Connect with us

Cinema

ಅನ್ಯ ರಾಜ್ಯಗಳಲ್ಲಿಯೂ ಶುರುವಾಯ್ತು `ಗೋದ್ರಾ’ ಅಬ್ಬರ!

Published

on

ಬೆಂಗಳೂರು: ವರ್ಷಗಳ ಹಿಂದೆ ಗೋದ್ರಾ ಎಂಬ ಟೈಟಲ್ಲಿನ ಚಿತ್ರವೊಂದು ಘೋಷಣೆಯಾದಾಗ ಎಲ್ಲೆಡೆ ಅದರ ಬಗ್ಗೆ ಚರ್ಚೆಗಳಾಗಿದ್ದವು. ಗೋದ್ರಾ ಘಟನೆಯ ನೆನಪು ಜನಮಾನಸದಲ್ಲಿ ಮಾಸದಿರೋದರಿಂದ ಆ ಘಟನೆಗೂ ಈ ಚಿತ್ರಕ್ಕೂ ಸಂಬಂಧವಿದೆಯಾ ಎಂಬ ದಿಕ್ಕಿನಲ್ಲಿಯೂ ಜನರ ಆಲೋಚನೆ ಸುಳಿದಾಡಿತ್ತು. ಗೋದ್ರಾದ ಸುತ್ತಾ ಇಂಥಾ ವಾತಾವರಣ ಮಡುಗಟ್ಟುವುದಕ್ಕೆ ಈ ಸಿನಿಮಾ ಹಿಂದೆ ರಿಯಲಿಸ್ಟಿಕ್ ಕಥೆಗಳ ನಿರ್ದೇಶಕ ಜೇಕಬ್ ವರ್ಗಿಸ್ ಅವರ ನೆರಳಿದ್ದದ್ದೂ ಒಂದು ಕಾರಣವಾಗಿದ್ದದ್ದು ಸುಳ್ಳಲ್ಲ!

ಗೋದ್ರಾ ಚಿತ್ರದ ನಿರ್ದೇಶಕ ನಂದೀಶ್ ಜೇಕಬ್ ವರ್ಗೀಸ್ ಅವರ ಬಳಿಗೆ ಹಲವಾರು ವರ್ಷಗಳಿಂದ ಪಳಗಿಕೊಂಡಿರುವವರು. ಈ ಚಿತ್ರವನ್ನು ಜೇಕಬ್ ವರ್ಗೀಸ್ ಅವರು ತಮ್ಮ ಬ್ಯಾನರಿನಡಿಯಲ್ಲಿಯೇ ನಿರ್ಮಾಣ ಮಾಡಿದ್ದಾರೆ. ನಂದೀಶ್ ವರ್ಷಗಳಿಂದ ತಯಾರಿ ನಡೆಸುತ್ತಾ ಅಪರೂಪದ ಕಥೆಯೊಂದನ್ನು ಸಿದ್ಧಪಡಿಸಿ ಅದಕ್ಕೆ ಗೋದ್ರಾದ ರೂಪ ನೀಡಿದ್ದಾರೆ.

ಇದೀಗ ಈ ಚಿತ್ರ ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿ ನಿಂತಿದೆ. ಈ ಹೊತ್ತಿನಲ್ಲಿಯೇ ಕನ್ನಡ ಮಾತ್ರವಲ್ಲದೇ ಅನ್ಯ ರಾಜ್ಯಗಳಲ್ಲಿಯೂ ಗೋದ್ರಾ ಭಾರೀ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ತೆಲುಗಿನಲ್ಲಿಯೂ ರೂಪುಗೊಳ್ಳುತ್ತಿರುವ ಈ ಚಿತ್ರಕ್ಕೆ ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿಯೂ ಬೇಡಿಕೆ ಬರುತ್ತಿದೆ. ಇದಕ್ಕೆ ಕಾರಣವಾಗಿರೋದು ಗೋದ್ರಾ ರೂಪುಗೊಂಡಿರುವ ರೀತಿ. ಕನ್ನಡ ಚಿತ್ರಗಳು ಒಂದೆರಡು ಸೀನುಗಳೋ, ಹಾಡುಗಳಿಗಾಗಿಯೋ ಬೇರೆ ರಾಜ್ಯಗಳಲ್ಲಿ ಚಿತ್ರೀಕರಣಗೊಂಡರೆ ಹೆಚ್ಚು. ಆದರೆ ಈ ಚಿತ್ರದ ಬಹುಭಾಗಗಳ ಚಿತ್ರೀಕರಣ ಪರ ರಾಜ್ಯಗಳಲ್ಲಿಯೇ ನಡೆದಿದೆ. ಗೋದ್ರಾ ಚಿತ್ರೀಕರಣ ಮುಗಿಸಿಕೊಳ್ಳೋದಕ್ಕೆ ವರ್ಷಗಳ ಅವಧಿ ಹಿಡಿದದ್ದೂ ಕೂಡಾ ಈ ಕಾರಣದಿಂದಲೇ. ಆರಂಭದಿಂದ ಈ ಕ್ಷಣದ ವರೆಗೂ ಒಂದಲ್ಲ ಒಂದು ರೀತಿಯಲ್ಲಿ ಕುತೂಹಲ ಕಾಯ್ದಿಟ್ಟುಕೊಂಡಿರೋ ಗೋದ್ರಾ ಬಿಡುಗಡೆಯ ಹೊಸ್ತಿಲಲ್ಲಿಯಂತೂ ಭಾರೀ ಕ್ರೇಜ್‌ಗೆ  ಕಾರಣವಾಗಿದೆ.

