Wednesday, 19th September 2018

ಗೋಕರ್ಣ ದೇವಸ್ಥಾನ ವಿವಾದ: ಪೂಜಾ ಕಾರ್ಯಕ್ಕಾಗಿ 2 ಗುಂಪಿನ ಅರ್ಚಕರ ನಡುವೆ ವಾಗ್ವಾದ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರದಲ್ಲಿ ಇದೀಗ ದೇವಸ್ಥಾನದ ಪೂಜಾ ಕಾರ್ಯಕ್ಕೆ ವಿವಾದ ಸೃಷ್ಟಿಯಾಗಿದೆ. ದೇವಸ್ಥಾನದಲ್ಲಿ ಅನುವಂಶೀಯವಾಗಿ ಪೂಜಾ ಕಾರ್ಯ ಮಾಡಿಕೊಂಡು ಬಂದಿರುವ 33 ಅರ್ಚಕರಿಗೆ ಪೂಜೆಗೆ ಅವಕಾಶ ಕೊಡಬೇಕೆಂದು ನ್ಯಾಯಾಲಯ ಆದೇಶವನ್ನ ನೀಡಿತ್ತು. ಆದ್ರೆ ದೇವಸ್ಥಾನದ ಆಡಳಿತ ಮಂಡಳಿ ಪೂಜಾ ಕಾರ್ಯಕ್ಕೆ ಅವಕಾಶ ಕೊಡದೇ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಕೆಲ ಅರ್ಚಕರು ವಿರೋಧ ಮಾಡುತ್ತಿದ್ದಾರೆ. ಇನ್ನೊಂದೆಡೆ ದೇವಸ್ಥಾನದ ಆಡಳಿತ ಮಂಡಳಿಯವರು ಪೂಜಾ ಕಾರ್ಯ ಮಾಡಲು ನೋಂದಣಿ ಮಾಡಿಕೊಳ್ಳಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಗೋಕರ್ಣ ಕ್ಷೇತ್ರ ದೇಶದಲ್ಲಿಯೇ ಅತ್ಯಂತ ಪುರಾಣ ಪ್ರಸಿದ್ಧವಾದ ಕ್ಷೇತ್ರಗಳಲ್ಲಿ ಒಂದು. ರಾವಣನ ಇರಿಸಿದ ಆತ್ಮಲಿಂಗ ಇರುವ ಕ್ಷೇತ್ರ ಎನ್ನುವ ಪ್ರಸಿದ್ಧಿ ಹೊಂದಿರುವ ಕ್ಷೇತ್ರವನ್ನ ದಕ್ಷಿಣ ಕಾಶಿ ಎಂದೇ ಕರೆಯುತ್ತಾರೆ. ಆದ್ರೆ ಇದೇ ದೇವಸ್ಥಾನದ ಆಡಳಿತ ಎನ್ನುವ ವಿಚಾರ, ಕಳೆದ ಏಳೆಂಟು ವರ್ಷದಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೀಗ ದೇವಸ್ಥಾನದ ಪೂಜಾ ಕಾರ್ಯ ಎನ್ನುವ ಸಮಸ್ಯೆಯನ್ನ ಸೃಷ್ಟಿ ಮಾಡಿದೆ.

ಏನಿದು ವಿವಾದ?:
ಗೋಕರ್ಣ ದೇವಸ್ಥಾನದಲ್ಲಿ ಅನುವಂಶೀಯವಾಗಿ ಹಿಂದಿನಿಂದಲೂ ಪೂಜಾ ಕಾರ್ಯವನ್ನ ಮಾಡಿಕೊಂಡು ಹಲವು ಕುಟುಂಬಗಳು ಬಂದಿದ್ದವು. ಆದರೆ 2008ರಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹೊಸನಗರದ ರಾಮಚಂದ್ರಪುರ ಮಠಕ್ಕೆ ವಹಿಸಿದ್ದು, ಆ ಬಳಿಕ ಉಪಾಧಿವಂತ ಕುಟುಂಬದವರು ಕಡ್ಡಾಯವಾಗಿ ನೋಂದಣಿ ಮಾಡಿಕೊಂಡೇ ಪೂಜಾ ಕಾರ್ಯವನ್ನ ಮಾಡಬೇಕೆಂದು ಆದೇಶ ಹೊರಡಿಸಿದ್ದರು. ಇನ್ನು ತಮಗೆ ಪೂಜಾ ಕಾರ್ಯಕ್ಕೆ ಅವಕಾಶ ಕೊಡುತ್ತಿಲ್ಲ ಎನ್ನುವ ಕಾರಣವನ್ನ ನೀಡಿ ಸುಮಾರು 33 ಉಪಾಧಿವಂತ ಕುಟುಂಬದವರು ನ್ಯಾಯಲಯದ ಮೊರೆ ಹೋಗಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ ಕಾರವಾರ ಜಿಲ್ಲಾ ನ್ಯಾಯಾಲಯ ಮೇ 30 ರಂದು 33 ಉಪಾಧಿವಂತ ಕುಟುಂಬಕ್ಕೆ ಅವಕಾಶ ಕೊಡುವಂತೆ ಆದೇಶ ಹೊರಡಿಸಿತ್ತು. ಮಂಗಳವಾರ ಪೂಜಾ ಕಾರ್ಯ ಮಾಡಲು ಉಪಾಧಿವಂತ ಕುಟುಂಬದ ಮಧುಕರ ಸೂರಿ ಎನ್ನುವ ಅರ್ಚಕರು ಆಗಮಿಸಿದ್ದರು. ಆದ್ರೆ ಭಕ್ತರನ್ನ ದೇವಸ್ಥಾನದ ಒಳಗೆ ಕರೆದುಕೊಂಡು ಹೋಗಿ ಪೂಜೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಆಡಳಿತ ಮಂಡಳಿಯವರು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಉಪಾಧಿವಂತ ಅರ್ಚಕರು ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದರು. ನಮಗೆ ಪೂಜೆಗೆ ಅವಕಾಶ ನೀಡದೇ ದಬ್ಬಾಳಿಕೆ ಮಾಡುತ್ತಿದ್ದು, ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದಾರೆಂದು ಮಧುಕರ ಸೂರಿ ಆರೋಪಿಸುತ್ತಿದ್ದಾರೆ.

