Connect with us

Bengaluru City

ಕಲ್ಲೇಟಿಗೆ ಡ್ರೈವರ್ ಬಲಿ – ಕುಟುಂಬಕ್ಕೆ 30 ಲಕ್ಷ ಪರಿಹಾರ, ಒಬ್ಬರಿಗೆ ಉದ್ಯೋಗ

Published

on

– ಪತ್ರದ ಮೂಲಕ ಸಂತಾಪ ಸೂಚಿಸಿದ ಲಕ್ಷ್ಮಣ ಸವದಿ
– ಇಂದು ರಾಜ್ಯದಲ್ಲಿ 5,300ಕ್ಕೂ ಹೆಚ್ಚು ಬಸ್ಸುಗಳ ಸಂಚಾರ

ಬೆಂಗಳೂರು: ಕಳೆದ ಕೆಲದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಇದೀಗ ಹಿಂಸೆಗೆ ತಿರುಗಿದೆ. ಬಾಗಲಕೋಟೆಯಲ್ಲಿ ಸಾರಿಗೆ ನೌಕರ ಬಸ್ ಚಲಾಯಿಸಿಕೊಂಡು ಹೋಗುತ್ತಿರುವಾಗ ಕಿಡಿಗೇಡಿಗಳು ನಡೆಸಿದ ಕಲ್ಲು ತೂರಾಟದಿಂದಾಗಿ ಬಸ್ ಚಾಲಕ ಮೃತಪಟ್ಟಿದ್ದರು. ಬಸ್ ಚಾಲಕ ಮೃತ ಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯದ ಉಪಮುಖ್ಯಮಂತ್ರಿ, ಸಾರಿಗೆ ಸಚಿವರು ಆದ ಲಕ್ಷ್ಮಣ ಸವದಿ ಅವರು ಪತ್ರದ ಮೂಲಕ ಸಂತಾಪ ಸೂಚಿಸಿದ್ದಾರೆ.

ಮೃತಪಟ್ಟ ಸಾರಿಗೆ ಸಂಸ್ಥೆಯ ಬಸ್ ಚಾಲಕರಾದ ಅವಟಿ ಅವರಿಗೆ ಸಂತಾಪ ಸೂಚಿಸಿ, ಅವರ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ ಮತ್ತು ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸಾರಿಗೆ ನಿಗಮದಲ್ಲಿ ಉದ್ಯೋಗ ನೀಡುವುದಾಗಿ ಪತ್ರದ ಮೂಲಕ ಲಕ್ಷ್ಮಣ ಸವದಿಯವರು ತಿಳಿಸಿದ್ದಾರೆ.

ಪತ್ರದಲ್ಲಿ ಏನಿದೆ?
ಸಾರ್ವಜನಿಕರ ಹಿತದೃಷ್ಟಿಯಿಂದ ಇಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಷ್ಠಾವಂತ ಚಾಲಕರಾದ ಅವಟಿ ಅವರು ಜಮಖಂಡಿಯ ಸಮೀಪದಲ್ಲಿ ಕರ್ತವ್ಯಕ್ಕೆ ಹಾಜರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ತೀವ್ರ ಹಿಂಸಾಕೃತ್ಯ ಎಸಗಿದ ಪರಿಣಾಮವಾಗಿ ಅವರು ಮೃತಪಟ್ಟಿರುವುದು ತೀವ್ರ ದು:ಖದಾಯಕ ಸಂಗತಿಯಾಗಿದೆ. ಮೃತರ ಆತ್ಮಕ್ಕೆ ನಾನು ಶಾಂತಿ ಕೋರುತ್ತೇನೆ ಮತ್ತು ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳನ್ನು ತಿಳಿಸಬಯಸುತ್ತೇನೆ.

ಈ ದುರ್ಘಟನೆಯ ವರದಿ ಬಂದ ತಕ್ಷಣವೇ ಮೃತರ ಕುಟುಂಬಕ್ಕೆ 30 ಲಕ್ಷ ರೂಪಾಯಿ ಮೊತ್ತದ ಪರಿಹಾರ ನೀಡಲು ಹಾಗೂ ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸಾರಿಗೆ ನಿಗಮದಲ್ಲಿ ಉದ್ಯೋಗ ನೀಡಲು ಸೂಚಿಸಿದ್ದೇನೆ.

