Connect with us

Belgaum

ತಾರಕಕ್ಕೇರಿತು ಗೋಕಾಕ್ ಬೈ ಎಲೆಕ್ಷನ್ ಫೈಟ್ – ರಮೇಶ್ ಸೋಲಿಸೋಕೆ ಲಕ್ಷ್ಮಿ ಪಣ

Published

on

– ಅಥಣಿಯಿಂದ ಗೋಕಾಕ್‍ಗೆ ಹೆಬ್ಬಾಳ್ಕರ್ ಶಿಫ್ಟ್

ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಭಾರೀ ಧೂಳೆಬ್ಬಿಸಿ ಸಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮತ್ತೆ ಬಿಗ್ ವಾರ್ ಆರಂಭವಾಗಿದೆ.

ಬಿಜೆಪಿ ಸೇರಿದ ಬಳಿಕ ಬಹಿರಂಗ ಭಾಷಣ ಮಾಡಿದ್ದ ರಮೇಶ್ ಮಾತುಗಳು ಲಕ್ಷ್ಮಿಯನ್ನು ಕೆರಳಿಸಿವೆ. ಹೀಗಾಗಿ ನೇರವಾಗಿ ಗೋಕಾಕ್ ಕ್ಷೇತ್ರಕ್ಕೆ ತೆರಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ. ಅಥಣಿ ಕ್ಷೇತ್ರದಿಂದ ಗೋಕಾಕ್ ಕ್ಷೇತ್ರಕ್ಕೆ ತಮ್ಮ ಉಸ್ತುವಾರಿಯನ್ನು ಬದಲಿಸಿಕೊಂಡ ಲಕ್ಷ್ಮಿ, ಉಪಚುನಾವಣೆಯನ್ನು ಗಂಭೀರವಾಗಿ ಸ್ವಿಕರಿಸಿದ್ದಾರೆ.

ಕುಂದಾನಗರಿಯ ಬೆಳಗಾವಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ (ಪಿಎಲ್‍ಡಿ) ಬ್ಯಾಂಕ್ ವಿಚಾರವಾಗಿ ಬಡಿದಾಡಿಕೊಂಡ ಗೋಕಾಕ್‍ನ ರಮೇಶ್ ಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮೀಣದ ಲಕ್ಷ್ಮಿ ಹೆಬ್ಬಾಳ್ಕರ್ ಇದೀಗ ಹಾವು-ಮುಂಗುಸಿಯಂತಾಗಿದ್ದಾರೆ. ಇದರ ಜೊತೆಗೆ ಇದೀಗ ಸಹೋದರರ ಸವಾಲ್ ಕೂಡ ಸೇರಿಕೊಂಡಿದೆ.

ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಬೆಳೆಯುತ್ತಾ ದಾಯಾದಿಗಳು ಅನ್ನೋದಕ್ಕೆ ತಾಜಾ ನಿದರ್ಶನ ಗೋಕಾಕ್ ಆಗಿದೆ. ಕಾಂಗ್ರೆಸ್ಸಿನಿಂದ ಬಿಜೆಪಿಗೆ ಜಂಪ್ ಆಗಿರೋ ರಮೇಶ್ ಜಾರಕಿಹೊಳಿ ವಿರುದ್ಧ ಇದೀಗ ಸಹೋದರ ಲಖನ್ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಈ ಮೂಲಕ, ರಮೇಶ್‍ಗೆ ಈ ಬಾರಿ ಶತಾಯಗತಾಯ ಸೋಲುಣಿಸಲೇಬೇಕು ಅನ್ನೋ ಕಾಂಗ್ರೆಸ್ಸಿನ ದ್ವೇಷ ಮತ್ತಷ್ಟು ತೀವ್ರವಾಗಿದೆ.

ಸತೀಶ್ ಜಾರಕಿಹೊಳಿಯ ಸಹೋದರನೂ ಆಗಿರೋ ಲಖನ್‍ಗೆ ಶಕ್ತಿ ತುಂಬೋಕೆ, ರಮೇಶ್ ಮಟ್ಟ ಹಾಕೋಕೆ ಕಾಂಗ್ರೆಸ್ ಲಕ್ಷ್ಮಿ ಹೆಬ್ಬಾಳ್ಕರ್ ಮೂಲಕ ಮತ್ತೊಂದು ಅಸ್ತ್ರ ಪ್ರಯೋಗಿಸಿದೆ. ಅಥಣಿಯ ಚುನಾವಣಾ ಸಹ ಉಸ್ತುವಾರಿಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಲಖನ್‍ಗೆ ಟಿಕೆಟ್ ಘೋಷಿಸಿರುವ ಕೊನೇ ಗಳಿಗೆಯಲ್ಲಿ ಗೋಕಾಕ್‍ಗೆ ಶಿಫ್ಟ್ ಮಾಡಲಾಗಿದೆ. ಇದರಿಂದಾಗಿ, ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ ಎನ್ನುವ ರಮೇಶ್ ಮತ್ತು ಲಕ್ಷ್ಮೀ ವಿರೋಧಿಗಳಾಗಿ ಗೋಕಾಕ್ ಮತದಾರರ ಬಳಿ ಹೋಗಲಿದ್ದಾರೆ.

ಒಂದು ಕಾಲದಲ್ಲಿ ಒಡನಾಡಿಗಳಂತಿದ್ದ ರಮೇಶ್-ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ದ್ವೇಷದ ಕಿಚ್ಚೊತ್ತಿಸಿದ್ದು ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಎಲೆಕ್ಷನ್ ಈ ವೇಳೆ, ಪರಸ್ಪರ ಕೆಸರೆರಚಿಕೊಂಡ ಉಭಯ ನಾಯಕರು ವೈಯಕ್ತಿಕ ನಿಂದನೆ ಮಾಡ್ಕೊಂಡಿದ್ದರು.

ಒಟ್ಟಿನಲ್ಲಿ ಈ ಬಾರಿಯ ಗೋಕಾಕ್ ಎಲೆಕ್ಷನ್ ಬಿಜೆಪಿ-ಕಾಂಗ್ರೆಸ್ ಅನ್ನೋ ಪಕ್ಷಗಳ ಹೋರಾಟಕ್ಕಿಂತ ರಮೇಶ್ ವರ್ಸಸ್ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಹೋದರ ಲಖನ್, ಸತೀಶ್ ಜಾರಕಿಹೊಳಿ ಎಂಬಂತಾಗಿದೆ. ಒಟ್ಟಿನಲ್ಲಿ ಗೋಕಾಕ್ ರಣಕಣ ಭಾರೀ ಕುತೂಹಲ ಕೆರಳಿಸಿದೆ.