Bengaluru City
113 ತಾಲೂಕುಗಳಲ್ಲಿ ಮೊದಲ ಹಂತದ ಲೋಕಲ್ ಫೈಟ್ – ಸಂಜೆ 5 ಗಂಟೆವರೆಗೆ ಮತದಾನ

ಬೆಂಗಳೂರು: ಇಂದು ಲೋಕಲ್ ಕದನಕ್ಕೆ ಮತದಾರನ ಮುನ್ನುಡಿ ಹಾಕಲಿದ್ದಾನೆ. ರಾಜ್ಯದಲ್ಲಿ ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ಇಂದು ನಡೆಯುತ್ತಿದೆ. 113 ತಾಲೂಕುಗಳ 2,930 ಗ್ರಾಮ ಪಂಚಾಯ್ತಿಗಳಿಗೆ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಇದೆ. ಸಂಜೆ 4 ರಿಂದ 5 ಗಂಟೆವರೆಗೆ ಕೊರೊನಾ ಸೋಂಕಿತರ ಮತದಾನ ಇರಲಿದೆ.
ಉಪಚುನಾವಣೆಗೆ ನಿಗದಿಪಡಿಸಿದ ಮಾರ್ಗಸೂಚಿಯೇ ಈ ಚುನಾವಣೆಗೂ ಅನ್ವಯವಾಗಲಿದೆ. ಕೊರೊನಾ ಮುಂಜಾಗ್ರತೆಗಳೊಂದಿಗೆ ‘ಹಳ್ಳಿ ಫೈಟ್’ ನಡೆಯುತ್ತಿದೆ. ಚುನಾವಣಾ ಸಿಬ್ಬಂದಿ, ಮತದಾರರಿಗೆ ಮಾಸ್ಕ್ ಕಡ್ಡಾಯವಾಗಿದೆ. ಮತದಾನ ವೇಳೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮಾಡಲಾಗಿದೆ.
ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಲಿದ್ದು, ಅದರಲ್ಲಿ ಇಂದು ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿದೆ. ಮೊದಲ ಹಂತದಲ್ಲಿ 43,238 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಅಖಾಡದಲ್ಲಿ ಒಟ್ಟು 1,21,760 ಮಂದಿ ಸ್ಪರ್ಧೆ ನಡೆಯುತ್ತಿದೆ. ಈಗಾಗಲೇ 4,377 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 1,17,383 ಮಂದಿಯಿಂದ ಅದೃಷ್ಟ ಪರೀಕ್ಷೆ ನಡೆಯಲಿದೆ. ಇಂದು ವೇತನಸಹಿತ ರಜೆ ಹಿನ್ನೆಲೆ, ಹಳ್ಳಿಗಳತ್ತ ಮತದಾರರು ಹೆಜ್ಜೆ ಹಾಕುತ್ತಿದ್ದಾರೆ. ಡಿಸೆಂಬರ್ 30ರಂದು ಗ್ರಾಮ ಪಂಚಾಯ್ತಿ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.