ಶಾಂತಿಯುತವಾಗಿ ಮುಷ್ಕರ ನಡೆಸುತ್ತೇವೆ ಎಂದು ಮುಷ್ಕರ ನಿರತರು ಹೇಳುತ್ತಲೇ ತಮ್ಮ ಸಹೋದ್ಯೋಗಿಯ ಜೀವವನ್ನೇ ಬಲಿ ತೆಗೆದುಕೊಂಡಿರುವುದು ತೀವ್ರ ಖಂಡನೀಯವಾಗಿದೆ. ತಾವೂ ಕೆಲಸ ಮಾಡುವುದಿಲ್ಲ, ಇತರ ನಿಷ್ಠಾವಂತರಿಗೂ ಕೆಲಸ ಮಾಡಲು ಬಿಡುವುದಿಲ್ಲ ಎಂಬ ಪ್ರತಿಭಟನಾಕಾರರ ಧೋರಣೆ ಎಷ್ಟರ ಮಟ್ಟಿಗೆ ಸರಿ? ಈ ರೀತಿ ಹಿಂಸಾಕೃತ್ಯ ನಡೆಸುವವರನ್ನು ಸರ್ಕಾರವು ಎಂದಿಗೂ ಕ್ಷಮಿಸುವುದಿಲ್ಲ. ಈ ರೀತಿಯ ದುಷ್ಕೃತ್ಯ ನಡೆಸಿದರೆ ಕರ್ತವ್ಯಕ್ಕೆ ಹಾಜರಾಗುವ ನೌಕರರನ್ನು ವಿಚಲಿತಗೊಳಿಸಬಹುದು ಎಂದು ಕೆಲವರು ಹವಣಿಸಿದ್ದರೆ ಅದು ಯಶಸ್ವಿಯಾಗುವುದಿಲ್ಲ. ಏಕೆಂದರೆ ಈಗಾಗಲೇ ಮುಷ್ಕರ ನಿರತರ ಹಠಮಾರಿ ಧೋರಣೆ ಅನೇಕರಿಗೆ ಅರ್ಥವಾಗಿದೆ.

5,300ಕ್ಕೂ ಹೆಚ್ಚು ಬಸ್ಸುಗಳ ಸಂಚಾರ
ಸಾರಿಗೆ ನೌಕರರ ಮುಷ್ಕರದಿಂದಾಗಿ ಕಳೆದ 10 ದಿನಗಳಲ್ಲಿ ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಬಸ್ಸುಗಳ ಸೇವೆ ಸಿಗದೆ ಪರಿತಪಿಸುವಂತಾಗಿರುವುದು ದುರ್ದೈವದ ಸಂಗತಿಯಾಗಿದೆ. ಆದರೆ ನಮ್ಮ ಕರೆಗೆ ಓಗುಟ್ಟು ಅನೇಕ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿರುವುದರಿಂದ ಇಂದು 5,300ಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುವಂತಾಗಿರುವುದಕ್ಕೆ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ನನ್ನ ಹಾರ್ದಿಕ ಅಭಿನಂದನೆಗಳು.

ನಾನು ಈಗಾಗಲೇ ತಿಳಿಸಿದಂತೆ ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದ ನಂತರ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಆದರೂ ಸಾರಿಗೆ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುವಂಥ ವಿಪರ್ಯಾಸದ ಕ್ರಮಕ್ಕೆ ಕೆಲವರು ಪ್ರಚೋದನೆ ನೀಡುತ್ತಿರುವುದರಿಂದ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಎದುರಾಗಿದೆ. ಅಷ್ಟೇಅಲ್ಲ ಸಾರಿಗೆ ನಿಗಮಗಳಿಗೆ ಬರಬೇಕಾಗಿದ್ದ ಆದಾಯ ಸ್ಥಗಿತಗೊಂಡು ಈವರೆಗೆ ಸುಮಾರು 187 ಕೋಟಿ ರೂ. ಗಿಂತಲೂ ಹೆಚ್ಚು ಮೊತ್ತದ ಹಾನಿಯಾಗಿದೆ. ಈ ರೀತಿಯ ಬೆಳವಣಿಗೆಗಳಿಂದ ಸಾರಿಗೆ ನಿಗಮಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.

