Monday, 15th July 2019

ರಾಜ್ಯಕ್ಕೆ ಮುಂಗಾರು ಮಳೆ ಖುಷಿ: ಜುಲೈನಲ್ಲೇ ಬಹುತೇಕ ಜಲಾಶಯಗಳು ಭರ್ತಿ

ಬೆಂಗಳೂರು: ಮುಂಗಾರು ಮಳೆ ಈ ಬಾರಿ ರಾಜ್ಯಕ್ಕೆ ಖುಷಿ ತಂದಿದೆ. ಮುಂಗಾರು ಬಹುತೇಕ ಎಲ್ಲಾ ಜಿಲ್ಲೆಗಳನ್ನು ಆವರಿಸಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮತ್ತೊಂದು ಸಂತಸ ಅಂದರೆ ಸಾಮಾನ್ಯವಾಗಿ ಆಗಸ್ಟ್ ವೇಳೆಗೆ ಜಲಾಶಯಗಳು ಭರ್ತಿ ಆಗುತ್ತಿದ್ದವು. ಆದರೆ ಈ ಬಾರಿ ತಿಂಗಳ ಮುಂಚೆಯೇ ಜುಲೈನಲ್ಲಿ ಬಹುತೇಕ ಡ್ಯಾಮ್‍ಗಳು ಭರ್ತಿಯಾಗುತ್ತಿವೆ.

ಪ್ರತಿ ವರ್ಷವೂ ನೀರಿಗಾಗಿ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡು ಈಗ ಬಾಯಿ ಬಂದ್ ಮಾಡಿಕೊಂಡಿದೆ. ಕಾರಣ ಅಷ್ಟರ ಮಟ್ಟಿಗೆ ಕೆಆರ್‌ಎಸ್ ನಿಂದ ನೀರು ಹರಿದು ಹೋಗುತ್ತಿದೆ. ಇನ್ನೂ ಎರಡು ದಿನ ಮಳೆಯಾಗಲಿದ್ದು ಇವತ್ತು ಸಹ ರಾಜ್ಯದ ಹಲವೆಡೆ ಬಿಟ್ಟೂ ಬಿಡದೆ ಮಳೆಯಾಗಿದೆ.

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಭರ್ಜರಿ ಮಳೆಯಾಗಿದೆ. ಕಳಸ, ಬಾಳೆಹೊನ್ನೂರು, ಶೃಂಗೇರಿ, ಕುದುರೆಮುಖ ಭಾಗದಲ್ಲಿ ವರುಣ ರುದ್ರನರ್ತನ ಮಾಡುತ್ತಿದ್ದಾನೆ. 3 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕಳೆದ 8-10 ವರ್ಷಗಳಿಂದ ತುಂಬದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಶೃಂಗೇರಿಯಲ್ಲಿ 15 ವರ್ಷಗಳಲ್ಲೇ ದಾಖಲೆ ಮಟ್ಟದ ಮಳೆಯಾಗಿದೆ. ತುಂಗಾ-ಭದ್ರ ನದಿಗಳು ಮೈದುಂಬಿ ಹರಿಯುತ್ತಿವೆ. ರೈತರು ಖುಷಿ ಜೊತೆಗೆ ಕಾಫಿ, ಮೆಣಸು, ಅಡಿಕೆಗೆ ಕೊಳೆ ರೋಗದ ಭೀತಿ ಶುರುವಾಗಿದ್ದರಿಂದ ಆತಂಕದಲ್ಲಿದ್ದಾರೆ. ಕಂಬಿಹಳ್ಳಿಯಲ್ಲಿ ಗೋಡೆ ಕುಸಿದು ವನಜಾ (48) ಎನ್ನುವವರು ಮೃತಪಟ್ಟಿದ್ದಾರೆ.

ಕೊಡಗು: ಜಿಲ್ಲೆಯಲ್ಲಿ ಮಳೆಯ ಆರ್ಭಟ ನಿಲ್ಲುತ್ತಿಲ್ಲ. ಕಾವೇರಿ ನದಿಗೆ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಮರಗಳು, ವಿದ್ಯುತ್ ಕಂಬಗಳು ಮತ್ತಷ್ಟು ನೆಲಕ್ಕೆ ಉರುಳುತ್ತಿವೆ. ಸೋಮವಾರಪೇಟೆ ತಾಲೂಕಿನ ಶುಂಠಿಕೊಪ್ಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುಡ್ಡ ಕುಸಿತ ಉಂಟಾಗಿ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಮಡಿಕೇರಿ-ಮಂಗಳೂರು ಹೆದ್ದಾರಿಯ ಕೊಯನಾಡು ಬಳಿ ಕೆಎಸ್‍ಆರ್ ಟಿಸಿ ಬಸ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಅದೃಷ್ಟವಶಾತ್ ವಿದ್ಯುತ್ ಇಲ್ಲದ ಕಾರಣ ಅನಾಹುತ ಸಂಭವಿಸಿಲ್ಲ.

