Belgaum
ರಸ್ತೆಯಲ್ಲಿ ನಿಂತು ಮಾತನಾಡುವವರ ರೀತಿ ಮಾತನಾಡಬಾರದು – ಠಾಕ್ರೆಗೆ ಕಾರಜೋಳ ತಿರುಗೇಟು

ವಿಜಯಪುರ: ರಸ್ತೆಯಲ್ಲಿ ನಿಂತು ಮಾತನಾಡುವವರ ರೀತಿ ಮಾತನಾಡಬಾರದು ಎಂದು ಡಿಸಿಎಂ ಗೋವಿಂದ ಕಾರಜೋಳ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ಸಿಎಂ ಆದವರಿಗೆ ಒಕ್ಕೂಟ ವ್ಯವಸ್ಥೆಯ ಪ್ರಜ್ಞೆ ಇರಬೇಕು. ಕಾಶ್ಮೀರ ಹಾಗೂ ಪಾಕ್ ಎಂಬ ಉದ್ಧಟತನದ ಹೇಳಿಕೆ ಸರಿಯಲ್ಲ. ಬೆಳಗಾವಿಯ ಒಂದಿಂಚೂ ನೆಲ ಬಿಡುವ ಮಾತೆಯಿಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಸಿಎಂ ಆದವರು ಮಾತನಾಡಬೇಕು ಎಂದು ಹೇಳಿದರು.
ದೇಶದಲ್ಲಿ ಎಲ್ಲಾ ಭಾಷೆ ಕಲಿತು ಪ್ರೀತಿಸಬೇಕು. ನಮ್ಮ ನೆಲ ಜಲ ಪ್ರಶ್ನೆ ಬಂದಾಗ ರಾಜಕೀಯ ಪ್ರಶ್ನೆಯೇ ಇಲ್ಲ. 2008 ರಿಂದ 2013ರ ಅವಧಿಯಲ್ಲಿ ಬಿಜೆಪಿ ಸರ್ಕಾರವಿತ್ತು. ಆಗ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಮಾಡಿದ್ದೇವು. ಆಗ ಎಲ್ಲಾ ಮರಾಠಿಗರು ತುಂಬಾ ಸಹಕಾರ ನೀಡಿ, ಕನ್ನಡಾಂಬೆಗೆ ಕೈಮುಗಿದಿದ್ದರು. ಮರಾಠಿಗರೊಂದಿಗೆ ನಾವೆಲ್ಲ ಸಹೋದದರು ಇದ್ದ ಹಾಗೆ ಇದ್ದೇವೆ. ಮುಂದೆಯು ಹಾಗೇ ಇರಬೇಕು. ಚುನಾಯಿತ ಪ್ರತಿನಿಧಿಗಳು ಆದರ್ಶವಾಗಿರಬೇಕು ಎಂದು ಸಲಹೆ ನೀಡಿದರು.
ಮುಂಬರುವ ಏಪ್ರಿಲ್ ನಂತರ ಸಿಎಂ ಬದಲಾಗುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ನಮ್ಮ ಪಕ್ಷದ ವಕ್ತಾರಲ್ಲ. ಅವರೇನು ಬಿಜೆಪಿಯಲ್ಲಿದ್ದಾರೆಯೇ ಎಂದು ಪ್ರಶ್ನಿಸಿ ಗೋವಿಂದ ಕಾರಜೋಳ ತಿರುಗೇಟು ಕೊಟ್ಟರು.