ಮೇ 30ರಂದು ನ್ಯಾಯಾಲಯ ಆದೇಶ ನೀಡಿದ್ದು ಅಂದಿನಿಂದ 33 ಉಪಾಧಿವಂತ ಕುಟುಂಬದವರು ಪೂಜೆ ಮಾಡಲು ಬಂದರೆ ಅವಕಾಶ ನೀಡುತ್ತಿಲ್ಲ ಅನ್ನುವುದು ಕೆಲ ಅರ್ಚಕರ ಆರೋಪವಾಗಿದೆ. ಇದಲ್ಲದೇ ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರು ಮೂರ್ನಾಲ್ಕು ದಿನಗಳಿಂದ ದೇವಸ್ಥಾನದಲ್ಲಿಯೇ ಇಲ್ಲ. ಪೂಜೆ ಮಾಡಲು ಬಂದರೆ ಆಡಳಿತ ಮಂಡಳಿಯ ಮುಖ್ಯಸ್ಥರು ಇಲ್ಲ, ನಾವು ಅವಕಾಶ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆನ್ನುವುದು ಉಪಾಧಿವಂತ ಅರ್ಚಕರ ಆರೋಪ.

ನೋಂದಣಿ ಕಡ್ಡಾಯ:
ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯವರ ಬಳಿ ಕೇಳಿದರೆ ದೇವಸ್ಥಾನದಲ್ಲಿನ ಪೂಜಾ ಕಾರ್ಯ ನಿಯಮಬದ್ಧವಾಗಿ ನಡೆಯಲು ಎಲ್ಲರು ನೊಂದಣಿ ಮಾಡಿಸಿಕೊಳ್ಳಲೇಬೇಕು ಅನ್ನುವ ನಿಯಮ ಮಾಡಲಾಗಿದೆ. ಅದರಂತೆ ಸುಮಾರು 500 ಕುಟುಂಬವದರು ನೋಂದಣಿ ಮಾಡಿಕೊಂಡು ಪೂಜಾ ಕಾರ್ಯ ಮಾಡಿಸುತ್ತಿದ್ದಾರೆ. ಇನ್ನು 33 ಕುಟುಂಬದವರು ನೋಂದಣಿ ಮಾಡಿಕೊಂಡು ಪೂಜೆ ಮಾಡಲು ಪ್ರಾರಂಭಿಸಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ನೋಂದಣಿ ಮಾಡಿಸಿಕೊಳ್ಳದೇ ಪೂಜಾ ಕಾರ್ಯ ಮಾಡಲು ಬಿಡುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಜಂಬೆ ಹೇಳುತ್ತಾರೆ.

ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕೆಲ ಅರ್ಚಕರ ನಡುವೆ ಹಿಂದಿನಿಂದ ಗುದ್ದಾಟ ನಡೆಯುತ್ತಾ ಬಂದಿದ್ದು, ದೇವಸ್ಥಾನದ ಆಡಳಿತವನ್ನ ರಾಮಚಂದ್ರಾಪುರ ಮಠಕ್ಕೆ ಸರ್ಕಾರ ನೀಡಿದ್ದ ಕ್ರಮದ ವಿರುದ್ಧ ಅನುವಂಶೀಯ ಅರ್ಚಕರು ವಿರೋಧಿಸಿದ್ದರು. ನ್ಯಾಯಾಲಯದ ತೀರ್ಪಿನ ನಂತರ ಅನುವಂಶೀಯ ಅರ್ಚಕರು ಪೂಜೆಗೆ ಬಂದ ವೇಳೆಯಲ್ಲಿ ದೇವಸ್ಥಾನದ ಆವರಣದಲ್ಲಿ ಯಾವುದೇ ಗಲಭೆ ಆಗದಂತೆ ಪೊಲೀಸರು ಮುಂಜಾಗೃತಾ ಕ್ರಮವನ್ನ ವಹಿಸಿದ್ದರು.

ಒಟ್ಟಿನಲ್ಲಿ ಪುರಾಣ ಪ್ರಸಿದ್ಧ ದೇವಸ್ಥಾನವಾದ ಗೋಕರ್ಣದಲ್ಲಿ ಇದೀಗ ಪೂಜಾ ಕಾರ್ಯ ಸಂಬಂಧ 2 ಗುಂಪಿನ ಅರ್ಚಕರ ನಡುವೆ ಗುದ್ದಾಟ ನಡೆಯುತ್ತಿದ್ದು, ಅನುವಂಶೀಯ ಅರ್ಚಕರಿಗೆ ಪೂಜೆ ಅವಕಾಶ ಸಿಗುತ್ತದೆಯೋ ಇಲ್ಲವೇ ಅಥವಾ ಈ ವಿವಾದ ಮತ್ತಷ್ಟು ದೊಡ್ಡದಾಗುತ್ತದೆಯೋ ಅನ್ನುವುದನ್ನ ಕಾದು ನೋಡಬೇಕಾಗಿದೆ.

– ನವೀನ್ ಸಾಗರ್, ಕಾರವಾರ

Leave a Reply

Your email address will not be published. Required fields are marked *