ಮಂಗಳೂರು: ದಕ್ಷಿಣ ಕನ್ನಡದಲ್ಲಿ ವರ್ಷಧಾರೆ ಆಗುತ್ತಿದೆ. ಉಪ್ಪಿನಂಗಡಿ-ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಹೊಸ್ಮಠ ಸೇತುವೆ ಮತ್ತೆ ಮತ್ತೆ ಮುಳುಗಡೆ ಆಗುತ್ತಿದೆ. ಹಾಗಾಗಿ, ರಸ್ತೆ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಮುಂದುವರಿದಿದೆ. ಮೂರು ದಿನಗಳಿಂದ ವ್ಯಾಪಕ ಮಳೆಯಾಗಿದ್ದು ಕೆರೆಕಟ್ಟೆಗಳು ನೀರು ತುಂಬಿ ತುಳುಕುತ್ತಿವೆ. ಶಿರಸಿ, ಸಿದ್ದಾಪುರ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕರಾವಳಿ ಭಾಗದ ಕಾರವಾರದಲ್ಲಿ ಮಳೆಯ ಆರ್ಭಟ ಅಲ್ಪಪ್ರಮಾಣದಲ್ಲಿ ಇಳಿಮುಖವಾಗಿದೆ.

ಬಾಗಲಕೋಟೆ: ಮಹಾರಾಷ್ಟ್ರ ಹಾಗೂ ಕೊಯ್ನಾ ದಡದಲ್ಲಿ ನಿರಂತರ ಮಳೆಯಿಂದಾಗಿ, ಕೃಷ್ಣಾ ನದಿ ಮೈದುಂಬಿದೆ. ನೀರಿನ ಹರಿವು ಹೆಚ್ಚಾಳದಿಂದ ನದಿ ತೀರದ ಜಮಖಂಡಿಯ ಮತ್ತೂರು, ಮೈಗೂರು, ಕಂಕನವಾಡಿ, ಶೂರ್ಪಾಲಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳು ಸಿಲುಕುವ ಸಾಧ್ಯತೆ ಇದೆ. ಜಮಖಂಡಿಯ ಹಿಪ್ಪರಿಗೆ ಬ್ಯಾರೇಜ್‍ನ ಒಳ ಹಾಗೂ ಹೊರ ಹರಿವು ಹೆಚ್ಚಾಗಿದೆ. ಕೃಷಿ, ಕೂಲಿ, ಸಂತೆ ಜಾನುವಾರುಗಳಿಗೆ ಮೇವು ಸಾಗಾಟಕ್ಕೆ ಜನ ಬೋಟ್ ಅವಲಂಬಿಸುತ್ತಿದ್ದಾರೆ.

ಧಾರವಾಡ: ಧಾರವಾಡದಲ್ಲಿ ಬೆಳಗ್ಗೆಯೇ ಮಳೆರಾಯ ಅಬ್ಬರಿಸಿದ್ದರಿಂದ ನಗರದ ಜನ ಜೀವನ ಅಸ್ತವ್ಯಸ್ತವಾಗಿ ಪರದಾಡಬೇಕಾಯಿತು.

ಯಾದಗಿರಿ: ಜಿಲ್ಲೆಯ ಶಹಾಪೂರ, ಸುರಪುರಗಳಲ್ಲಿ ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ, ದಟ್ಟವಾದ ಮೋಡಗಳು ಆವರಿಸಿದ್ದವು.

ಕೋಲಾರ: ಕರಾವಳಿ, ಮಲೆನಾಡು ಮಾತ್ರವಲ್ಲ ಬರದ ನಾಡು ಕೋಲಾರದಲ್ಲೂ ವರ್ಷಧಾರೆ ಇದೆ. 3 ದಿನಗಳಿಂದ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಮಳೆಯಾಯಿತು. ರೈತರು ಈಗಲೇ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

 

ಬೆಂಗಳೂರು: ಬೆಂಗಳೂರು ನಗರ, ಹೊಸಕೋಟೆ, ನೆಲಮಂಗಲ, ಆನೇಕಲ್ ಗಳಲ್ಲೂ ಮಳೆಯಾಯಿತು. ಮಧ್ಯಾಹ್ನವೇ ಮಳೆಯ ಅರ್ಭಟ ಶುರುವಾಗಿ ಅರ್ಧ ಗಂಟೆ ಬಿರುಗಾಳಿ ಸಹಿತ ಮಳೆಯಾಯಿತು. ನೆಲಮಂಗಲದ ನಿಡುವಂದ ಬಳಿ ಭಾರೀ ಮಳೆಯಿಂದಾಗಿ ರಸ್ತೆ ಕಾಣದೆ ಬೈಕ್‍ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಹೊಸಕೋಟೆ ತಾಲೂಕಿನ ಬಂಡಹಳ್ಳಿ ಹೊರವಲಯದಲ್ಲಿ ತಮಿಳುನಾಡಿನಿಂದ ಆಂಧ್ರ ಪ್ರದೇಶಕ್ಕೆ ರವಾನೆ ಆಗುತ್ತಿದ್ದ ಹೆಟೆನ್ಷನ್ ವಿದ್ಯುತ್ ಟವರ್ ಕಳಪೆ ಕಾಮಗಾರಿಯಿಂದಾಗಿ ಬಿರುಗಾಳಿಗೆ ಮುರಿದು ಬಿದ್ದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ವಿದ್ಯುತ್ ತಂತಿ ಅಳವಡಿಸದ ಕಾರಣ ಅನಾಹುತ ತಪ್ಪಿದೆ.

Leave a Reply

Your email address will not be published. Required fields are marked *