Monday, 24th February 2020

Recent News

ಮದುವೆಗೆ ಮುಂಚೆ ಮಾತಾಡಿದ್ದಕ್ಕೆ ಯುವತಿ, ಭಾವಿ ಪತಿಯ ಕೊಲೆ

ಕರಾಚಿ: ಮದುವೆಗೆ ಮುಂಚೆಯೇ ಮಾತನಾಡಿದ್ರು ಎಂಬ ಕಾರಣಕ್ಕೆ ಮರ್ಯಾದಾ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಯುವತಿ ಹಾಗೂ ಆಕೆಯ ಭಾವಿ ಪತಿಯನ್ನು ಯುವತಿಯ ಸೋದರಮಾವನೇ ಕೊಲೆ ಮಾಡಿದ್ದಾನೆ.

ಮೃತ ಯುವತಿ ನಜ್ರೀನ್ ತನ್ನ ಭಾವಿ ಪತಿ ಶಾಹಿದ್‍ರೊಂದಿಗೆ ಇಲ್ಲಿನ ಗೋಟ್ಕಿ ನಗರ ಸಮೀಪದ ನಯೀ ವಹೀ ಗ್ರಾಮದಲ್ಲಿ ಮಾತನಾಡ್ತಿದ್ದಾಗ ಆಕೆಯ ಸೋದರಮಾವ ಇದನ್ನ ನೋಡಿದ್ದರು. ಇದರಿಂದ ಕೋಪಗೊಂಡ ಆತ ಗುಂಡಿನ ದಾಳಿ ನಡೆಸಿ ಇಬ್ಬರನ್ನೂ ಕೊಂದಿದ್ದಾನೆಂದು ವರದಿಯಾಗಿದೆ.

ಪೊಲೀಸರ ಪ್ರಕಾರ ಮೃತ ಯುವಕ, ಯುವತಿ ಸಂಬಂಧಿಗಳೇ ಆಗಿದ್ದು, ಇದು ಮರ್ಯಾದಾ ಹತ್ಯೆ ಪ್ರಕರಣ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಸೋದರ ಮಾವಂದಿರಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಕಳೆದ ತಿಂಗಳು ಪಾಕಿಸ್ತಾನದ ಯುವಕನೊಬ್ಬ ಕುಟುಂಬದ ಸಮ್ಮತಿಯಿಲ್ಲದೆ ಮದುವೆಯಾಗಿದ್ದಾರೆಂದು ರಾವಲ್‍ಪಿಂಡಿಯಲ್ಲಿ ತನ್ನ ತಂಗಿ ಹಾಗೂ ಆಕೆಯ ಗಂಡನನ್ನು ಗುಂಡಿಟ್ಟು ಕೊಲೆ ಮಾಡಿದ್ದ. ನವೆಂಬರ್‍ನಲ್ಲಿ ಸಿಂಧ್ ಪ್ರಾಂತ್ಯದಲ್ಲಿ ಹಿರಿಯರ ಸಮ್ಮತಿಯಿಲ್ಲದೆ ಹೊಸದಾಗಿ ಮದುವೆಯಾಗಿದ್ದ ಜೋಡಿಯನ್ನು ಗ್ರಾಮದ ಹಿರಿಯರ ಆದೇಶದಂತೆ ಕೊಲೆ ಮಾಡಲಾಗಿತ್ತು ಎಂದು ವರದಿಯಾಗಿದೆ.

ಕಳೆದ ದಶಕದಲ್ಲಿ ಪಾಕಿಸ್ತಾನದಲ್ಲಿ ವರ್ಷಕ್ಕೆ 650 ಮರ್ಯಾದಾ ಹತ್ಯೆಗಳು ನಡೆದಿರುವ ಬಗ್ಗೆ ಪಾಕಿಸ್ತಾನ ಮಾನವ ಹಕ್ಕುಗಳ ಆಯೋಗ ವರದಿ ನೀಡಿದೆ. ಆದ್ರೆ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರದಿರುವ ಕಾರಣ ಇದರ ಸಂಖ್ಯೆ ಮತ್ತಷ್ಟು ಹೆಚ್ಚಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

Leave a Reply

Your email address will not be published. Required fields are marked *