Connect with us

Crime

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು- ಗೆದ್ದ ಮಹಿಳೆಯ ಮಗನನ್ನೇ ಕೊಂದ ಪಾಪಿ

Published

on

ರಾಯಚೂರು: ಗ್ರಾಮ ಪಂಚಾಯಿತಿ ಚುನಾವಣೆಯ ರಾಜಕೀಯ ದ್ವೇಷ ಹಿನ್ನೆಲೆ ಯುವಕನನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಶರಣಬಸವ (28) ಕೊಲೆಯಾದ ಯುವಕ. ಚುನಾವಣೆಯಲ್ಲಿ ಸೋತ ಹಿನ್ನೆಲೆ ದ್ವೇಷದಿಂದ ಸೋತ ಜಗದೀಶ್ ಗ್ರಾ.ಪಂ.ಸದಸ್ಯರಾಗಿ ಆಯ್ಕೆಯಾದವರ ಮಗನನ್ನೇ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ.

ನಿನ್ನೆ ರಾತ್ರಿ ಎರಡು ಗುಂಪುಗಳ ನಡುವೆ ಜಗಳವಾಗಿತ್ತು. ಜಗದೀಶ್ ನಿಂದ ಶರಣಬಸವನ ಮೇಲೆ ಮಾರಣಾಂತಿಕ ಹಲ್ಲೆ ನಡೆದು ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗ ಮಧ್ಯೆ ಯುವಕ ಸಾವನ್ನಪ್ಪಿದ್ದಾನೆ. ಕಳೆದ ಚುನಾವಣೆಯಲ್ಲಿ ಶರಣಬಸವನ ತಾಯಿ ಹನುಮಂತಮ್ಮ ಗೆದ್ದಿದ್ದಳು, ಈ ಬಾರಿ ಚುನಾವಣೆಯಲ್ಲಿ ಸದಸ್ಯ ಸ್ಥಾನ ಬಿಟ್ಟು ಕೊಡಿ ಎಂದು ಜಗದೀಶ್ ಕುಟುಂಬದವರು ಕೇಳಿದ್ದರು. ಆದರೆ ಶರಣಬಸವ ಕುಟುಂಬ ಚುನಾವಣೆಯಿಂದ ಹಿಂದೆ ಸರಿದಿರಲಿಲ್ಲ. ಇದರಿಂದ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅದರಂತೆ ನಿನ್ನೆ ರಾತ್ರಿ ಮನೆಯ ಮುಂದೆ ಕುಳಿತಿರುವಾಗ ಹತ್ತು ಜನರ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ಮೃತನ ಕಡೆಯವರು ಆರೋಪಿಸಿದ್ದಾರೆ.

ಗಲಾಟೆಯಲ್ಲಿ ಶರಣಬಸವನಿಗೆ ಗಂಭೀರ ಗಾಯವಾಗಿತ್ತು. ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಹನುಮಂತಮ್ಮ, ಅಮರೇಶ ಗಾಯಗೊಂಡಿದ್ದು, ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಜಗದೀಶ್ ಸೇರಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *