ಇನ್‍ಸ್ಟಾಗ್ರಾಂ ಗೆಳೆಯನಿಗಾಗಿ ಮನೆಯಲ್ಲಿ ಚಿನ್ನ ಕದ್ದ ಚೋರಿ

ಹೈದಾರಾಬಾದ್: ಇನ್‍ಸ್ಟಾಗ್ರಾಂ ಗೆಳೆಯನಿಗಾಗಿ ಯುವತಿ ತನ್ನ ಮನೆಯಲ್ಲಿ ಚಿನ್ನ ಕದ್ದು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ ಚಿನ್ನ ಕಾಣದಿದ್ದಾಗ ಯುವತಿಯ ಅಜ್ಜ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ತನಿಖೆಯಲ್ಲಿ ಮೊಮ್ಮಗಳೇ ಕಳ್ಳತನ ಮಾಡಿರವ ವಿಚಾರ ಬೆಳಕಿಗೆ ಬಂದಿದೆ.

ಪೂರ್ವ ಗೋದಾವರಿ ಜಿಲ್ಲೆಯ ಶಾಸಿತ್ ವ್ಯಾಪ್ತಿಯ ಯನಮ್ ನಿವಾಸಿಯಾಗಿರುವ ಕಾರಿ ಸತೀಶ್ ಎಂಬಾತನಿಗೆ ಯುವತಿ ಚಿನ್ನ ನೀಡಿದ್ದಳು. ಮೊದಲಿಗೆ ಇಬ್ಬರಿಗೂ ಇನ್‍ಸ್ಟಾಗ್ರಾಂನಲ್ಲಿ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಒಂದು ವರ್ಷದ ಬಳಿಕ ಇಬ್ಬರು ಡೇಟಿಂಗ್ ನಲ್ಲಿದ್ದರು. ಯುವತಿ ತನ್ನ ಅಜ್ಜನ ಮನೆಯಲ್ಲಿ ವಾಸವಾಗಿದ್ದಳು. ಒಂದು ದಿನ ಸತೀಶ್ ತಾನು ಕಾರ್ ಖರೀದಿ ಮಾಡುತ್ತಿದ್ದು, ಹಣ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ.

ಗೆಳೆಯನ ಮಾತಿಗೆ ಒಲ್ಲೆ ಎನ್ನದ ಯುವತಿ ಮನೆಯಲ್ಲಿದ್ದ 200 ಗ್ರಾಂ ಚಿನ್ನವನ್ನು ಕದ್ದು ಸತೀಶನಿಗೆ ನೀಡಿದ್ದಾಳೆ. ಪ್ರೇಯಸಿ ನೀಡಿದ ಒಡೆವೆ ಮಾಡಿ ಸತೀಶ್ ಕಾರ್ ಸಹ ಖರೀದಿ ಮಾಡಿದ್ದಾನೆ.

ಮನೆಯಲ್ಲಿ ಚಿನ್ನ ಕಾಣದಿದ್ದಾಗ ಯುವತಿಯ ಅಜ್ಜ ಏಪ್ರಿಲ್ 14ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ನೆರೆ ಮನೆಯ ಮಹಿಳೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನೆರೆ ಮನೆಯ ಮಹಿಳೆ ಸೇರಿದಂತೆ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿದ್ದರು.

ವಿಚಾರಣೆಯಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಯುವತಿ ಮನೆಯ ಎಲ್ಲರ ಕಾಲ್ ಡಿಟೇಲ್ಸ್ ಕಲೆ ಹಾಕಿದ್ದಾರೆ. ಮನೆಯಲ್ಲಿ ಕಳ್ಳತನ ನಡೆದ ದಿನ ಯುವತಿ ಸತೀಶ್ ಜೊತೆ ಸಂಪರ್ಕದಲ್ಲಿದ್ದಳು ಎಂಬುವುದು ತಿಳಿದು ಬಂದಿದೆ. ಅನುಮಾನಗೊಂಡ ಪೊಲೀಸರು ಯುವತಿ ಮತ್ತು ಸತೀಶ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.

Leave a Reply

Your email address will not be published. Required fields are marked *