ನಾಲ್ಕೂ ಸಾರಿಗೆ ನಿಗಮಗಳಲ್ಲಿ ಸಾರ್ವಜನಿಕ ಸೇವೆಗೆ ಮುಂದಾಗಿದ್ದ ಬಸ್ಸುಗಳ ಪೈಕಿ ಕೆಲವು ದುಷ್ಕರ್ಮಿಗಳು ನಡೆಸಿದ ಕಲ್ಲು ತೂರಾಟ ಮತ್ತು ಹಿಂಸಾಚಾರಗಳಿಂದಾಗಿ ಈವರೆಗೆ ಒಟ್ಟು 80 ಬಸ್ಸುಗಳು ಜಖಂಗೊಂಡಿದ್ದು, ಸಾರಿಗೆ ನಿಗಮಗಳಿಗೆ ಮತ್ತಷ್ಟು ಆರ್ಥಿಕ ಹಾನಿ ಹೆಚ್ಚುವಂತಾಗಿದೆ. ಇದರಿಂದ ಪರೋಕ್ಷವಾಗಿ ನಮ್ಮ ನಿಗಮಗಳ ನೌಕರರ ಮಿತ್ರರಿಗೇ ನಷ್ಟವಾಗುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಈ ರೀತಿಯ ಹಿಂಸಾಚಾರಗಳಿಂದ ಯಾವ ಪುರುಷಾರ್ಥವನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮುಷ್ಕರ ನಿರತರು ಅರಿತುಕೊಳ್ಳಬೇಕು.

ಶಾಂತಿ ಮತ್ತು ಸಹನೆಯ ಧೋರಣೆಯನ್ನು ನಮ್ಮ ಸರ್ಕಾರ ತಳೆದಿದ್ದು, ಇದನ್ನು ಯಾರೂ ದುರುಪಯೋಗಪಡಿಸಿಕೊಳ್ಳಲು ಮುಂದಾಗಬಾರದು. ಒಂದು ವೇಳೆ ಅಹಿತಕರ ಘಟನೆಯಂಥ ಕೃತ್ಯಗಳಿಗೆ ಮುಂದಾದರೆ ಅವರು ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ. ನಮ್ಮ ನೌಕರ ಬಾಂಧವರು ಸ್ವಯಂಪ್ರೇರಿತರಾಗಿ ಕೆಲಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ತಡೆಯುವ, ಬೆದರಿಸುವ ಮತ್ತು ಅವರ ಮೇಲೆ ಹಲ್ಲೆ ನಡೆಸುವ ಪ್ರಯತ್ನಗಳು ಹಲವು ಕಡೆ ನಡೆದಿವೆ. ಈ ರೀತಿಯ ದುಂಡಾವರ್ತನೆ ನಡೆಸುವವರು ಯಾರೇ ಆಗಿರಲಿ ಅಂಥವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.


ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ
ಸಾರಿಗೆ ನೌಕರರ ಬೇಡಿಕೆ ಬಗ್ಗೆ ಪ್ರಸಿದ್ಧ ಸಿನಿಮಾ ನಟರಾದ ಶ್ರೀ ಯಶ್ ಅವರೂ ಸೇರಿದಂತೆ ಕೆಲವರು ನನ್ನೊಂದಿಗೆ ಚರ್ಚಿಸಿದ್ದಾರೆ. ಅವರ ಬೇಡಿಕೆಗಳ ಬಗ್ಗೆ ನನಗೂ ಸಹಾನುಭೂತಿಯಿದೆ. ಆದರೆ ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ನಮ್ಮ ನೌಕರ ಬಂಧುಗಳು ಕರ್ತವ್ಯಕ್ಕೆ ಹಾಜರಾಗಿ ಮುಷ್ಕರ ಸ್ಥಗಿತಗೊಳಿಸಿದರೆ ಮತ್ತೆ ಮಾತುಕತೆ ಪ್ರಕ್ರಿಯೆ ಮುಂದುವರೆದು ನೌಕರರಿಗೇ ಹೆಚ್ಚಿನ ಅನುಕೂಲವಾಗುತ್ತದೆ. ಆದರೆ ಕೆಲವು ಪಟ್ಟಭದ್ರರ ಚಿತಾವಣೆಯಿಂದ ಇದು ಕೈಗೂಡುತ್ತಿಲ್ಲ.

ಇನ್ನಾದರೂ ಸರ್ಕಾರದ ಸಕಾರಾತ್ಮಕ ಮನಸ್ಸನ್ನು ಅರ್ಥಮಾಡಿಕೊಂಡು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ಮತ್ತೊಮ್ಮೆ ನಮ್ಮ ನೌಕರ ವರ್ಗದವರಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ. ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *