Thursday, 20th February 2020

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ರೆ ಕೆಲವರಿಗೆ ಗೌರವ ಕಡಿಮೆ: ರಮೇಶ್ ಕುಮಾರ್

ಕೋಲಾರ: ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಕೆಲವರಿಗೆ ಗೌರವ ಕಡಿಮೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಅಲ್ಲೆ ಸತ್ತರೂ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ವಿ ಅಂತಾರೆ ಎಂದು ಶಾಸಕ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಇಂದು ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ 2 ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆ ವೈದ್ಯರು ಕಾಪಿ ಹೊಡೆದು ಪರೀಕ್ಷೆ ಬರೆದು ಬಂದು ಚಿಕಿತ್ಸೆ ಕೊಡುತ್ತಿಲ್ಲ. ಅವರೆಲ್ಲಾ ಮೆಡೆಲ್ ತೆಗೆದುಕೊಂಡ ಉತ್ತಮ ವೈದ್ಯರು. ನಮ್ಮ ಜನರಲ್ಲಿ ಸರ್ಕಾರಿ ಆಸ್ಪತ್ರೆಗಳೆಂದರೆ ತಾತ್ಸಾರ ಮನೋಭಾವನೆ ಮೂಡಿದೆ ಇದನ್ನು ಮೊದಲು ಹೋಗಲಾಡಿಸಬೇಕಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳ ಕುರಿತು ಜನರಿಗೆ ಮಾನಸಿಕವಾಗಿ ಬಂದಿರುವ ಕಾಯಿಲೆಯನ್ನು ವಾಸಿ ಮಾಡಲು ಸಾಧ್ಯವಿಲ್ಲ. ಜನ ಜಾಗೃತರಾಗದಿದ್ದಲ್ಲಿ ನಾವೇನು ಮಾಡಲು ಸಾಧ್ಯವಿಲ್ಲ. ನಾನೇನು ಅರೋಗ್ಯ ಸಚಿವನಾ, ಎಲ್ಲವನ್ನೂ ಸರಿ ಮಾಡಕ್ಕಾಗುತ್ತಾ? ಎಲ್ಲಾ ಸರಿ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರಿ ಆಸ್ಪತ್ರೆಗಳು ಎಂದರೆ ಮೂಗು ಮುರಿಯುವ ಜನರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಫೋನ್ ಟ್ಯಾಪಿಂಗ್ ಕುರಿತು ಪ್ರತಿಕ್ರಿಯಿಸಲ್ಲ:
ಸಭಾದ್ಯಕ್ಷ ಸ್ಥಾನ ದೊಡ್ಡದು, ನಾವು ಸಣ್ಣವರು, ಅಂತಹ ಸ್ಥಾನಕ್ಕೆ ಹೋಗಿ ಕುಳಿತುಕೊಂಡು ಬಂದ ಮೇಲೆ ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ಜನ ನನ್ನನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಗೌರವಯುತವಾಗಿ ನಡೆದುಕೊಳ್ಳಬೇಕು, ಜನರು ನಮ್ಮ ಮೇಲೆ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಾವು ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಹೀಗಾಗಿ ಫೋನ್ ಕದ್ದಾಲಿಕೆ ಕುರಿತು ಪ್ರತಿಕ್ರಿಯಿಸಲ್ಲ ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *