ಕಲ್ಯಾಣ ಮಂಟಪದ ಬಾತ್‍ರೂಮಿನಲ್ಲಿ ಅಪ್ರಾಪ್ತೆ ಮೇಲೆ ರೇಪ್‍ಗೈದ ಯುವಕ

ಕೋಲ್ಕತ್ತಾ: ಕಲ್ಯಾಣ ಮಂಟಪದ ಬಾತ್‍ರೂಮಿನಲ್ಲಿ ಆರು ವರ್ಷದ ಬಾಲಕಿ ಮೇಲೆ 19 ವರ್ಷದ ಯುವಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಕೋಲ್ಕತ್ತಾದ ವೆಸ್ಟ್ ಪೋರ್ಟ್ ಪ್ರದೇಶದಲ್ಲಿ ಪ್ರಕರಣ ನಡೆದಿದ್ದು, ಮಗಳ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯು ಕಲ್ಯಾಣ ಮಂಟಪದಲ್ಲಿ ಕೆಲಸಗಾರನಾಗಿದ್ದು, ಬಾಲಕಿಯನ್ನು ಬಾತ್‍ರೂಮಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ನಂತರ ಘಟನೆ ಕುರಿತು ಬಾಲಕಿ ತನ್ನ ತಾಯಿಗೆ ತಿಳಿಸಿದ್ದು, ಪ್ರಕರಣ ದಾಖಲಿಸಿದ್ದಾರೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಹಾಗೂ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕೋಲ್ಕತ್ತಾ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಮುರಳಿಧರ್ ಶರ್ಮಾ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ 61 ವರ್ಷದ ವೃದ್ಧ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಮುಂಬೈನ ಕುರ್ಲಾ ಸುಬರ್ನಿನಲ್ಲಿ ನಡೆದಿತ್ತು. ಬಾಲಕಿ ಸ್ನೇಹಿತರೊಂದಿಗೆ ಪಕ್ಕದ ಮನೆಯ ಬಳಿ ಆಟವಾಡುತ್ತಿದ್ದಾಗ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.

ನಂತರ ಮೂರು ದಿನಗಳ ಕಾಲ ಆರೋಪಿ ಬಾಲಕಿ ಮೇಲೆ ಹಲ್ಲೆ ನಡೆಸಿದ್ದ. ಚಾಕೊಲೇಟ್ ನೀಡಿ ಬಾಲಕಿಯನ್ನು ಮನವೊಲಿಸಿ ಅತ್ಯಾಚಾರ ಎಸಗಿದ್ದ. ಘಟನೆ ನಂತರ ಬಾಲಕಿಗೆ ನೋವು ಕಾಣಿಸಿಕೊಂಡಿದ್ದು, ಆಗ ಮನೆಯವರಿಗೆ ತಿಳಿಸಿದ್ದಳು. ಈ ಸಂಬಂಧ ಮುಂಬೈನ ವಿನೋಭಾ ಭಾವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ವೈದ್ಯಕೀಯ ಪರೀಕ್ಷೆ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದು ಖಚಿತವಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

Leave a Reply

Your email address will not be published. Required fields are marked *