Connect with us

Crime

ಮನೆಯವರ ಮುಂದೆಯೇ ಅವಮಾನ – ಪ್ರೀತಿಸಿದ ಯುವಕ ಆತ್ಮಹತ್ಯೆ, ಯುವತಿ ಗಂಭೀರ

Published

on

ತಿರುವನಂತಪುರಂ: ಪ್ರೀತಿ ವಿಚಾರವಾಗಿ ಕುಟುಂಬದ ಮುಂದೆಯೇ ಅವಮಾನ ಮಾಡಿದ್ದಕ್ಕೆ ಕೇರಳದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಂತ್ರಸ್ತನನ್ನು ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್ ಮೂಲದ ಶಾಹೀರ್ ಎಂದು ಗುರುತಿಸಲಾಗಿದೆ. ಸ್ಥಳೀಯರ ಮುಂದೆ ತನ್ನನ್ನು ಹಾಗೂ ತನ್ನ ಕುಟುಂಬವನ್ನು ಅವಮಾನ ಮಾಡಿದ್ದಾರೆ ಎಂದು ನೊಂದುಕೊಂಡು ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಾಹೀರ್ ಸ್ಥಳೀಯ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇದು ಹುಡುಗಿಯರ ಸಂಬಂಧಿಕರಿಗೆ ತಿಳಿದಿದೆ. ಆಗ ಹುಡುಗಿಯ ಕಡೆಯವರು ಆತನನ್ನು ಸುತ್ತುವರಿದು ಯುವಕನ ಕುಟುಂಬದವರ ಮುಂದೆಯೇ ಆತನನ್ನು ಥಳಿಸಿದ್ದಾರೆ. ಅಲ್ಲದೆ ನಮ್ಮ ಕುಟುಂಬದ ಹುಡುಗಿಯನ್ನೇ ಪ್ರೀತಿಸಲು ಧೈರ್ಯ ಮಾಡಿದ್ದೀಯಾ ಎಂದು ಆತನ ಹೆತ್ತವರ ಮುಂದೆಯೇ ಹೊಡೆದಿದ್ದಾರೆ.

ಈ ವೇಳೆ ಶಾಹೀರ್ ಸಹೋದರ ಮಧ್ಯ ಪ್ರವೇಶಿಸಲು ಪ್ರಯತ್ನಿಸಿದಾಗ, ಹುಡುಗಿಯ ಸಂಬಂಧಿಕರು ಅವನನ್ನೂ ಹೊಡೆದಿದ್ದಾರೆ. ಶಾಹೀರ್ ಸಹೋದರನಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರ ಸಂಬಂಧದ ಕುರಿತು ಬಹಿರಂಗವಾಗಿದ್ದಕ್ಕೆ ಹಾಗೂ ಹಿಂಸಾಚಾರ ನಡೆದಿದ್ದನ್ನು ಸಹಿಸಲಾಗದೆ ಹುಡುಗಿ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾಳೆ. ಅವಳ ಸ್ಥಿತಿ ಸಹ ಗಂಭೀರವಾಗಿದೆ. ಅತ್ತ ಶಾಹೀರ್ ಸಹ ತನ್ನ ಕುಟುಂಬವನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಕ್ಕಾಗಿ ನೋಂದುಕೊಂಡು ಪ್ರಾಣ ಬಿಡುವುದನ್ನು ಹೊರತುಪಡಿಸಿ ಬೇರೆ ದಾರಿ ಇಲ್ಲ ಎಂದು ನಿರ್ಧರಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅವನ ಸಾವಿನ ನಂತರ ಮಲಪ್ಪುರಂ ಪೊಲೀಸರು 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಎಲ್ಲದರ ಮಧ್ಯೆ 22 ವರ್ಷದ ಯುವಕ ಮಾತ್ರ ಮಾಣ ಕಳೆದುಕೊಂಡಿದ್ದಾನೆ. ಐಪಿಸಿ ಸೆಕ್ಷನ್‍ನ ವಿವಿಧ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಪ್ರಸ್ತುತ ಮಾಹಿತಿ ಪ್ರಕಾರ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರು ಇವರೇನಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.