ನಿರ್ದೇಶಕ ನಂದೀಶ್ ಪಾಲಿಗೆ ಇದು ಮೊದಲ ಪ್ರಯತ್ನ. ಈ ಆರಂಭದ ಹೆಜ್ಜೆಯಲ್ಲಿಯೇ ಅವರು ಮಹಾ ಗೆಲುವೊಂದನ್ನು ದಕ್ಕಿಸಿಕೊಳ್ಳೋ ಸೂಚನೆಗಳನ್ನೇ ಗೋದ್ರಾ ಧ್ವನಿಸುತ್ತಿದೆ. ಸತ್ಯ ಕಥೆಗಳನ್ನು ಆಧರಿಸಿದ ಚಿತ್ರಗಳ ಮೂಲಕವೇ ಪ್ರಸಿದ್ಧಿ ಪಡೆದಿರುವ ಜೇಕಬ್ ವರ್ಗೀಸ್ ಅವರ ಗರಡಿಯ ಅನುಭವಗಳನ್ನೆಲ್ಲ ಬಸಿದುಕೊಂಡು ನಂದೀಶ್ ಈ ಚಿತ್ರವನ್ನ ರೂಪಿಸಿದ್ದಾರೆ. ಇದೆಲ್ಲದರಾಚೆಗೆ ಗೋದ್ರಾ ಸತ್ಯ ಘಟನೆ ಆಧರಿಸಿದ ಚಿತ್ರವಾ ಅನ್ನೋದರ ಬಗ್ಗೆ ಚಿತ್ರತಂಡದ ಕಡೆಯಿಂದ ಬೇರೆಯದ್ದೇ ಉತ್ತರ ರವಾನೆಯಾಗುತ್ತದೆ. ಗೋದ್ರಾ ಘಟನೆಗೂ ಈ ಕಥೆಗೂ ಸಂಬಂಧವಿಲ್ಲದಿದ್ದರೂ ಅಂಥಾದ್ದೇ ತೀವ್ರತೆ ಇಡೀ ಚಿತ್ರದಲ್ಲಿರಲಿದೆ ಎಂಬುದನ್ನೂ ನಿರ್ದೇಶಕರು ಸ್ಪಷ್ಟಪಡಿಸುತ್ತಾರೆ.

ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ನಟಿಸಿದ್ದಾರೆ. ಅವರು ಈಗಾಗಲೇ ಕನ್ನಡದಲ್ಲಿ ವಿಶಿಷ್ಟ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅದಕ್ಕೆ ಮತ್ತಷ್ಟು ಮೆರುಗು ನೀಡುವಂಥಾ ಪಾತ್ರವೇ ಗೋದ್ರಾದಲ್ಲಿ ಶ್ರದ್ಧಾಗೆ ಸಿಕ್ಕಿದೆ. ವಸಿಷ್ಠ ಸಿಂಹ ಕೂಡಾ ಗೋದ್ರಾದಲ್ಲಿ ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವಂತೂ ಅಪರೂಪದ್ದಂತೆ. ವಸಿಷ್ಠರ ಪಾತ್ರಕ್ಕೆ ಯಾವ ಶೇಡುಗಳಿವೆ ಅನ್ನೋದನ್ನು ಚಿತ್ರತಂಡ ಸೀಕ್ರೆಟ್ ಆಗಿಟ್ಟಿದೆ.

ನೀನಾಸಂ ಸತೀಶ್ ಪಾಲಿಗೂ ಇದು ಸ್ಪೆಷಲ್ ಮೂವಿ. ಈ ಹಿಂದೆ ಚಂಬಲ್ ಚಿತ್ರದ ಮೂಲಕ ಸತೀಶ್ ಬೇರೆಯದ್ದೇ ಇಮೇಜಿನಲ್ಲಿ ಅಬ್ಬರಿಸಿದ್ದರು. ಗೋದ್ರಾ ಮೂಲಕ ಅವರು ಮತ್ತೊಂದು ರೀತಿಯಲ್ಲಿ ಪ್ರೇಕ್ಷಕರನ್ನು ಬೆರಗಾಗಿಸಲು ರೆಡಿಯಾಗಿದ್ದಾರೆ. ಬಜೆಟ್ ವಿಚಾರದಲ್ಲಿಯೂ ಇದೊಂದು ಅದ್ದೂರಿ ಚಿತ್ರ. ಬಹುಶಃ ನೀನಾಸಂ ಸತೀಶ್ ಅವರ ವೃತ್ತಿ ಜೀವನದಲ್ಲಿಯೇ ಇದು ಬಿಗ್ ಬಜೆಟ್ ಚಿತ್ರ. ಇದೀಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರೋ ಗೋದ್ರಾ ಆಗಸ್ಟ್ ನಂತರದಲ್ಲಿ ತೆರೆ ಕಾಣುವ ಸನ್ನಾಹದಲ್ಲಿದೆ.