Sunday, 15th December 2019

ದೆಹಲಿಯಲ್ಲಿ ಹೃದಯಾಘಾತ – ಗೋವಾ ಡಿಜಿಪಿ ನಿಧನ

ನವದೆಹಲಿ: ಗೋವಾ ಪೊಲೀಸ್ ಮಹಾನಿರ್ದೇಶಕರಾಗಿದ್ದ ಪ್ರಣಬ್ ನಂದ ಅವರು ದೆಹಲಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

1988ರ ಅರುಣಾಚಲ ಪ್ರದೇಶ, ಮಿಜೋರಾಂ ಮತ್ತು ಇತರ ಕೇಂದ್ರಾಡಳಿತ ಪ್ರದೇಶ ಕೇಡರಿನ ಐಪಿಎಸ್ ಅಧಿಕಾರಿಯಾಗಿದ್ದ ಪ್ರಣಬ್ ನಂದ ಅವರು ದೀರ್ಘಕಾಲ ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು. ಇಂದು ಕಚೇರಿ ಕೆಲಸದ ಸಂಬಂಧ ದೆಹಲಿಗೆ ಆಗಮಿಸಿದ್ದ ವೇಳೆ ಹೃದಯಘಾತದಿಂದ ಮೃತಪಟ್ಟಿದ್ದಾರೆ.

ಪೊಲೀಸ್ ಅಧಿಕಾರಿಯಾಗಿದ್ದರೂ ಅವರು ಉತ್ತಮ ಹಾಡುಗಾರರಾಗಿದ್ದರು ಮತ್ತು ಜ್ಯೋತಿಷ್ಯ ಹೇಳುತ್ತಿದ್ದರು. ಅದಕ್ಕಿಂತಲೂ ಮುಖ್ಯವಾಗಿ ಗುಪ್ತಚರ ಇಲಾಖೆಯಲ್ಲಿದ್ದಾಗ ಗುಪ್ತ ಮಾಹಿತಿ ಪಡೆಯುವ ವಿಶೇಷ ಕೌಶಲ್ಯವನ್ನು ಹೊಂದಿದ್ದರು.

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ನಂದ ಅವರು ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು. ಇವರ ಪತ್ನಿ ಸುಂದರಿ ನಂದ ದೆಹಲಿ ಪೊಲೀಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

2001ರಲ್ಲಿ ದೆಹಲಿಯ ಡಿಸಿಪಿಯಾಗಿದ್ದ ನಂದ ಅವರನ್ನು ಡೆಪ್ಯುಟೆಶನ್ ಮೇಲೆ ಗುಪ್ತಚರ ಇಲಾಖೆಗೆ ಕಳುಹಿಸಲಾಗಿತ್ತು. 18 ವರ್ಷಗಳ ಕಾಲ ಗುಪ್ತಚರ ಇಲಾಖೆಯಲ್ಲಿದ್ದ ಇವರು ಈ ವರ್ಷ ಗೋವಾ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ನಂದ ಅವರು ಡಿಜಿಪಿ ಆಗಿದ್ದಾಗ ಈಶಾನ್ಯ ಭಾರತದ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್, ಅಸ್ಸಾಂ, ಅರುಣಾಚಲ ಪ್ರದೇಶದಲ್ಲಿ ಬಂಡುಕೋರರ ಕಾಟ ಮೀತಿ ಮೀರಿತ್ತು. ಈ ಸಂದರ್ಭದಲ್ಲಿ ನಂದ ಅವರೇ ಮುಖ್ಯ ಪಾತ್ರವಹಿಸಿ ಈ ಬಂಡುಕೋರರನ್ನು ಸಮಾಜಕ್ಕೆ ಕರೆ ತರುವ ಪ್ರಯತ್ನ ನಡೆಸಿ ಹಲವಾರು ಮಂದಿಯನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದರು.

ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲಿನಲ್ಲಿ ಭಾರತದ ರಾಯಭಾರ ಕಚೇರಿಯಲ್ಲೂ ನಂದ ಅವರು ಸೇವೆ ಸಲ್ಲಿಸಿದ್ದರು. 2008ರಲ್ಲಿ ಕಾಬೂಲಿನ ಜರ್ಮನ್ ರಾಯಭಾರ ಕಚೇರಿ ಬಳಿ ಆತ್ಮಹುತಿ ದಾಳಿಯಾದಾಗ ಅಫ್ಘಾನಿಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರನ್ನು ನಂದ ಅವರು ರಕ್ಷಣೆ ಮಾಡಿದ್ದರು.

Leave a Reply

Your email address will not be published. Required fields are marked *