Wednesday, 12th December 2018

ಟಿಪ್ಪು ಜಯಂತಿಗಿದ್ದ ಕಡ್ಡಾಯ ಹಾಜರಿ ಕನಕ ಜಯಂತಿಗೆ ಯಾಕಿಲ್ಲ: ಇಬ್ಬಗೆಯ ಧೋರಣೆಗೆ ಜನರ ಕಿಡಿ

ಮಂಗಳೂರು: ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಅಧಿಕಾರಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸಿದ್ದ ರಾಜ್ಯ ಸರ್ಕಾರ, ಕನಕ ಜಯಂತಿಗೆ ಮಾತ್ರ ಕಡ್ಡಾಯ ಪದವನ್ನು ತೆಗೆದುಹಾಕಿದೆ. ಸರ್ಕರದ ಈ ಧೋರಣೆ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕನಕ ಜಯಂತಿ ಕಾರ್ಯಕ್ರಮವನ್ನು ನವೆಂಬರ್ 26ರಂದು ಆಯೋಜಿಸಲಾಗಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಕನಕದಾಸರನ್ನು ಸ್ಮರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೂ ಸುತ್ತೋಲೆ ಕಳಿಸಲಾಗಿದೆ. ಆದರೆ ಸುತ್ತೋಲೆಯಿಂದ ಕಡ್ಡಾಯ ಎನ್ನುವ ಪದವನ್ನು ಸರ್ಕಾರ ಕೈ ಬಿಟ್ಟಿದೆ.

ಸರ್ಕಾರಿ ಕಾರ್ಯಕ್ರಮ ಹಾಗೂ ಜಯಂತಿಗಳಲ್ಲಿ ಭಾಗವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿ ಸುತ್ತೋಲೆ ಕಳುಹಿಸುವುದು ಶಿಷ್ಟಾಚಾರ. ಆದರೆ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು, ಇತ್ತೀಚೆಗೆ ನಡೆದ ಟಿಪ್ಪು ಜಯಂತಿಯಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಆದೇಶ ಹೊರಡಿಸಿದ್ದರು. ಅದರಂತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸುತ್ತೋಲೆ ನೀಡಲಾಗಿತ್ತು.

ಒಂದೇ ತಿಂಗಳಿನಲ್ಲಿ ಟಿಪ್ಪು ಹಾಗೂ ಕನಕ ಜಯಂತಿ ಬಂದಿವೆ. ಆದರೆ ಟಿಪ್ಪು ಜಯಂತಿಗೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಸರ್ಕಾರ ಕನಕ ಜಯಂತಿಗೆ ನೀಡುತ್ತಿಲ್ಲ. ಅಧಿಕಾರಿಗಳಿಗೆ ಹೊರಡಿಸಿದ ಸುತ್ತೋಲೆಯಲ್ಲಿ ಕಡ್ಡಾಯ ತೆಗೆದುಹಾಕಿದ್ದು ಯಾವ ನ್ಯಾಯ ಎನ್ನುವ ಪ್ರಶ್ನೆ ಎದ್ದಿದೆ. ಟಿಪ್ಪು ಒಬ್ಬ ಮತಾಂಧ ಎನ್ನುವ ಆರೋಪ ಇದ್ದರೂ, ಆತನ ಜಯಂತಿಯನ್ನು ಜನರ ಮೇಲೆ ಹೇರಲಾಗಿತ್ತು. ಸೆಕ್ಷನ್ ವಿಧಿಸಿದ್ದರಿಂದ ಜನ ಬರುವುದಿಲ್ಲವೆಂದು ಕೊನೆಗೆ ಅಧಿಕಾರಿ ವರ್ಗವನ್ನೇ ಕಾರ್ಯಕ್ರಮಕ್ಕೆ ಹಾಜರಾಗುವುದನ್ನು ಕಡ್ಡಾಯಗೊಳಿಸಲಾಗಿತ್ತು. ಹೀಗಾಗಿ ಕನಕ ಮತ್ತು ಟಿಪ್ಪು ಜಯಂತಿ ಹೆಸರಲ್ಲಿ ರಾಜ್ಯ ಸರ್ಕಾರ ಇಬ್ಬಗೆ ನೀತಿ ತೋರಿದ್ದು ಎಷ್ಟು ಸರಿ ಎನ್ನುವ ಚರ್ಚೆ ಈಗ ಆರಂಭವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *