Tuesday, 18th June 2019

ಎಲ್ಲರನ್ನೂ ಸಂತೃಪ್ತಗೊಳಿಸೋ ಫ್ರೆಶ್ ಆರೆಂಜ್!

ಬೆಂಗಳೂರು: ನಿರ್ದೇಶಕ ಪ್ರಶಾಂತ್ ರಾಜ್ ಚಿತ್ರದಿಂದ ಚಿತ್ರಕ್ಕೆ ಭಿನ್ನ ಆಲೋಚನೆಗಳಿಂದಲೇ ಪ್ರೇಕ್ಷಕರಿಗೆ ಹತ್ತಿರಾಗಿರುವವರು. ಆ ಕಾರಣದಿಂದಲೇ ಅವರು ನಿರ್ದೇಶಿಸಿ ಗಣೇಶ್ ನಟಿಸಿದ್ದ ಝೂಮ್ ಪ್ರೇಕ್ಷಕರನ್ನು ಮುದಗೊಳಿಸಿತ್ತು. ಅದೇ ಜೋಡಿ ಇದೀಗ ಆರೆಂಜ್ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಮುದಗೊಳಿಸಿದೆ.

ಪ್ರಶಾಂತ್ ರಾಜ್ ಫ್ಯಾಮಿಲಿ ಸಮೇತ ಕೂತು ನೋಡುವಂಥಾ ಫ್ರೆಶ್ ಆರೆಂಜನ್ನು ಸಿದ್ಧಗೊಳಿಸಿ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಗಣೇಶ್ ಅವರದ್ದಿಲ್ಲಿ ಸಂತೋಷ್ ಎಂಬ ಕಳ್ಳತನವನ್ನೇ ಬಂಡವಾಳ ಮಾಡಿಕೊಂಡ ಹುಡುಗನ ಪಾತ್ರ.

ಕಳ್ಳತನವೊಂದರಲ್ಲಿ ಜೈಲುಪಾಲಾಗಿದ್ದ ನಾಯಕ ಬಿಡುಗಡೆಯಾಗಿ ಟ್ರೈನಿನಲ್ಲಿ ಹೋಗುತ್ತಿರುವಾಗಲೇ ಆರೆಂಜು ಬಣ್ಣದ ಸೀರೆಯುಟ್ಟ ನಾಯಕಿ ಎದುರಾಗ್ತಾಳೆ. ಆಕೆ ಆರೆಂಜ್ ಕೊಡೋ ಮೂಲಕ ಸಂತೋಷ್ ಗೆ ಪರಿಚಿತಳಾಗುತ್ತಾಳೆ. ಇದೆಲ್ಲ ಆಗೋ ಹೊತ್ತಿಗೆ ಟ್ವಿಸ್ಟು ಸಂಭವಿಸಿ ಟ್ರೈನ್ ಮಿಸ್ ಆಗಿ ನಾಯಕಿಯ ವಸ್ತುವೊಂದು ನಾಯಕನ ಬಳಿಯೇ ಉಳಿದು ಬಿಡುತ್ತೆ. ಅದನ್ನು ತಲುಪಿಸಲೆಂದು ನಾಯಕಿಯ ಮನೆಗೆ ಹೋದಾಗ ಅಲ್ಲೊಂದು ಸುಂದರ ಸಂಸಾರ ತೆರೆದುಕೊಳ್ಳುತ್ತೆ. ನಾಯಕನೂ ಕೂಡಾ ಆ ಸುಂದರ ಕುಟುಂಬದಲ್ಲಿ ಒಬ್ಬನಾಗಿ ಸೇರಿಕೊಳ್ಳುತ್ತಾನೆ.

ಆದರೆ ನಾಯಕಿಯ ಕುಟುಂಬಕ್ಕೆ ಈತನ ಕಳ್ಳತನದ ಹಿಸ್ಟರಿ ಗೊತ್ತಾಗದಿರುತ್ತಾ? ಮುಂದೇನಾಗುತ್ತೆ ಎಂಬುದರ ಸುತ್ತಾ ಮಜವಾಗಿ ಕಥೆಯನ್ನು ಕೊಂಡೊಯ್ಯಲಾಗಿದೆ. ದೊಡ್ಡ ಕ್ಯಾನ್ವಾಸಿನ ತುಂಬಾ ಸಾಕಷ್ಟು ಪಾತ್ರಗಳು ಹರಡಿಕೊಂಡಿದ್ದರೂ ಕೂಡಾ ಅದೆಲ್ಲವನ್ನು ಮ್ಯಾನೇಜು ಮಾಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಗಣೇಶ್ ಅವರೂ ಚೆಂದಗೆ ನಟಿಸಿದ್ದಾರೆ. ಪ್ರಿಯಾ ಆನಂದ್ ನಟನೆಯೂ ಮನ ಸೆಳೆಯುವಂತಿದೆ. ಸಂತೋಷ್ ಪಾತಾಜೆ ಛಾಯಾಗ್ರಹಣ ಆರೆಂಜಿಗೆ ಹೊಸಾ ಸ್ವಾದವನ್ನೇ ತುಂಬಿದೆ. ಸಂಗೀತವೂ ಒಟ್ಟಾರೆ ಕಥೆಗೆ ಸಾಥ್ ಕೊಟ್ಟಿದೆ. ಒಟ್ಟಾರೆಯಾಗಿ ಈ ಆರೆಂಜ್ ಫ್ರೆಶ್ ಆದ ಸ್ವಾದದಿಂದಲೇ ಎಲ್ಲರನ್ನೂ ತೃಪ್ತವಾಗಿಸುತ್ತೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *