದೇವನಹಳ್ಳಿಯ ಜೆಡಿಎಸ್‍ನ ಮಾಜಿ ಅಧ್ಯಕ್ಷನಾದ ಕೃಷ್ಣಮೂರ್ತಿ ಕಡೆಯವರು ಅಕ್ರಮವಾಗಿ ಲಾರಿಗಳಲ್ಲಿ ಗ್ರಾನೈಟ್ ಸಾಗಿಸುತ್ತಿದ್ದರು. ಕಳೆದ ಭಾನುವಾರ ಕಾನೂನು ಬಾಹಿರವಾಗಿ ಗ್ರಾನೈಟ್ ಸಾಗಿಸುತ್ತಿರುವ ಖಚಿತ ಮಾಹಿತಿ ವಿಶ್ವನಾಥಪುರ ಪೊಲೀಸರಿಗೆ ಸಿಕ್ಕಿದೆ. ಈ ಕುರಿತು ಪೊಲೀಸ್ ಸಿಬ್ಬಂದಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾಗ ದಂಧೆಕೋರರು ಪೊಲೀಸರ ಮೇಲೆಯೇ ದಬ್ಬಾಳಿಕೆ ನಡೆಸಿದ್ದಾರೆ.

ಸಿಬ್ಬಂದಿಗೆ ಲಾರಿಯನ್ನು ವಶಪಡಿಸಿಕೊಳ್ಳದಂತೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಸಿಬ್ಬಂದಿಯು ವಿಶ್ವನಾಥಪುರದ ಪಿಎಸ್‍ಐ ಶ್ರೀನಿವಾಸ್‍ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪಿಎಸ್‍ಐ ಮೇಲೆಯೂ ದಬ್ಬಾಳಿಕೆ ನಡೆಸಿದ್ದಾರೆ. ಪಿಎಸ್‍ಐ ಬಗ್ಗದಿದ್ದಾಗ ಮೇಲಾಧಿಕಾರಿಗಳ ಮುಖಾಂತರ ಒತ್ತಡ ಮುಂದಾಗಿದ್ದಾರೆ.

ದೂರವಾಣಿ ಮೂಲಕ ಮಾತನಾಡಿದ ವಿಜಯಪುರ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ದಂಧೆಕೋರರ ಪರನಿಂತು ಲಾರಿಗಳನ್ನು ಬಿಡುವಂತೆ ಒತ್ತಡ ಹೇರಿದ್ದಾರೆ. ಈ ವೇಳೆ ಪಿಎಸ್‍ಐಯು ಮೇಲಾಧಿಕಾರಿಯ ಒತ್ತಡಕ್ಕೆ ಮಣಿಯದೇ ಕಾನೂನು ಎಲ್ಲರಿಗೂ ಒಂದೇ ಅಂತ ಖಡಕ್ ಆಗಿ ಉತ್ತರಿಸಿದ್ದಾರೆ. ದಂಧೆಕೋರರ ಪರ ನಿಂತ ಮೇಲಾಧಿಕಾರಿಗೆ ಫೋನ್‍ನಲ್ಲಿಯೇ ತರಾಟೆ ತೆಗೆದುಕೊಂಡಿದ್ದಾರೆ.

ಈ ಎಲ್ಲಾ ಘಟನೆಯನ್ನು ಸ್ಥಳೀಯರು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್ ಮಿಡಿಯಾಗಳಲ್ಲಿ ವಿಡಿಯೋ ಹಾಕಿದ್ದಾರೆ. ಸದ್ಯ ಪಿಎಸ್‍ಐ ಶ್ರೀನಿವಾಸ್‍ರವರು ಮೇಲಾಧಿಕಾರಿಗೆ ಖಡಕ್ ಆವಾಜ್ ಹಾಕಿದ ವಿಡಿಯೋ ವೈರಲ್ ಆಗಿದ್ದು, ಪಿಎಸ್‍ಐ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *