Karnataka
ಹೊಲಕ್ಕೆ ಹೋದಾಗ ಕಾಣೆ- ಇಡೀ ರಾತ್ರಿ ಕಾಡಿನಲ್ಲಿ ಕಳೆದ ಪುಟ್ಟ ಕಂದಮ್ಮ

– 24 ಗಂಟೆ ಬಳಿಕ ಪೋಷಕರ ಮಡಿಲು ಸೇರಿದ ಮಗಳು
– ದಾರಿ ಅರಸುತ್ತ ಕಾಡಿನಲ್ಲಿ 5 ಕಿ.ಮೀ. ಒಳಗೆ ಸಾಗಿದ್ದ ಬಾಲಕಿ
ದಾವಣಗೆರೆ: ತಂದೆ, ತಾಯಿ ಜೊತೆ ಹೊಲಕ್ಕೆ ಹೋಗಿದ್ದ ಆರು ವರ್ಷದ ಬಾಲಕಿ ಕಾಣೆಯಾಗಿ, 24 ಗಂಟೆಗಳ ಕಾಲ ಕಾಡಿನಲ್ಲಿ ಕಾಲ ಕಳೆದು ನಂತರ ಪೋಷಕರಿಗೆ ಸಿಕ್ಕಿದ್ದಾಳೆ.
ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಮಲೆಬೆನ್ನೂರಿನ ಇಂದಿರಾನಗರದ ನಿವಾಸಿ ಅಸ್ಗರ್ ಹಾಗೂ ಪಾತಿಮಾ ದಂಪತಿಯ ಆರು ವರ್ಷದ ಜೋಯಾ ಕಾಡಿನಲ್ಲಿ ತಪ್ಪಿಸಿಕೊಂಡಿದ್ದು, 24 ಗಂಟೆಗಳ ಬಳಿಕ ಪೋಷಕರ ಕೈ ಸೇರಿದ್ದಾಳೆ. ಪೋಷಕರು ಕೊಮಾರನಹಳ್ಳಿ ಕಾಡಿನ ಬಳಿ ಇರುವ ಎರಡು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಹಾಕಿದ್ದು, ಕಳೆದ ಮೂರು ದಿನಗಳ ಹಿಂದೆ ಅದನ್ನು ಕಟಾವು ಮಾಡಲು ಹೋಗಿದ್ದರು. ಈ ಸಂದರ್ಭದಲ್ಲಿ ಆರು ವರ್ಷದ ಜೋಯಾ ಕೂಡ ಪೋಷಕರ ಜೊತೆ ಹೋಗಿ ಹೊಲದಲ್ಲಿ ದಾರಿ ತಪ್ಪಿ ಕಾಡಿನೊಳಗೆ ಹೋಗಿದ್ದಳು.
ಮಗು ಕಾಣೆಯಾಗುತ್ತಿದ್ದಂತೆ ಪೋಷಕರು ಹಾಗೂ ಊರಿನ ಗ್ರಾಮಸ್ಥರು 300 ಜನ ರಾತ್ರಿಯಿಡೀ ಕಾಡಿನಲ್ಲಿ ಹುಡುಕಾಟ ನಡೆಸಿದ್ದಾರೆ. ಪಾಲಕರು ಮೆಕ್ಕೆಜೋಳದ ತೆನೆ ಮುರಿಯಲು ಹೊಲಕ್ಕೆ ಹೋದಾಗ ಆಡುತ್ತಾ ಅರಣ್ಯ ಹೋಗಿದ್ದ ಬಾಲಕಿ. ದಾರಿ ಗೊತ್ತಾಗದೆ ಸುಮಾರು ಐದು ಕಿಲೋಮೀಟರ್ ಅರಣ್ಯದಲ್ಲಿ ಹೋಗಿದ್ದಳು. ಪಾಲಕರ ನಿರಂತರ ಹುಡುಕಾಟ ಪ್ರಯತ್ನವಾಗಿಯೂ ಸಿಕ್ಕಿರಲಿಲ್ಲ. ಬಳಿಕ ಅರಣ್ಯದಲ್ಲಿ ಅಳುತ್ತ ಕುಳಿತ ಬಾಲಕಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮುನ್ನಾ ನೋಡಿದ್ದು, ಅದೃಷ್ಟ ವಶಾತ್ ಯಾವುದೇ ಕಾಡು ಪ್ರಾಣಿಗಳ ಕೈಗೆ ಸಿಗದೆ ಬಾಲಕಿ ಸುರಕ್ಷಿತವಾಗಿ ಪೋಷಕರನ್ನು ಸೇರಿದ್ದಾಳೆ.
ಒಂಟಿಯಾಗಿದ್ದ ಮಗು ಕಾಡಿನಲ್ಲಿ ಬಂಡೆಯ ಪಕ್ಕದಲ್ಲೇ ಕುಳಿತಿದ್ದು, ಅರಣ್ಯಾಧಿಕಾರಿಗಳು ಮಗುವನ್ನು ನೋಡಿ ದರ್ಗಾದ ಬಳಿ ಕರೆದುಕೊಂಡು ಬಂದಿದ್ದರು. 24 ಗಂಟೆಗಳ ಕಾಲ ಒಂದು ರಾತ್ರಿ ಒಂದು ಹಗಲು ಮಗು ಏಕಾಂಗಿಯಾಗಿ ಕಾಡಿನಲ್ಲಿ ಕಳೆದಿದ್ದು, ಕಾಡು ಪ್ರಾಣಿಗಳಿಗೆ ಸಿಗದೆ ಜೀವಂತವಾಗಿ ಬಂದು, ಪೋಷಕರ ಮಡಿಲು ಸೇರಿದೆ. ಇದರಿಂದಾಗಿ ಮಗುವಿನ ಪೋಷಕರು ತಿಂಬಾ ಸಂತಸಗೊಂಡಿದ್ದಾರೆ.
